ಖಾಸಗಿ ಕಂಪನಿಗಳಿಗೆ ಮಾತ್ರ 20% ಲಾಭ - ಅಬಕಾರಿ ಸುಂಕದ ಆಟದ ಹಿಂದಿನ ಅಸಲಿ ಕೈಚಳಕ ಬಿಚ್ಚಿಟ್ಟ ಕಾಂಗ್ರೆಸ್!!

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆ ಅನ್ನೋದು ಸಾಮಾನ್ಯ ಜನರ ಪಾಕೆಟ್‌ಗೆ ಕತ್ತರಿ ಹಾಕುತ್ತಲೇ ಇದೆ. ಇದರ ಬೆನ್ನಲ್ಲೇ ಈಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಅಂಕಿ-ಅಂಶಗಳ ಸಮೇತ ಗಂಭೀರ ಆರೋಪ ಮಾಡಿದ್ದಾರೆ. "ಕಳೆದ 11 ವರ್ಷಗಳಿಂದ ಮೋದಿ ಸರ್ಕಾರ ದೇಶದ ಜನರಿಂದ ತೈಲ ತೆರಿಗೆ ಹೆಸರಿನಲ್ಲಿ ಭರ್ಜರಿ ಲೂಟಿ ಮಾಡುತ್ತಿದೆ" ಎಂದು ಸುರ್ಜೇವಾಲ ಆಕ್ರೋಶ ಹೊರಹಾಕಿದ್ದಾರೆ.

ಅಂಕಿ-ಅಂಶಗಳ ಸಮೇತ ಮೋದಿ ಸರ್ಕಾರಕ್ಕೆ ಸುರ್ಜೇವಾಲ ಕೌಂಟರ್ | Photo Credit: www.businesstoday.in
ಅಂಕಿ-ಅಂಶಗಳ ಸಮೇತ ಮೋದಿ ಸರ್ಕಾರಕ್ಕೆ ಸುರ್ಜೇವಾಲ ಕೌಂಟರ್ | Photo Credit: www.businesstoday.in

₹43 ಲಕ್ಷ ಕೋಟಿ ಕಲೆಕ್ಷನ್! ದಿನಕ್ಕೆ ₹1,000 ಕೋಟಿ ಲಾಭ!

ಸುರ್ಜೇವಾಲ ಅವರ ಪ್ರಕಾರ, ಕಳೆದ 11 ವರ್ಷಗಳಲ್ಲಿ ಮೋದಿ ಸರ್ಕಾರ ಕೇವಲ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯಿಂದಲೇ ಬರೋಬ್ಬರಿ ₹43 ಲಕ್ಷ ಕೋಟಿ ಹಣವನ್ನು ಜನರ ಜೇಬಿನಿಂದ ಲೂಟಿ ಮಾಡಿದೆ. ಇದನ್ನು ಲೆಕ್ಕ ಹಾಕಿದರೆ, 2014 ರಿಂದ ಪ್ರತಿ ದಿನಕ್ಕೆ ಬರೋಬ್ಬರಿ ₹1,000 ಕೋಟಿ ತೆರಿಗೆ ಹಣ ಸರ್ಕಾರದ ಬೊಕ್ಕಸ ಸೇರುತ್ತಿದೆ! ಅಗತ್ಯ ಇಂಧನವನ್ನು ಸರ್ಕಾರ ಲಾಭ ಮಾಡಿಕೊಳ್ಳುವ ಬ್ಯುಸಿನೆಸ್ ಆಗಿ ಬದಲಾಯಿಸಿದೆ ಎಂದು ಅವರು ಕಿಡಿಕಾರಿದ್ದಾರೆ.

2014 ವರ್ಸಸ್ 2026: ಬೆಲೆಗಳ ಲೆಕ್ಕಾಚಾರ ಹೀಗಿದೆ

ಕಾಂಗ್ರೆಸ್ ಅವಧಿಗೂ ಇಂದಿನ ಬೆಲೆಗಳಿಗೂ ಸುರ್ಜೇವಾಲ ದೊಡ್ಡ ಹೋಲಿಕೆ ನೀಡಿದ್ದಾರೆ:

ಪೆಟ್ರೋಲ್/ಡೀಸೆಲ್ ದರ: ಮೇ 26, 2014 ರಂದು (ಯುಪಿಎ ಅವಧಿಯಲ್ಲಿ) ಪೆಟ್ರೋಲ್ ಬೆಲೆ ಲೀಟರ್‌ಗೆ ₹71.41 ಮತ್ತು ಡೀಸೆಲ್ ₹56.71 ಇತ್ತು. ಆದರೆ ಇಂದು ದೆಹಲಿಯಲ್ಲಿ ಪೆಟ್ರೋಲ್ ₹102.92 ಮತ್ತು ಡೀಸೆಲ್ ₹90.99 ಕ್ಕೆ ತಲುಪಿದೆ. ಇನ್ನು ಸಿಎನ್‌ಜಿ (CNG) ಬೆಲೆಯನ್ನು ಕೂಡ ಕೆಜಿಗೆ ₹2 ಹೆಚ್ಚಿಸಿ ₹90 ಕ್ಕೆ ತರಲಾಗಿದೆ.

