ರಾಜಕೀಯದ ‘ಪುಣ್ಯಕೋಟಿ’ ಸಿದ್ದರಾಮಯ್ಯ - ಹೈಕಮಾಂಡ್‌ಗೆ ಕೊಟ್ಟ ಮಾತು ಉಳಿಸಿಕೊಂಡು ಸಿಎಂ ಗದ್ದುಗೆ ತ್ಯಜಿಸಿದ ಸಿದ್ದು!!

ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಂಚಿಕೆಯ ಜಗಳದಿಂದಲೇ ಒಂದೊಂದೇ ರಾಜ್ಯಗಳನ್ನು ಕಳೆದುಕೊಳ್ಳುತ್ತಿರುವ ಹೊತ್ತಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ದೇಶದ ರಾಜಕಾರಣಕ್ಕೇ ಹೊಸ ಮಾದರಿಯಾಗಿ ನಿಂತಿದ್ದಾರೆ. ಹೈಕಮಾಂಡ್‌ಗೆ ಕೊಟ್ಟ ಮಾತಿನಂತೆ, ಒಂದು ಕ್ಷಣವೂ ಯೋಚಿಸದೆ ಅಧಿಕಾರ ಹಸ್ತಾಂತರಕ್ಕೆ ಒಪ್ಪಿ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರ ನಡೆಗೆ ಎಐಸಿಸಿ ನಾಯಕರು ಅಕ್ಷರಶಃ ದಿಗ್ಭ್ರಮೆಗೊಂಡಿದ್ದಾರೆ. ರಾಜಕೀಯದಲ್ಲಿ ಕೊಟ್ಟ ಮಾತಿಗೆ ತಪ್ಪಿ ನಡೆಯದ ‘ನಂಬಿಕೆ ರಾಮಯ್ಯ’ ಇವತ್ತು ರಾಜ್ಯ ರಾಜಕಾರಣದ ‘ಪುಣ್ಯಕೋಟಿ’ಯಾಗಿ ಹೊರಹೊಮ್ಮಿದ್ದಾರೆ.

ಗೆಹ್ಲೋಟ್, ಬಘೇಲ್ ಮಾಡದ ಸಾಹಸ ಮಾಡಿದ ಸಿದ್ದಣ್ಣ | Photo Credit: AI
ಗೆಹ್ಲೋಟ್, ಬಘೇಲ್ ಮಾಡದ ಸಾಹಸ ಮಾಡಿದ ಸಿದ್ದಣ್ಣ | Photo Credit: AI

ಪ್ರಿಯಾಂಕಾ ಗಾಂಧಿ ಸಾಕ್ಷಿಯಾಗಿದ್ದರೂ ಒಪ್ಪಂದ ಮುರಿದಿದ್ದ ಛತ್ತೀಸ್‌ಗಢದ ಬಘೇಲ್!

ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಈ ಅಧಿಕಾರ ಹಂಚಿಕೆಯ ಸೂತ್ರ (Power Sharing Formula) ಎನ್ನುವುದು ಯಾವಾಗಲೂ ಅತಿ ದೊಡ್ಡ ತಲೆನೋವು. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದರೆ ಛತ್ತೀಸ್‌ಗಢ. ಅಲ್ಲಿ ಭೂಪೇಶ್ ಬಘೇಲ್ ಮತ್ತು ಟಿ.ಎಸ್. ಸಿಂಗ್ ದೇವ್ ನಡುವೆ ತಲಾ 30 ತಿಂಗಳುಗಳ ಕಾಲ ಸಿಎಂ ಹುದ್ದೆ ಹಂಚಿಕೊಳ್ಳುವ ಒಪ್ಪಂದ ನಡೆದಿತ್ತು. ಖುದ್ದು ಪ್ರಿಯಾಂಕಾ ಗಾಂಧಿ ಅವರೇ ಈ ಒಪ್ಪಂದಕ್ಕೆ ಸಾಕ್ಷಿಯಾಗಿದ್ದರು. ಆದರೆ, 30 ತಿಂಗಳು ಮುಗಿದ ಮೇಲೆಯೂ ಭೂಪೇಶ್ ಬಘೇಲ್ ಕೊನೆಯ ತನಕ ಸಿಂಗ್ ದೇವ್ ಅವರಿಗೆ ಅಧಿಕಾರ ಬಿಟ್ಟುಕೊಡಲೇ ಇಲ್ಲ. ಪರಿಣಾಮ ಏನಾಯ್ತು ಅಂದರೆ, ಆ ಆಂತರಿಕ ಜಗಳದಿಂದಾಗಿ ಎರಡನೇ ಬಾರಿಗೆ ಸುಲಭವಾಗಿ ಗೆಲ್ಲಬೇಕಿದ್ದ ಕಾಂಗ್ರೆಸ್ ಪಕ್ಷ ಅಲ್ಲಿ ಸೋತು ಸುಣ್ಣವಾಯಿತು.

ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸತಾಯಿಸಿದ್ದ ರಾಜಸ್ಥಾನದ ಅಶೋಕ್ ಗೆಹ್ಲೋಟ್!

ಇನ್ನೊಂದೆಡೆ ರಾಜಸ್ಥಾನದಲ್ಲಿ ಮೂರು ಬಾರಿ ಸಿಎಂ ಆಗಿದ್ದ ಮೂಲ ಕಾಂಗ್ರೆಸ್ಸಿಗ ಅಶೋಕ್ ಗೆಹ್ಲೋಟ್ ಮತ್ತು ಯುವ ನಾಯಕ ಸಚಿನ್ ಪೈಲಟ್ ನಡುವೆ ಭೀಕರ ಕುರ್ಚಿ ಕದನ ನಡೆದಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಖುದ್ದಾಗಿ ಜೈಪುರಕ್ಕೆ ಹೋಗಿ ಶಾಸಕಾಂಗ ಪಕ್ಷದ (CLP) ಸಭೆ ಕರೆದರೂ, ಗೆಹ್ಲೋಟ್ ಹೈಕಮಾಂಡ್‌ಗೆ ಕ್ಯಾರೆ ಎನ್ನದೆ ತಮ್ಮ ಬೆಂಬಲಿಗ ಶಾಸಕರು ಸಭೆಗೆ ಬರದಂತೆ ನೋಡಿಕೊಂಡಿದ್ದರು. ಗೆಹ್ಲೋಟ್ ಅಧಿಕಾರ ಬಿಡಲು ಒಪ್ಪದ ಕಾರಣ ಬೇಸತ್ತ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರು ರೆಸಾರ್ಟ್ ಸೇರಬೇಕಾಯಿತು. ಈ ಭೀಕರ ಕಚ್ಚಾಟದಿಂದ ಹೈಕಮಾಂಡ್‌ಗೆ ಭಾರಿ ಮುಖಭಂಗವಾಗಿ, ಕೊನೆಗೂ ರಾಜಸ್ಥಾನದಲ್ಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು.

ಮೂಲ ಕಾಂಗ್ರೆಸ್ಸಿಗರು ಪಕ್ಷ ಸೋಲಿಸಿದ್ರು; ‘ವಲಸಿಗ’ ಸಿದ್ದರಾಮಯ್ಯ ಗೆಲ್ಲಿಸಿದ್ರು!

ಕಾಂಗ್ರೆಸ್ ಇತಿಹಾಸವನ್ನು ತಿರುವಿ ಹಾಕಿದರೆ, "ನಾವು ಕಾಂಗ್ರೆಸ್ ರಕ್ತ ಹಂಚಿಕೊಂಡು ಬಂದಿದ್ದೇವೆ" ಎನ್ನುವ ಮೂಲ ಕಾಂಗ್ರೆಸ್ಸಿಗರು ದೇಶಾದ್ಯಂತ ಅಧಿಕಾರಕ್ಕಾಗಿ ಹಠ ಹಿಡಿದು ಪಕ್ಷವನ್ನು ಮಣ್ಣು ಮುಕ್ಕಿಸಿದರು. ಆದರೆ, ಜೆಡಿಎಸ್‌ನಿಂದ ಬಂದ ಕಾರಣಕ್ಕೆ ಕೆಲವರಿಂದ ‘ವಲಸೆ ಕಾಂಗ್ರೆಸ್ಸಿಗ’ ಎಂದು ಕರೆಯಲ್ಪಟ್ಟ ಸಿದ್ದರಾಮಯ್ಯ ಮಾತ್ರ ಪಕ್ಷವನ್ನು ಮೂರು ಬಾರಿ (ಮೈತ್ರಿ ಸರ್ಕಾರ ಸೇರಿದಂತೆ) ಅಧಿಕಾರಕ್ಕೆ ತಂದಿದ್ದಾರೆ. ಕೇವಲ ಅಧಿಕಾರಕ್ಕೆ ತರುವುದು ಮಾತ್ರವಲ್ಲ, "ರಾಹುಲ್ ಗಾಂಧಿ ಅವರು ನನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ, ಅವರ ನಂಬಿಕೆಗೆ ದ್ರೋಹ ಮಾಡಲ್ಲ" ಎಂದು ಹೇಳಿ, ನುಡಿದಂತೆ ನಡೆದು ಸಿಎಂ ಸ್ಥಾನಕ್ಕೆ ರಿಸೈನ್ ಮಾಡಿದ್ದಾರೆ.

