ಸಂಬಂಧಗಳ ಮಧ್ಯೆ ಇವತ್ತು ತಾಳ್ಮೆ ಅನ್ನೋದು ಮರೀಚಿಕೆಯಾಗ್ತಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದ ಈ ಘಟನೆ ಈಗ ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದೆ. ಮಗುವನ್ನು ನೋಡಬೇಕು ಅನ್ನೋ ಹಠಕ್ಕೆ ಬಿದ್ದ ಅಳಿಯ ಅರವಿಂದ ಗವಳಿ, ತನ್ನ ಅತ್ತೆ ಮಹಾದೇವಿ ಕರಿಗಾರ ಅವರ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದ.
ಏನಿದು ಅಸಲಿ ಮ್ಯಾಟರ್?
ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದ ಅರವಿಂದ ಗವಳಿ (26) ಅನ್ನೋ ಯುವಕನಿಗೆ, ಆಲದಕಟ್ಟಿಯ ಮಹಾದೇವಿ ಅವರು ಸುಮಾರು ಒಂದೂವರೆ ವರ್ಷದ ಹಿಂದೆ ತಮ್ಮ ಮಗಳನ್ನು ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದ್ದರು. ಎರಡು ತಿಂಗಳ ಹಿಂದಷ್ಟೇ ಮಗಳಿಗೆ ಹೆರಿಗೆಯಾಗಿದ್ದರಿಂದ ಆಕೆ ತವರು ಮನೆಯಲ್ಲಿದ್ದಳು.
ಆದರೆ, ಮಗಳು ತವರು ಮನೆಗೆ ಬಂದಾಗಿನಿಂದ ಈ ಅಳಿಯ ಅರವಿಂದನ ಕಾಟ ಶುರುವಾಗಿದೆ. ಪದೇ ಪದೇ ವಿಡಿಯೋ ಕಾಲ್ ಮಾಡಿ "ನನ್ನ ಮಗುವನ್ನ ತೋರಿಸು" ಅಂತ ಪೀಡಿಸುತ್ತಿದ್ದ. ಮಗಳು ಹೆರಿಗೆಯಾದ ಸುಸ್ತಿನಲ್ಲಿರುವಾಗ ಮತ್ತು ಮನೆಯ ಕೆಲಸದ ಮಧ್ಯೆ ಪದೇ ಪದೇ ಕಾಲ್ ಮಾಡಬೇಡ ಅಂತ ಅತ್ತೆ ಬುದ್ಧಿ ಹೇಳಿದ್ದಾರೆ.
ಅತ್ತೆ ಕೊಟ್ಟ ಸಲಹೆಯೇ ಮುಳುವಾಯ್ತು!
"ಕೆಲಸ ಬಿಟ್ಟು ಯಾವಾಗಲೂ ಮೊಬೈಲ್ ಹಿಡಿದುಕೊಂಡು ಕೂರಲು ಆಗಲ್ಲ, ದಿನಕ್ಕೆ ಒಂದು ಸಲ ಮಾತ್ರ ವಿಡಿಯೋ ಕಾಲ್ ಮಾಡು" ಅಂತ ಮಹಾದೇವಿ ಅವರು ಅಳಿಯನಿಗೆ ತಿಳಿ ಹೇಳಿದ್ದಾರೆ. ಆದರೆ ಈ ಮಾತು ಅಳಿಯ ಅರವಿಂದನಿಗೆ ಇಷ್ಟವಾಗಲಿಲ್ಲ. ಫೋನ್‌ನಲ್ಲೇ ಅತ್ತೆಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಇದರಿಂದ ಬೇಸತ್ತ ಅತ್ತೆ, "ನೀನು ಈ ರೀತಿ ಗಲಾಟೆ ಮಾಡೋದಾದ್ರೆ ನನ್ನ ಮನೆ ಬಾಗಿಲಿಗೆ ಬರಬೇಡ, ಬಂದ್ರೆ ಸುಮ್ಮನೆ ಬಿಡಲ್ಲ" ಅಂತ ಗದರಿಸಿದ್ದಾರೆ.
ಮನೆಗೆ ಬಂದು ಅಟ್ಯಾಕ್ ಮಾಡಿದ ಭೂಪ!
ಅತ್ತೆ ಆಡಿದ ಮಾತಿನಿಂದ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ಅರವಿಂದ, ಆಲದಕಟ್ಟಿ ಗ್ರಾಮಕ್ಕೆ ಬಂದಿದ್ದಾನೆ. ಮನೆಗೆ ನುಗ್ಗಿ ತನ್ನ ಅತ್ತೆ ಮಹಾದೇವಿ ಅವರ ಜೊತೆ ಗಲಾಟೆ ತೆಗೆದು, ಏಕಾಏಕಿ ತಂದಿದ್ದ ಚಾಕುವಿನಿಂದ ಅವರ ಹೊಟ್ಟೆಗೆ ಇರಿದಿದ್ದಾನೆ. ಮಹಾದೇವಿ ಅವರು ರ*ಕ್ತದ ಮಡುವಿನಲ್ಲಿ ಬಿದ್ದ ತಕ್ಷಣ ಈ ಕಿರಾತಕ ಅಳಿಯ ಅಲ್ಲಿಂದ ಎಸ್ಕೇಪ್ ಆಗಿದ್ದ.
ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ, ಅಳಿಯ ಅರೆಸ್ಟ್
ಗಂಭೀರವಾಗಿ ಗಾಯಗೊಂಡಿದ್ದ ಮಹಾದೇವಿ ಅವರನ್ನು ಕೂಡಲೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಐಸಿಯುವಿನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಘಟನೆ ನಡೆದ ತಕ್ಷಣ ಅಲರ್ಟ್ ಆದ ಮುರಗೋಡ ಪೊಲೀಸರು, ತಲೆಮರೆಸಿಕೊಂಡಿದ್ದ ಅರವಿಂದನನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟಿದ್ದಾರೆ. ಈಗ ಈ 'ಪರಮಕಿರಾತಕ' ಅಳಿಯ ಜೈಲಿನ ಕಂಬಿ ಎಣಿಸುತ್ತಿದ್ದಾನೆ.