ಬೆಂಗಳೂರಲ್ಲಿ 'ಕಾಮಿಡಿ'ಗೆ ಸಂಕಷ್ಟ - ಹಳೇ ಜೋಕ್ ಬೆನ್ನತ್ತಿ ಬಂದು ಶರತ್ ಉದಯ್‌ಗೆ ಬೆದರಿಕೆ ಹಾಕಿದ ಟಿಡಿಪಿ ಫ್ಯಾನ್ಸ್!!

ಬೆಂಗಳೂರು ಅಂದ್ರೆ ಅದು ಕಲೆ ಮತ್ತು ಕಲಾವಿದರ ನೆಚ್ಚಿನ ತಾಣ. ಆದರೆ ಕಳೆದ ಶನಿವಾರ (ಏಪ್ರಿಲ್ 25) ಸಂಜೆ ಕೋರಮಂಗಲದಲ್ಲಿ ನಡೆದ ಘಟನೆ ಮಾತ್ರ ಕಲಾವಿದರಲ್ಲಿ ಒಂದು ರೀತಿಯ ಆತಂಕ ಮೂಡಿಸಿದೆ. ಹೈದರಾಬಾದ್ ಮೂಲದ ಖ್ಯಾತ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಶರತ್ ಉದಯ್ ಅವರ ಕಾರ್ಯಕ್ರಮಕ್ಕೆ ನುಗ್ಗಿದ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ (TDP) ಬೆಂಬಲಿಗರು, ಶೋ ಮಧ್ಯದಲ್ಲೇ ರಂಪಾಟ ನಡೆಸಿ ದಬಾಯಿಸಿದ್ದಾರೆ.

ವೇದಿಕೆ ಮೇಲೆಯೇ ಹೈಡ್ರಾಮಾ - ಬೆಂಗಳೂರಿನಲ್ಲಿ ಕಾಮಿಡಿಯನ್ ಸಂಕಷ್ಟ!! | Photo Credit: https://x.com/HateDetectors/siasat.com
ವೇದಿಕೆ ಮೇಲೆಯೇ ಹೈಡ್ರಾಮಾ - ಬೆಂಗಳೂರಿನಲ್ಲಿ ಕಾಮಿಡಿಯನ್ ಸಂಕಷ್ಟ!! | Photo Credit: https://x.com/HateDetectors/siasat.com

ಎರಡು ವರ್ಷಗಳ ಹಿಂದೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಗ್ಗೆ ಮಾಡಿದ್ದ ಜೋಕ್‌ಗಾಗಿ ಈಗ ಬೆಂಗಳೂರಲ್ಲಿ ಬೆದರಿಕೆ ಹಾಕಲಾಗಿದೆ.

ವೇದಿಕೆ ಮೇಲೆಯೇ ಹೈಡ್ರಾಮಾ!

ಸಂಜೆ ಸುಮಾರು 7 ಗಂಟೆಗೆ ಶರತ್ ಉದಯ್ ತಮ್ಮ ಕಾಮಿಡಿ ಶೋ ಆರಂಭಿಸಿದ್ದರು. ಕಾರ್ಯಕ್ರಮ ಶುರುವಾಗಿ ಕೆಲವೇ ನಿಮಿಷಗಳಲ್ಲಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ಎದ್ದು ಬಂದು, "ನಾನು ನಿಮ್ಮ ದೊಡ್ಡ ಫ್ಯಾನ್ ಸರ್, ನೀವು ತುಂಬಾ ಚೆನ್ನಾಗಿ ಕಾಮಿಡಿ ಮಾಡ್ತೀರಾ. ಆದ್ರೆ ಒಂದು ಶೋನಲ್ಲಿ ನೀವು ನಮ್ಮ ನಾಯಕರನ್ನ ಅವಮಾನಿಸಿದ್ದೀರಾ" ಎಂದು ಕ್ಯಾತೆ ತೆಗೆದಿದ್ದಾನೆ.

ನೋಡನೋಡುತ್ತಿದ್ದಂತೆಯೇ ಆತನ ಜೊತೆ ಇನ್ನೂ ಐದಾರು ಜನ ವೇದಿಕೆ ಹತ್ತಿ ಶರತ್ ಅವರನ್ನ ಸುತ್ತುವರೆದಿದ್ದಾರೆ. ಇವರೆಲ್ಲರೂ ಟಿಡಿಪಿ ಪಕ್ಷದ ಬೆಂಬಲಿಗರು ಎಂದು ತಿಳಿದುಬಂದಿದೆ. "ಚಂದ್ರಬಾಬು ನಾಯ್ಡು ಅವರ ಮೇಲೆ ನಡೆದ ನಕ್ಸಲ್ ದಾಳಿಯ ಬಗ್ಗೆ ಜೋಕ್ ಮಾಡೋಕೆ ನಿಮಗೆ ಎಷ್ಟು ಧೈರ್ಯ?" ಎಂದು ಏಕವಚನದಲ್ಲಿ ಬೈಯುತ್ತಾ ದಬಾಯಿಸಿದ್ದಾರೆ.

