Apr 26, 2026 Languages : ಕನ್ನಡ | English

ಸವದತ್ತಿಯಲ್ಲಿ ಭರತ ಹುಣ್ಣಿಮೆ ಜಾತ್ರೆ – ಯಲ್ಲಮ್ಮನಗುಡ್ಡದಲ್ಲಿ ಕಂಡುಬಂತು ಭಕ್ತರ ಬಾರಿ ದಂಡು!!

ಭರತ ಹುಣ್ಣಿಮೆ ಜಾತ್ರೆಯ ಸಂಭ್ರಮಕ್ಕೆ ಯಲ್ಲಮ್ಮನಗುಡ್ಡ ಸಜ್ಜಾಗಿದೆ. ಹೌದು, ಇಂದಿನಿಂದ ಆರಂಭವಾಗಲಿರುವ ಈ ಮಹಾ ಜಾತ್ರೆಗೆ ಎರಡು ದಿನ ಮುಂಚೆಯೇ ಭಕ್ತರ ದಂಡು ಹರಿದುಬರುತ್ತಿದ್ದು, ಗುಡ್ಡದ ಸುತ್ತಮುತ್ತ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದೆ.

ಮುತ್ತೈದೆತನದ ಸಂಕೇತ – ಯಲ್ಲಮ್ಮನಗುಡ್ಡದಲ್ಲಿ ಭರತ ಹುಣ್ಣಿಮೆ ಜಾತ್ರೆ
ಮುತ್ತೈದೆತನದ ಸಂಕೇತ – ಯಲ್ಲಮ್ಮನಗುಡ್ಡದಲ್ಲಿ ಭರತ ಹುಣ್ಣಿಮೆ ಜಾತ್ರೆ

ರಾಜ್ಯದಲ್ಲೇ ದೊಡ್ಡ ಜಾತ್ರೆಯೆಂದು ಪರಿಗಣಿಸಲ್ಪಡುವ ಈ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಯಲ್ಲಮ್ಮ ದೇವಿ ಮುತ್ತೈದೆಯಾಗುತ್ತಾಳೆ ಎಂಬ ನಂಬಿಕೆಯಿಂದ, ಗುಡ್ಡಕ್ಕೆ ಬರುವ ಪ್ರತಿಯೊಬ್ಬ ಮಹಿಳೆಯೂ ಹಸಿರು ಬಳೆ ಧರಿಸಿ ಸಂಭ್ರಮಿಸುತ್ತಾಳೆ. ಈ ಹಸಿರು ಬಳೆ ಮುತ್ತೈದೆತನದ ಸಂಕೇತವಾಗಿದ್ದು, ಜಾತ್ರೆಯ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಬಳೆ ವಹಿವಾಟು ನಡೆಯುವುದು ವಿಶೇಷ.

ಕರ್ನಾಟಕದ ವಿವಿಧ ಭಾಗಗಳ ಜೊತೆಗೆ ಮಹಾರಾಷ್ಟ್ರ, ಗೋವಾ, ತೆಲಂಗಾಣ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ತಮ್ಮ ಆರ್ಥಿಕ ಶಕ್ತಿಯನುಸಾರವಾಗಿ ದೇವಿಗೆ ಕಾಣಿಕೆ ಅರ್ಪಿಸಿ, ಭಕ್ತಿ ಸಮರ್ಪಿಸುತ್ತಿದ್ದಾರೆ. ಕೆಲವರು ಹಣ್ಣು, ಹೂವು, ಸಕ್ಕರೆ, ಧಾನ್ಯಗಳನ್ನು ಅರ್ಪಿಸುತ್ತಿದ್ದರೆ, ಕೆಲವರು ಹಣದ ಕಾಣಿಕೆ ಸಲ್ಲಿಸುತ್ತಿದ್ದಾರೆ.

ಜಾತ್ರೆಯ ಸಮಯದಲ್ಲಿ ಗುಡ್ಡದ ಸುತ್ತಮುತ್ತ ಹಬ್ಬದ ಸಂಭ್ರಮ, ಭಜನೆ, ಹರ್ಷೋದ್ಗಾರ, ಮೇಳದ ಸದ್ದು ಎಲ್ಲೆಡೆ ಕೇಳಿಬರುತ್ತಿದೆ. ಮಹಿಳೆಯರು ಹಸಿರು ಬಳೆಗಳನ್ನು ಧರಿಸಿ ಗುಡ್ಡದ ಅಂಗಡಿಗಳಲ್ಲಿ ಖರೀದಿ ಮಾಡುತ್ತಿರುವುದು, ಭಕ್ತಿಯ ಜೊತೆಗೆ ಆರ್ಥಿಕ ಚಟುವಟಿಕೆಗೂ ಜೀವ ತುಂಬುತ್ತಿದೆ.

ಭರತ ಹುಣ್ಣಿಮೆ ಜಾತ್ರೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಜನರ ಜೀವನದೊಂದಿಗೆ ಬೆಸೆದುಕೊಂಡಿರುವ ಸಂಸ್ಕೃತಿ, ನಂಬಿಕೆ ಮತ್ತು ಏಕತೆಯ ಸಂಕೇತವಾಗಿದೆ. ಯಲ್ಲಮ್ಮನ ಸನ್ನಿಧಿಯಲ್ಲಿ ಭಕ್ತರು ಶ್ರದ್ಧೆ, ಶಾಂತಿ ಮತ್ತು ಸಮೃದ್ಧಿಯನ್ನು ಕಾಣುವ ನಿರೀಕ್ಷೆ ಹೊಂದುತ್ತಾರೆ. ಈ ಬಾರಿಯೂ ಜಾತ್ರೆಯ ಸಂಭ್ರಮ ಭಕ್ತರ ಮನದಲ್ಲಿ ಭರವಸೆ, ಸಂತೋಷ ಮತ್ತು ಭಕ್ತಿಭಾವವನ್ನು ತುಂಬುತ್ತಿದೆ ಎನ್ನಬಹುದು.  

Latest News