ಹೈಕಮಾಂಡ್‌ಗೆ ಶಾಕ್ ಕೊಟ್ಟ ವಚನ ಪಾಲಕ!

ಕರ್ನಾಟಕದಲ್ಲೂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಕಥೆ ರಾಜಸ್ಥಾನದಂತೆಯೇ ರಣರಂಗವಾಗಬಹುದು ಎಂದು ಹೈಕಮಾಂಡ್ ಭಾರಿ ಆತಂಕದಲ್ಲಿತ್ತು. ಆದರೆ, ಹೈಕಮಾಂಡ್ ಮುಂಡರು ಸೂಚನೆ ನೀಡಿದ ತಕ್ಷಣ ಸಿದ್ದರಾಮಯ್ಯ ಅವರು ಯಾವುದೇ ಬಂಡಾಯ ಎದ್ದೇಳದೆ, ಸದ್ದಿಲ್ಲದೆ ಸಿಎಂ ಸ್ಥಾನ ತ್ಯಜಿಸಿದ್ದಾರೆ.

ರಾಜಕೀಯ ಲಾಬಿಗಳು, ಹಠಮಾರಿ ಧೋರಣೆಗಳ ಇಂದಿನ ಜಮಾನದಲ್ಲಿ ಸಿದ್ದರಾಮಯ್ಯ ಅವರ ಈ ಸತ್ಚಾರಿತ್ರ್ಯದ ನಡೆ ಕಂಡು ಹೈಕಮಾಂಡ್ ನಾಯಕರೇ ಒಂದು ಕ್ಷಣ ಶಾಕ್ ಆಗಿದ್ದಾರೆ ಮತ್ತು ಸಿದ್ದಣ್ಣನ ನಡೆಗೆ ಫುಲ್ ಫಿದಾ ಆಗಿದ್ದಾರೆ. ರಾಜಕೀಯ ಲಾಭಕ್ಕಾಗಿ ಕೊಟ್ಟ ವಚನಗಳನ್ನು ಗಾಳಿಗೆ ತೂರುವ ಇಂದಿನ ದಿನಗಳಲ್ಲಿ, ಹೈಕಮಾಂಡ್‌ನ ಗೌರವ ಮತ್ತು ನಂಬಿಕೆಯನ್ನು ಕಾಪಾಡಿ ‘ವಚನ ಪಾಲಕ’ನಾಗಿ ನಿಂತ ಸಿದ್ದರಾಮಯ್ಯ ನಿಜಕ್ಕೂ ಭಾರತೀಯ ರಾಜಕಾರಣದ ಅಪರೂಪದ ಸೌಮ್ಯ ಚಹರೆಯಾಗಿ ಉಳಿದುಬಿಟ್ಟಿದ್ದಾರೆ.

ಕುರ್ಚಿ ಮೇಲಿನ ಮೋಹಕ್ಕೆ ಬಿದ್ದು ಪಕ್ಷವನ್ನೇ ಇಕ್ಕಟ್ಟಿಗೆ ಸಿಲುಕಿಸುವ ನಾಯಕರ ಮಧ್ಯೆ, ಸಿದ್ದರಾಮಯ್ಯ ಅವರು ಸದ್ದಿಲ್ಲದೆ ಹೈಕಮಾಂಡ್ ಮಾತಿಗೆ ತಲೆಬಾಗಿ ಹೊರನಡೆದಿರುವುದು ಅವರ ರಾಜಕೀಯ ಮುತ್ಸದ್ದಿತನಕ್ಕೆ ಸಾಕ್ಷಿ. ಅಧಿಕಾರ ಇರಲಿ, ಇಲ್ಲದಿರಲಿ ತಾವು ಕೊಟ್ಟ ಮಾತಿಗೆ ಬದ್ಧರಾಗಿ ನಿಲ್ಲುವ ಮೂಲಕ ಸಿದ್ದರಾಮಯ್ಯ ಅವರು ತಮ್ಮ ವ್ಯಕ್ತಿತ್ವವನ್ನು ಇನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಸಿದ್ದಣ್ಣನ ಈ 'ತ್ಯಾಗ' ಮುಂದಿನ ದಿನಗಳಲ್ಲಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ಯಾವ ರೀತಿಯ ಹೊಸ ರಾಜಕೀಯ ಸೃಷ್ಟಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Latest News