ಈಗಾಗಲೇ ಕ್ಷಮೆ ಕೇಳಿದ್ರೂ ಬಿಡದ ಕಿಡಿಗೇಡಿಗಳು:

ಶರತ್ ಉದಯ್ ಈ ಹಿಂದೆಯೇ ಆ ಜೋಕ್‌ಗಳ ಬಗ್ಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. "ನಾನು ಈಗಾಗಲೇ ಕ್ಷಮೆ ಕೇಳಿದ್ದೀನಿ" ಎಂದು ಅವರು ಎಷ್ಟೇ ಮನವಿ ಮಾಡಿದರೂ, ಈ ಕಿಡಿಗೇಡಿಗಳು ಬಿಡಲಿಲ್ಲ. ಪ್ರೇಕ್ಷಕರ ಮುಂದೆಯೇ ಮತ್ತೊಮ್ಮೆ ಚಂದ್ರಬಾಬು ನಾಯ್ಡು ಮತ್ತು ಅವರ ಮಗ ನಾರಾ ಲೋಕೇಶ್ ಅವರ ಹೆಸರನ್ನು ಹೇಳಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಆತಂಕಗೊಂಡ ಶರತ್, ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದು ಎಂದು ಮತ್ತೊಮ್ಮೆ ಕ್ಷಮೆ ಕೇಳಿದ್ದಾರೆ.

"ಜೈ ಟಿಡಿಪಿ" ಎನ್ನಲು ನಿರಾಕರಣೆ:

ಕ್ಷಮೆ ಕೇಳಿದ ನಂತರ ಕಿಡಿಗೇಡಿಗಳು ಒಂದು ಹೆಜ್ಜೆ ಮುಂದೆ ಹೋಗಿ, "ಜೈ ಟಿಡಿಪಿ, ಜೈ ಲೋಕೇಶ್ ಅಣ್ಣ" ಎಂದು ಘೋಷಣೆ ಕೂಗುವಂತೆ ಶರತ್‌ಗೆ ಒತ್ತಾಯಿಸಿದರು. ಆದರೆ ಇದಕ್ಕೆ ಒಪ್ಪದ ಶರತ್, "ನಾನು ಕೇವಲ ಟಿಡಿಪಿ ಬಗ್ಗೆ ಮಾತ್ರವಲ್ಲ, ವಿರೋಧ ಪಕ್ಷದವರ ಬಗ್ಗೆಯೂ ಜೋಕ್ ಮಾಡಿದ್ದೀನಿ. ಇದು ಕೇವಲ ಕಾಮಿಡಿ ಅಷ್ಟೇ" ಎಂದು ಧೈರ್ಯವಾಗಿ ಹೇಳಿದ್ದಾರೆ. ಕೊನೆಗೆ "ಇದು ನಿನಗೆ ಲಾಸ್ಟ್ ವಾರ್ನಿಂಗ್" ಎಂದು ಬೆದರಿಕೆ ಹಾಕಿದ ಗುಂಪು ಅಲ್ಲಿಂದ ಕಾಲ್ಕಿತ್ತಿದೆ. ಪೊಲೀಸರು ಬರುವಷ್ಟರಲ್ಲಿ ಕಿಡಿಗೇಡಿಗಳು ಪರಾರಿಯಾಗಿದ್ದರು.

ಸರಣಿ ಘಟನೆಗಳಿಂದ ಕಲಾವಿದರು ಕಂಗಾಲು:

ಆಂಧ್ರಪ್ರದೇಶದ ಆಡಳಿತ ಪಕ್ಷದ ನಾಯಕರ ಬಗ್ಗೆ ಜೋಕ್ ಮಾಡಿದ ಕಾರಣಕ್ಕೆ ಕಲಾವಿದರು ಸಂಕಷ್ಟಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ.

ಈ ಹಿಂದೆ ಕಾಮಿಡಿಯನ್ ಅನುದೀಪ್ ಅವರನ್ನು ಪ್ರಯಾಗ್‌ರಾಜ್‌ನಿಂದ ಅರೆಸ್ಟ್ ಮಾಡಲಾಗಿತ್ತು. ರಫೀಕ್ ಮೊಹಮ್ಮದ್ ಎಂಬುವವರನ್ನು ವಿಶಾಖಪಟ್ಟಣದಲ್ಲಿ ಬಂಧಿಸಲಾಗಿತ್ತು.
ಈಗ ಬೆಂಗಳೂರಿನಲ್ಲೂ ಇಂತಹ ಘಟನೆ ನಡೆದಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ದೊಡ್ಡ ಪ್ರಶ್ನೆ ಮೂಡಿಸಿದೆ.

ಜೋಕ್ ಅಂದ್ರೆ ಅದು ಕೇವಲ ನಗಿಸುವುದಕ್ಕೆ ಮಾತ್ರ ಇರಬೇಕು. ಅದನ್ನು ವೈಯಕ್ತಿಕವಾಗಿ ತಗೊಂಡು, ಕಲಾವಿದರ ಮೇಲೆ ಗ್ಯಾಂಗ್ ಕಟ್ಟಿಕೊಂಡು ಬಂದು ಬೆದರಿಕೆ ಹಾಕುವುದು ಎಷ್ಟರ ಮಟ್ಟಿಗೆ ಸರಿ? ಬೆಂಗಳೂರಿನಂತಹ ನಗರದಲ್ಲಿ ಕಲಾವಿದನಿಗೆ ರಕ್ಷಣೆ ಇಲ್ಲದಂತಾದರೆ ಹೇಗೆ? ರಾಜಕೀಯ ನಾಯಕರನ್ನು ದೇವರಿಗಿಂತ ಮಿಗಿಲಾಗಿ ಕಾಣುವ ಈ ಅಭಿಮಾನಿ ಸಂಸ್ಕೃತಿ ಎಲ್ಲಿಗೆ ಹೋಗಿ ಮುಟ್ಟುತ್ತೋ ಎಂಬ ಭಯ ಈಗ ಎಲ್ಲರನ್ನು ಕಾಡುತ್ತಿದೆ!