Mar 5, 2026 Languages : ಕನ್ನಡ | English

ಬಳ್ಳಾರಿಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಪ್ರಗತಿಯ ಅಸಲಿ ಚಿತ್ರಣ ಇಲ್ಲಿದೆ !!

ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಗಣಿ ಜಿಲ್ಲೆ ಬಳ್ಳಾರಿಗೆ ನೀಡಿದ ಭರವಸೆಗಳು ಮತ್ತು ಅವುಗಳ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಈ ಲೇಖನದಲ್ಲಿ ವಿವರವಾಗಿ ನೋಡೋಣ. ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ಕಳೆದ ಬಜೆಟ್‌ನಲ್ಲಿ ಒಟ್ಟು 7 ಪ್ರಮುಖ ಯೋಜನೆಗಳನ್ನು ಘೋಷಿಸಲಾಗಿತ್ತು. ಈ ಯೋಜನೆಗಳಲ್ಲಿ ಕೆಲವು ಯಶಸ್ವಿಯಾಗಿ ಜಾರಿಯಾಗಿದ್ದರೆ, ಇನ್ನು ಕೆಲವು ಕೇವಲ ಕಾಗದದ ಮೇಲೆ ಉಳಿದಿವೆ.

ಬಳ್ಳಾರಿ ಬಜೆಟ್ ರಿಪೋರ್ಟ್ ಕಾರ್ಡ್
ಬಳ್ಳಾರಿ ಬಜೆಟ್ ರಿಪೋರ್ಟ್ ಕಾರ್ಡ್

ಜಾರಿಯಾದ ಪ್ರಮುಖ ಯೋಜನೆಗಳು

1. ಆರೋಗ್ಯ ಕ್ಷೇತ್ರದಲ್ಲಿ ಎಚ್‌ಪಿವಿ ಲಸಿಕೆ: ಜಿಲ್ಲೆಯ 14 ವರ್ಷದೊಳಗಿನ ಸುಮಾರು 16 ಸಾವಿರ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಅತ್ಯಂತ ಬೆಲೆಬಾಳುವ ಎಚ್‌ಪಿವಿ (HPV) ಲಸಿಕೆಯನ್ನು ಉಚಿತವಾಗಿ ನೀಡುವ ಯೋಜನೆ ಜಾರಿಗೆ ಬಂದಿದೆ. ಈಗಾಗಲೇ ಜಿಲ್ಲೆಗೆ 5,500ಕ್ಕೂ ಹೆಚ್ಚು ಲಸಿಕೆಗಳು ಪೂರೈಕೆಯಾಗಿದ್ದು, ಮಾರ್ಚ್ 11 ರಿಂದ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ಸಿಗಲಿದೆ.

2. ಶ್ರವಣದೋಷವುಳ್ಳ ಮಕ್ಕಳ ಶಾಲೆಯ ಮೇಲ್ದರ್ಜೆ:

ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿಸುವ ಭರವಸೆ ಈಡೇರಿದೆ. ಈ ವರ್ಷದಿಂದಲೇ 8ನೇ ತರಗತಿಗೆ ಪ್ರವೇಶಾತಿ ಆರಂಭವಾಗಿದೆ. ಆದರೆ, ಇಲ್ಲಿ ಹೊಸ ಕಟ್ಟಡದ ಕೊರತೆ ಮತ್ತು ಶಿಕ್ಷಕರ ಅಭಾವ ಇನ್ನೂ ಮುಂದುವರಿದಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

3. ಹಾಸ್ಟೆಲ್ ಸೌಲಭ್ಯ:

ನಗರದ ರೇಡಿಯೋ ಪಾರ್ಕ್ ಪ್ರದೇಶದಲ್ಲಿ ಎಸ್ಸಿ-ಎಸ್ಟಿ ಮತ್ತು ಒಬಿಸಿ ಹಾಸ್ಟೆಲ್‌ಗಳನ್ನು ಪದವಿಪೂರ್ವ (PUC) ವಿದ್ಯಾರ್ಥಿಗಳ ಕಾಲೇಜು ಹಾಸ್ಟೆಲ್‌ಗಳನ್ನಾಗಿ ಪರಿವರ್ತಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜಿಲ್ಲಾ ಕೇಂದ್ರದಲ್ಲಿ ವ್ಯಾಸಂಗ ಮಾಡಲು ದೊಡ್ಡ ಮಟ್ಟದ ಅನುಕೂಲವಾಗಿದೆ.

