ಕ್ಷಣಕ್ಷಣಕ್ಕೂ ಟ್ವಿಸ್ಟ್ - ಸಿದ್ದರಾಮಯ್ಯ ದಿಢೀರ್ ರಾಜೀನಾಮೆ ವದಂತಿ! ಲೋಕಭವನದ ಬಳಿ ಹೈ-ವೋಲ್ಟೇಜ್ ಸಸ್ಪೆನ್ಸ್!!

ಕರ್ನಾಟಕ ರಾಜಕೀಯದಲ್ಲಿ ಈಗ ಕ್ಷಣಕ್ಷಣಕ್ಕೂ ಟ್ವಿಸ್ಟ್‌ ಸಿಗುತ್ತಿದೆ. ಕಳೆದ ಕೆಲವು ದಿನಗಳಿಂದ ನಡೀತಿದ್ದ ಒಳಗುದಿ ಈಗ ಸ್ಪೋಟಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಇವತ್ತೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಇಡೀ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಮಧ್ಯಾಹ್ನದ ಬಳಿಕ ಸಿಎಂ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂಬ ವದಂತಿ ದಟ್ಟವಾಗುತ್ತಿದ್ದಂತೆ, ಬೆಂಗಳೂರಿನ ಲೋಕಭವನದ ಸುತ್ತಮುತ್ತ ರಾಜಕೀಯ ಚಟುವಟಿಕೆಗಳು ರಾಕೆಟ್ ವೇಗದಲ್ಲಿ ಗರಿಗೆದರಿವೆ.

ಸಿಎಂ ರೇಸ್‌ನಲ್ಲಿ ದಲಿತ ಕಾರ್ಡ್ ಉರುಳಿಸಿದ ಸಿದ್ದರಾಮಯ್ಯ ಬಣ
ಸಿಎಂ ರೇಸ್‌ನಲ್ಲಿ ದಲಿತ ಕಾರ್ಡ್ ಉರುಳಿಸಿದ ಸಿದ್ದರಾಮಯ್ಯ ಬಣ

ಲೋಕಭವನದ ಬಳಿ ಬಿಗಿ ಭದ್ರತೆ: ಕಾರ್ಯಕರ್ತರ ದಂಡು

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬಹುದು ಎಂಬ ಸುದ್ದಿ ಹರಡುತ್ತಿದ್ದಂತೆ ಅವರ ಅಭಿಮಾನಿಗಳು, ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಲೋಕಭವನದತ್ತ ಮುನ್ನುಗ್ಗುತ್ತಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಲೋಕಭವನದ ಸುತ್ತಮುತ್ತ ಭಾರಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ. ಎಲ್ಲರಲ್ಲೂ ಈಗ ಒಂದೇ ಪ್ರಶ್ನೆ, "ಇವತ್ತು ಸಿದ್ದು ರಾಜೀನಾಮೆ ಪಕ್ಕಾನಾ?" ಅಂತ.

ರಾಜೀನಾಮೆ ಪ್ರಕ್ರಿಯೆ ಹೇಗೆ ನಡೆಯಲಿದೆ? ಟ್ವಿಸ್ಟ್ ಇಲ್ಲಿದೆ

ರಾಜಕೀಯ ಮೂಲಗಳ ಪ್ರಕಾರ, ಸದ್ಯಕ್ಕೆ ರಾಜ್ಯಪಾಲರು ಬೆಂಗಳೂರಿನಲ್ಲಿ ಇಲ್ಲ, ಅವರು ಬೇರೆಡೆ ಪ್ರವಾಸದಲ್ಲಿದ್ದಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ನೇರವಾಗಿ ರಾಜ್ಯಪಾಲರ ಕಾರ್ಯದರ್ಶಿಯಾದ ಪ್ರಭುಶಂಕರ್ ಅವರಿಗೆ ಸಲ್ಲಿಸಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ರೂಲ್ಸ್ ಪ್ರಕಾರ ಅಂತಿಮವಾಗಿ ರಾಜ್ಯಪಾಲರೇ ರಾಜೀನಾಮೆಯನ್ನು ಅಂಗೀಕರಿಸಬೇಕಾಗುತ್ತದೆ. ನಾಳೆ ಉಪರಾಷ್ಟ್ರಪತಿಗಳು ಕರ್ನಾಟಕಕ್ಕೆ ಬರುತ್ತಿರುವುದರಿಂದ, ರಾಜ್ಯಪಾಲರು ಇವತ್ತೇ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಅವರು ಬಂದ ಮೇಲೆಯೇ ಈ ರಾಜಕೀಯ ಹೈಡ್ರಾಮಾಗೆ ಒಂದು ಅಧಿಕೃತ ಕ್ಲೈಮ್ಯಾಕ್ಸ್ ಸಿಗಲಿದೆ.

ಸಿಎಂ ರೇಸ್‌ಗೆ ಪರಮೇಶ್ವರ್ ಎಂಟ್ರಿ! ಡಿಕೆಶಿಗೆ ಶಾಕ್?

