Apr 22, 2026 Languages : ಕನ್ನಡ | English

100 ಕೆಜಿ ಚಿನ್ನದ ಸ್ಮಗ್ಲಿಂಗ್ ಕೇಸ್: ಒಂದು ವರ್ಷದ ಜೈಲು ವಾಸದ ನಂತರ ನಟಿ ರನ್ಯಾ ರಾವ್ ಬಿಡುಗಡೆ!! ಇಲ್ಲಿದೆ ಪೂರ್ತಿ ಮಾಹಿತಿ;

ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಮತ್ತು ಆಕೆಯ ತಂಡಕ್ಕೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಬರೋಬ್ಬರಿ 102 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸಿದ ಆರೋಪದ ಮೇಲೆ ಜೈಲು ಸೇರಿದ್ದ ನಟಿ ರನ್ಯಾ ರಾವ್, ಒಂದು ವರ್ಷದ 'ಕೊಫೆಪೋಸಾ' ಬಂಧನದ ನಂತರ ಈಗ ಬಿಡುಗಡೆಯಾಗುತ್ತಿದ್ದಾರೆ!

102 ಕೋಟಿ ಚಿನ್ನದ ದಂಧೆ – ಜೈಲಿನಿಂದ ಹೊರಬರುತ್ತಿರುವ ರನ್ಯಾ ರಾವ್!!
102 ಕೋಟಿ ಚಿನ್ನದ ದಂಧೆ – ಜೈಲಿನಿಂದ ಹೊರಬರುತ್ತಿರುವ ರನ್ಯಾ ರಾವ್!!

ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮಲಮಗಳಾಗಿರುವ ರನ್ಯಾ ರಾವ್, ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ತರುತ್ತಿದ್ದ ದಂಧೆಯಲ್ಲಿ ಸಿಕ್ಕಿಬಿದ್ದಿದ್ದರು. ಈಗ ಅವರ ಬಂಧನದ ಅವಧಿ ಮುಗಿದಿದ್ದು, ಈ ವಾರ ಜೈಲಿನಿಂದ ಹೊರಬರುವ ಸಾಧ್ಯತೆ ಇದೆ.

ಈ ಕಥೆ ಶುರುವಾಗಿದ್ದು ಮಾರ್ಚ್ 3, 2025 ರಂದು. ದುಬೈನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರನ್ಯಾ ರಾವ್ ಅವರನ್ನು ಡಿಆರ್‌ಐ (DRI) ಅಧಿಕಾರಿಗಳು ತಡೆದು ತಪಾಸಣೆ ನಡೆಸಿದ್ದರು. ಆಗ ಎಲ್ಲರೂ ಶಾಕ್ ಆಗುವಂತಹ ವಿಷಯ ಬಯಲಾಗಿತ್ತು. ರನ್ಯಾ ತನ್ನ ಮೈಮೇಲೆಯೇ ಸುಮಾರು 14.2 ಕೆಜಿ ಚಿನ್ನವನ್ನು ಬಚ್ಚಿಟ್ಟುಕೊಂಡು ಬಂದಿದ್ದರು. ಇದರ ಮೌಲ್ಯ ಬರೋಬ್ಬರಿ 12.56 ಕೋಟಿ ರೂಪಾಯಿ.

ತನಿಖೆ ಮುಂದುವರಿದಂತೆ ತಿಳಿದುಬಂದ ವಿಷಯ ಏನೆಂದರೆ, ಈ ಗ್ಯಾಂಗ್ 2024 ರಿಂದ ಇಲ್ಲಿಯವರೆಗೆ ಸುಮಾರು 100 ಕೆಜಿಗೂ ಹೆಚ್ಚು ಚಿನ್ನವನ್ನು ಸ್ಮಗ್ಲಿಂಗ್ ಮಾಡಿದೆ. ಇದರ ಒಟ್ಟು ಮೌಲ್ಯ ಸುಮಾರು 102 ಕೋಟಿ ರೂಪಾಯಿಗೂ ಅಧಿಕ ಎನ್ನಲಾಗುತ್ತಿದೆ.

