ಬೆಂಗಳೂರಿನಲ್ಲಿ ಐಪಿಎಲ್ ಕ್ರೇಜ್ ಹೇಗಿರುತ್ತೆ ಅಂತ ಎಲ್ಲರಿಗೂ ಗೊತ್ತು. ಅದರಲ್ಲೂ ಮಾರ್ಚ್ 28ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ (RCB) ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಉದ್ಘಾಟನಾ ಪಂದ್ಯಕ್ಕೆ ಟಿಕೆಟ್ ಸಿಗುವುದೇ ದೊಡ್ಡ ಸಾಹಸವಾಗಿದೆ. ಈ ಟಿಕೆಟ್ ಹಪಾಹಪಿ ಈಗ ಸಾಮಾನ್ಯ ಜನರಿಗೆ ಮಾತ್ರವಲ್ಲ, ನಮ್ಮ ಶಾಸಕರಿಗೂ ತಟ್ಟಿದೆ! ಹೌದು, ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಇಂದು ಕ್ರಿಕೆಟ್ ಟಿಕೆಟ್‌ಗಾಗಿ ಶಾಸಕರು ಸರ್ಕಾರವನ್ನು ಬಹಿರಂಗವಾಗಿ ಬೇಡಿಕೊಂಡಿದ್ದಾರೆ.
ಕೆಎಸ್‌ಸಿಎ ವಿರುದ್ಧ ಶಾಸಕರ ಆಕ್ರೋಶ
ವಿಧಾನಸಭೆಯಲ್ಲಿ ಸ್ಟೇಡಿಯಂ ವಿಚಾರವಾಗಿ ಚರ್ಚೆ ನಡೆಯುತ್ತಿದ್ದಾಗ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (KSCA) ವಿರುದ್ಧ ಕಿಡಿಕಾರಿದರು. "ಚಿನ್ನಸ್ವಾಮಿ ಸ್ಟೇಡಿಯಂ ಇರುವುದು ನಮ್ಮ ಜಾಗದಲ್ಲಿ. ನಾವು 16 ಎಕರೆಗೂ ಹೆಚ್ಚು ಭೂಮಿಯನ್ನು ಕ್ರಿಕೆಟ್ ತರಬೇತಿಗಾಗಿ ನೀಡಿದ್ದೇವೆ. ಅವರು ಸರ್ಕಾರಕ್ಕೆ ತಿಂಗಳಿಗೆ ಕೇವಲ 1600 ರೂಪಾಯಿ ಬಾಡಿಗೆ ಕೊಡುತ್ತಾರೆ. ಆದರೆ ಶಾಸಕರಾದ ನಮಗೇ ಅಲ್ಲಿ ಗೌರವವಿಲ್ಲ. ಒಂದು ಟಿಕೆಟ್‌ಗಾಗಿ ಅವರ ಮುಂದೆ ಅಂಗಲಾಚುವ ಪರಿಸ್ಥಿತಿ ಇದೆ," ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲ, "ನಮ್ಮ ಹೆಸರಿನಲ್ಲಿರುವ ಟಿಕೆಟ್‌ಗಳನ್ನು ಅವರು ಹೊರಗಡೆ ಹೆಚ್ಚಿನ ಬೆಲೆಗೆ ಮಾರಿಕೊಳ್ಳುತ್ತಾರೆ. ಒಂದೊಂದು ಟಿಕೆಟ್‌ಗೆ ಸಾವಿರಾರು ರೂಪಾಯಿ ಚಾರ್ಜ್ ಮಾಡುತ್ತಾರೆ," ಎಂದು ಅಶೋಕ್ ಗಂಭೀರ ಆರೋಪ ಮಾಡಿದರು.
ನಮಗೂ ಬೇಕು 5 ವಿಐಪಿ ಟಿಕೆಟ್!
ಇದೇ ವೇಳೆ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡ ಧ್ವನಿಗೂಡಿಸಿ, "ಶಾಸಕರಿಗೆ ಕೇವಲ ಒಂದು ಟಿಕೆಟ್ ಕೊಡುತ್ತಾರೆ, ಅದು ಕೆಳಗಿನ ಗ್ಯಾಲರಿಯಲ್ಲಿ! ಶಾಸಕರು ಅಂದ್ರೆ ಗೌರವ ಇಲ್ವಾ? ನಮಗೆ ಕನಿಷ್ಠ 5 ವಿಐಪಿ ಟಿಕೆಟ್ ಕೊಡಬೇಕು ಮತ್ತು ನಮಗಾಗಿ ಪ್ರತ್ಯೇಕ ಲಾಂಜ್ ವ್ಯವಸ್ಥೆ ಮಾಡಬೇಕು," ಎಂದು ಒತ್ತಾಯಿಸಿದರು. ಹೊಸ ಸ್ಟೇಡಿಯಂ ಮಾಡುವ ಮುನ್ನ ಶಾಸಕರಿಗೆ ಸರಿಯಾದ ಸೌಲಭ್ಯ ಕೊಡಿಸಿ ಎಂದು ಅವರು ಸರ್ಕಾರಕ್ಕೆ ಆಗ್ರಹಿಸಿದರು.
ಸ್ಪೀಕರ್ ಮತ್ತು ಡಿಕೆಶಿ ಭರವಸೆ
ಶಾಸಕರ ಈ ಆಳಲನ್ನು ಕೇಳಿದ ಸ್ಪೀಕರ್ ಯು.ಟಿ. ಖಾದರ್ ಅವರು ಕೂಡ ಇದಕ್ಕೆ ಸಮ್ಮತಿಸಿದರು. "ಶಾಸಕರು ಕ್ಯೂನಲ್ಲಿ ನಿಂತು ಟಿಕೆಟ್ ಪಡೆಯುವುದು ಕಷ್ಟ. ಅವರಿಗೆ ಕನಿಷ್ಠ ನಾಲ್ಕು ವಿಐಪಿ ಟಿಕೆಟ್ ಸಿಗುವಂತೆ ವ್ಯವಸ್ಥೆ ಮಾಡಿ," ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಕೊನೆಯಲ್ಲಿ ಉತ್ತರಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ನಾನು ಕೂಡ ಕೆಎಸ್‌ಸಿಎ ಸದಸ್ಯನೇ. ಖಂಡಿತವಾಗಿಯೂ ಅವರ ಜೊತೆ ಮಾತನಾಡುತ್ತೇನೆ. ಶಾಸಕರಿಗೆ ಎಲ್ಲ ಹಕ್ಕುಗಳೂ ಇವೆ, ಟಿಕೆಟ್ ವ್ಯವಸ್ಥೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ," ಎಂದು ಭರವಸೆ ನೀಡುವ ಮೂಲಕ ಚರ್ಚೆಗೆ ತೆರೆ ಎಳೆದರು.
ಆರ್‌ಸಿಬಿ ಪಂದ್ಯದ ಕ್ರೇಜ್ ಯಾವ ಮಟ್ಟಕ್ಕಿದೆ ಎಂದರೆ, ರಾಜ್ಯದ ಸಮಸ್ಯೆಗಳನ್ನು ಚರ್ಚಿಸಬೇಕಾದ ಸದನದಲ್ಲೂ ಈಗ 'ನಮಗೆ ಟಿಕೆಟ್ ಕೊಡಿಸಿ' ಅನ್ನೋ ಮಾತು ಜೋರಾಗಿ ಕೇಳಿಬರುತ್ತಿದೆ!