ಇಲ್ಲಿಯವರೆಗೆ ಮುಂದಿನ ಸಿಎಂ ಡಿ.ಕೆ.ಶಿವಕುಮಾರ್ ಅವರೇ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಸದ್ದಿಲ್ಲದೆ ಮತ್ತೊಂದು ಬಿಗ್ ಟ್ವಿಸ್ಟ್ ಎದುರಾಗಿದೆ! ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರು ದಿಢೀರನೆ ಸಿಎಂ ರೇಸ್‌ನಲ್ಲಿ ಮುಂಚೂಣಿಗೆ ಬಂದಿದೆ.

ಇದರ ಹಿಂದೆ ಸಿದ್ದರಾಮಯ್ಯ ಬಣದ ಮಾಸ್ಟರ್‌ಪ್ಲ್ಯಾನ್ ಇದೆ ಎನ್ನಲಾಗುತ್ತಿದೆ. ಡಿಕೆಶಿ ಸಿಎಂ ಆಗುವುದನ್ನು ತಪ್ಪಿಸಲು ಸಿದ್ದರಾಮಯ್ಯ ಬಣ ಈಗ 'ದಲಿತ ಸಿಎಂ' ಕಾರ್ಡ್ ಉರುಳಿಸಿದೆ! "ಈ ಬಾರಿ ದಲಿತ ನಾಯಕನಿಗೆ ಸಿಎಂ ಆಗಲು ಅವಕಾಶ ಕೊಡಬೇಕು" ಎಂದು ಪಟ್ಟು ಹಿಡಿದಿರುವ ಕೆಲವು ಶಾಸಕರು, ಇಂದು ನಡೆಯಲಿರುವ ಸಿಎಲ್‌ಪಿ (ಕಾಂಗ್ರೆಸ್ ಶಾಸಕಾಂಗ ಪಕ್ಷ) ಸಭೆಯಲ್ಲಿ ಪರಮೇಶ್ವರ್ ಹೆಸರನ್ನು ಪ್ರಸ್ತಾಪಿಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಡುವುದು ಗ್ಯಾರಂಟಿ ಆಗ್ತಾ ಇದ್ದಂತೆ, ತೆರೆಮರೆಯಲ್ಲಿ ಪರ್ಯಾಯ ನಾಯಕತ್ವದ ಫೈಟ್ ಜೋರಾಗಿದೆ.

ಪರಮೇಶ್ವರ್ ನಿವಾಸಕ್ಕೆ ಶಾಸಕ ರಂಗನಾಥ್ ದಿಢೀರ್ ಭೇಟಿ!

ರಾಜಕೀಯದ ಈ ಬಿಸಿ ನಡುವೆ ಮತ್ತೊಂದು ಇಂಟರೆಸ್ಟಿಂಗ್ ಘಟನೆ ನಡೆದಿದೆ. ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಹೆಚ್.ಡಿ. ರಂಗನಾಥ್ ಅವರು ಸ್ವತಃ ತಾವೇ ಕಾರು ಡ್ರೈವ್ ಮಾಡಿಕೊಂಡು ಗೃಹ ಸಚಿವ ಪರಮೇಶ್ವರ್ ನಿವಾಸಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸುಮಾರು 15 ನಿಮಿಷಗಳ ಕಾಲ ಇಬ್ಬರ ನಡುವೆ ಸೀಕ್ರೆಟ್ ಮಾತುಕತೆ ನಡೆದಿದೆ. ಆದರೆ, ಮೀಟಿಂಗ್ ಮುಗಿಸಿ ಹೊರಬಂದ ರಂಗನಾಥ್ ಮಾಧ್ಯಮಗಳ ಪ್ರಶ್ನೆಗೆ ಕೇವಲ ‘ನೋ ಕಾಮೆಂಟ್’ ಎಂದು ಹೇಳಿ ಜಾರಿಕೊಂಡರು. ನಾಯಕರ ಈ ನಿಗೂಢ ಮೌನ ಮತ್ತು ದಿಢೀರ್ ಭೇಟಿಗಳು, ಒಳಗೊಳಗೆ ಏನೋ ದೊಡ್ಡ ಪ್ಲ್ಯಾನ್ ನಡೀತಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ.

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ 'ಕುರ್ಚಿ ಯುದ್ಧ' ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಸಿದ್ದರಾಮಯ್ಯ ಇವತ್ತೇ ರಾಜೀನಾಮೆ ಕೊಡ್ತಾರಾ? ಒಂದು ವೇಳೆ ಕೊಟ್ಟರೆ ಹೈಕಮಾಂಡ್ ಡಿಕೆಶಿಗೆ ಪಟ್ಟ ಕಟ್ಟುತ್ತಾ ಅಥವಾ ಸಿದ್ದರಾಮಯ್ಯ ಬಣದ ಒತ್ತಡಕ್ಕೆ ಮಣಿದು ಪರಮೇಶ್ವರ್ ಅವರನ್ನು ಸಿಎಂ ಮಾಡುತ್ತಾ? ಈ ಎಲ್ಲಾ ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ಇವತ್ತು ಸಂಜೆಯೊಳಗೆ ಉತ್ತರ ಸಿಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ರಾಜ್ಯ ರಾಜಕಾರಣದ ಈ ಹೈ-ವೋಲ್ಟೇಜ್ ಸಸ್ಪೆನ್ಸ್ ಥ್ರಿಲ್ಲರ್ ನೋಡ್ತಾ ಇರಬೇಕಷ್ಟೇ!

Latest News