ಪ್ರಗತಿಯಲ್ಲಿರುವ ಮತ್ತು ಬಾಕಿ ಇರುವ ಯೋಜನೆಗಳು

ಕೌಶಲ್ಯ ತರಬೇತಿ ಕೇಂದ್ರ (GTTC): ಕಂಪ್ಲಿಯಲ್ಲಿ ಜಿಟಿಟಿಸಿ ಕೇಂದ್ರ ಸ್ಥಾಪನೆಗೆ ಜಾಗ ಗುರುತಿಸುವ ಪ್ರಕ್ರಿಯೆ ಮುಗಿದಿದ್ದು, ಕೆಕೆಆರ್‌ಡಿಬಿ ಅನುಮತಿಗಾಗಿ ಕಾಯಲಾಗುತ್ತಿದೆ. ಮುಂದಿನ ವರ್ಷದಿಂದ ಈ ಕೇಂದ್ರವು ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಇದೇ ವೇಳೆ ಬಳ್ಳಾರಿಯ ರೇಡಿಯೋ ಪಾರ್ಕ್‌ನಲ್ಲಿ ಈಗಾಗಲೇ ಒಂದು ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ತಾಂತ್ರಿಕ ತರಬೇತಿ ನೀಡುತ್ತಿದೆ.

ಕರ್ನಾಟಕ ಪಬ್ಲಿಕ್ ಶಾಲೆಗಳು:

ಜಿಲ್ಲೆಯ 50 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕಾಗಿ 200 ಕೋಟಿ ರೂಪಾಯಿ ಘೋಷಿಸಲಾಗಿತ್ತು. ಆದರೆ, ಇದಕ್ಕೆ ಸರ್ಕಾರ ನೇರವಾಗಿ ಹಣ ನೀಡುವ ಬದಲು ಗಣಿ ನಿಧಿ (KMEARC) ಮತ್ತು ಕೆಕೆಆರ್‌ಡಿಬಿ ಅನುದಾನವನ್ನು ಬಳಸಿಕೊಳ್ಳುತ್ತಿದೆ. ಇದು ಜಿಲ್ಲೆಯ ಸ್ವಂತ ಸಂಪನ್ಮೂಲವನ್ನೇ ಯೋಜನೆಗೆ ಬಳಸಿಕೊಂಡಂತಾಗಿದೆ.

ಕೈಗೂಡದ ಭರವಸೆಗಳು:

ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಸ್ಥಾಪನೆ, ಸಾವಿರಾರು ಶಿಕ್ಷಕರ ನೇಮಕಾತಿ ಮತ್ತು ಹೈನುಗಾರಿಕೆಗೆ ಪೂರಕವಾದ 10 ಕೋಟಿ ರೂಪಾಯಿ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಈ ದೊಡ್ಡ ಯೋಜನೆಗಳು ಇನ್ನೂ ಕಡತಗಳಲ್ಲೇ ಉಳಿದಿರುವುದು ಜಿಲ್ಲೆಯ ಜನರಿಗೆ ನಿರಾಸೆ ಮೂಡಿಸಿದೆ.

ಸಣ್ಣಪುಟ್ಟ ಯೋಜನೆಗಳು ಜಾರಿಯಾಗಿವೆಯಾದರೂ, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ದೊಡ್ಡ ಮಟ್ಟದ ಆರ್ಥಿಕ ನೆರವು ಈ ಬಜೆಟ್‌ನಲ್ಲಿ ಕಂಡುಬಂದಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಬಾಕಿ ಇರುವ ಯೋಜನೆಗಳ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ.

Latest News