ಚಿನ್ನದ ಕಳ್ಳಸಾಗಣೆಯಂತಹ ಗಂಭೀರ ಆರ್ಥಿಕ ಅಪರಾಧ ತಡೆಯಲು ಸರ್ಕಾರ 'ಕೊಫೆಪೋಸಾ' ಕಾಯ್ದೆಯನ್ನು ಬಳಸುತ್ತದೆ. ಇದರ ಅಡಿಯಲ್ಲಿ ಏಪ್ರಿಲ್ 22, 2025 ರಂದು ರನ್ಯಾ ರಾವ್, ತೆಲುಗು ನಟ ತರುಣ್ ಕೊಂಡೂರು ಮತ್ತು ಹವಾಲಾ ಡೀಲರ್ ಸಾಹಿಲ್ ಜೈನ್ ಅವರನ್ನು ಒಂದು ವರ್ಷ ಕಾಲ ಮುನ್ನೆಚ್ಚರಿಕೆ ಬಂಧನದಲ್ಲಿ ಇಡಲು ಆದೇಶಿಸಲಾಗಿತ್ತು.

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಕೂಡ ಈ ಬಂಧನ ಕಾನೂನುಬದ್ಧವಾಗಿದೆ ಎಂದು ಎತ್ತಿ ಹಿಡಿದಿತ್ತು. ಈಗ ಸರಿಯಾಗಿ ಒಂದು ವರ್ಷ ಅಂದರೆ ಏಪ್ರಿಲ್ 22, 2026 ಕ್ಕೆ ಇವರ ಬಂಧನದ ಅವಧಿ ಮುಗಿಯುತ್ತಿದೆ. ಹಾಗಾಗಿ ಪರಪ್ಪನ ಅಗ್ರಹಾರ ಜೈಲಿನಿಂದ ಈ ಮೂವರು ಬಿಡುಗಡೆಯಾಗಲಿದ್ದಾರೆ.

ಈ ಪ್ರಕರಣದಲ್ಲಿ ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಹೆಸರೂ ಕೇಳಿಬಂದಿತ್ತು. ರನ್ಯಾ ರಾವ್ ಅವರು ದುಬೈನಿಂದ ಬಂದಾಗ ಅವರನ್ನ ಪಿಕ್-ಅಪ್ ಮಾಡಿಕೊಳ್ಳಲು ರಾಜ್ಯ ಸರ್ಕಾರದ ಅಧಿಕೃತ ಕಾರು ಬಳಕೆಯಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ಇದರಿಂದಾಗಿ ರಾಮಚಂದ್ರ ರಾವ್ ಅವರನ್ನು ಸರ್ಕಾರ ಮೊದಲು ರಜೆ ಮೇಲೆ ಕಳುಹಿಸಿತ್ತು, ನಂತರ ಅಮಾನತು ಕೂಡ ಮಾಡಲಾಗಿತ್ತು. ಅವರ ಕಚೇರಿಯಲ್ಲೇ ನಡೆದ ಕೆಲವು ವಿಡಿಯೋ ವಿವಾದಗಳು ಅವರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದ್ದವು.

ಜೈಲಿನಿಂದ ಹೊರಬಂದಾಕ್ಷಣ ರನ್ಯಾ ರಾವ್ ಅವರ ಸಂಕಷ್ಟಗಳೇನೂ ಮುಗಿಯಲ್ಲ. ಡಿಆರ್‌ಐ ಈಗಾಗಲೇ 350 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.

7 ವರ್ಷ ಶಿಕ್ಷೆ ಭೀತಿ: ಕಸ್ಟಮ್ಸ್ ಕಾಯ್ದೆಯ ಅಡಿಯಲ್ಲಿ ಇವರಿಗೆ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ ನೀಡುವಂತೆ ಡಿಆರ್‌ಐ ಮನವಿ ಮಾಡಿದೆ.

ವಿಚಾರಣೆ ಮುಂದುವರಿಕೆ: ಈಗಿನ ಬಿಡುಗಡೆ ಕೇವಲ 'ಕೊಫೆಪೋಸಾ' ಬಂಧನದಿಂದ ಮಾತ್ರ. ಆದರೆ ಚಿನ್ನದ ಸ್ಮಗ್ಲಿಂಗ್ ಪ್ರಕರಣದ ಅಸಲಿ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದ್ದು, ಅವರು ವಿಚಾರಣೆಗೆ ಹಾಜರಾಗಲೇಬೇಕಾಗುತ್ತದೆ.

ಬೆಳ್ಳಿತೆರೆಯ ಮೇಲೆ ಮಿಂಚಬೇಕಿದ್ದ ನಟಿ, ಈಗ ಕೋಟ್ಯಂತರ ರೂಪಾಯಿ ಚಿನ್ನದ ಕಳ್ಳಸಾಗಣೆ ದಂಧೆಯಲ್ಲಿ ಸಿಲುಕಿ ಜೈಲು ಹಕ್ಕಿಯಾಗಿದ್ದು ಮಾತ್ರ ದುರದೃಷ್ಟಕರ.

Latest News