ಅಂತರರಾಷ್ಟ್ರೀಯ ಮಾರ್ಕೆಟ್ ಸುಳ್ಳು: 2014 ರಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 108 ಡಾಲರ್ ಇತ್ತು. ಆದರೆ ಇತ್ತೀಚಿನ ಯುದ್ಧದ ಮುಂಚಿನ ಲೆಕ್ಕ ನೋಡಿದರೆ ಅದು ಬ್ಯಾರೆಲ್‌ಗೆ ಕೇವಲ 70 ಡಾಲರ್‌ಗೆ ಕುಸಿದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರಕಾರ ಇವತ್ತು ದೇಶದಲ್ಲಿ ಪೆಟ್ರೋಲ್ ಬೆಲೆ ₹61.60 ಮತ್ತು ಡೀಸೆಲ್ ಬೆಲೆ ₹56.99 ಇರಬೇಕಿತ್ತು. ಆದರೆ ಉಳಿದದ್ದೆಲ್ಲಾ ಕೇವಲ ಬಿಜೆಪಿಯ ಲೂಟಿ ಎಂದು ಕಾಂಗ್ರೆಸ್ ದೂರಿದೆ.

ಅಬಕಾರಿ ಸುಂಕದ ಆಟ ಮತ್ತು ಖಾಸಗಿ ಕಂಪನಿಗಳಿಗೆ ಲಾಭ!

ಮೋದಿ ಸರ್ಕಾರ ಬಂದಾಗಿನಿಂದ ಪೆಟ್ರೋಲ್ ಮೇಲೆ ಸರಾಸರಿ ₹21.60 ಮತ್ತು ಡೀಸೆಲ್ ಮೇಲೆ ₹12.80 ಎಕ್ಸೈಸ್ ಡ್ಯೂಟಿ (ಅಬಕಾರಿ ಸುಂಕ) ಹಾಕಲಾಗುತ್ತಿದೆ. ಅಂದರೆ ನಾವು ಹಾಕಿಸುವ ಪೆಟ್ರೋಲ್ ದುಡ್ಡಿನಲ್ಲಿ ಶೇಕಡಾ 23.3% ಮತ್ತು ಡೀಸೆಲ್‌ನಲ್ಲಿ 21.4% ನೇರವಾಗಿ ಸರ್ಕಾರದ ಖಾತೆಗೆ ಹೋಗ್ತಾ ಇದೆ.

ಕೈಚಳಕದ ಆರೋಪ: ಸರ್ಕಾರ ಬರೋಬ್ಬರಿ 21 ಬಾರಿ ಅಬಕಾರಿ ಸುಂಕವನ್ನು ಬದಲಾಯಿಸಿದ್ದು, ಅದರಲ್ಲಿ 12 ಬಾರಿ ಹೆಚ್ಚಳ ಮಾಡಿದೆ. ಇತ್ತೀಚೆಗೆ ಮಾರ್ಚ್ 27, 2026 ರಂದು ಪೆಟ್ರೋಲ್ ಮೇಲಿನ ಸುಂಕವನ್ನು ₹13 ರಿಂದ ₹10 ಕ್ಕೆ ಮತ್ತು ಡೀಸೆಲ್ ಮೇಲಿನ ಸುಂಕವನ್ನು ₹10 ರಿಂದ ಸೊನ್ನೆಗೆ ಇಳಿಸುವುದಾಗಿ ಸರ್ಕಾರ ಅನೌನ್ಸ್ ಮಾಡಿತ್ತು. ಆದರೆ ಇದರಿಂದ ಸಾಮಾನ್ಯ ಜನರಿಗೆ ಒಂದು ರೂಪಾಯಿ ಲಾಭವೂ ಸಿಗಲಿಲ್ಲ. ಬದಲಿಗೆ ಇದರ 20% ನಷ್ಟು ಫಾಯ್ದೆ ನಯಾರಾ ಎನರ್ಜಿ ಮತ್ತು ರಿಲಯನ್ಸ್‌ನಂತಹ ಖಾಸಗಿ ತೈಲ ಕಂಪನಿಗಳ ಪಾಲಾಗಿದೆ ಎಂದು ಸುರ್ಜೇವಾಲ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಎಲೆಕ್ಷನ್ ಮುಗಿಯಿತು, ಬೆಲೆ ಏರಿತು! ಇದು ಬಿಜೆಪಿಯ ಕುತಂತ್ರ?

ಚುನಾವಣೆಗಳಿಗೂ ತೈಲ ಬೆಲೆ ಏರಿಕೆಗೂ ದೊಡ್ಡ ಕನೆಕ್ಷನ್ ಇದೆ ಎಂದು ಸುರ್ಜೇವಾಲ ಉದಾಹರಣೆ ಸಮೇತ ವಿವರಿಸಿದ್ದಾರೆ:

2014 & 2015: ಸಾರ್ವತ್ರಿಕ ಚುನಾವಣೆ ಮತ್ತು ದೆಹಲಿ ಎಲೆಕ್ಷನ್ ಮುಗಿದ ತಕ್ಷಣ ಫೆಬ್ರವರಿಯಲ್ಲಿ ಬೆಲೆ ಏರಿಸಲಾಯಿತು.

2019: ಲೋಕಸಭೆ ಎಲೆಕ್ಷನ್ ರಿಸಲ್ಟ್ ಮುಗಿದ ಮರುದಿನವೇ (ಮೇ 20) ರೇಟ್ ಜಾಸ್ತಿ ಮಾಡಲಾಯಿತು.

2022: ಉತ್ತರ ಪ್ರದೇಶ ಚುನಾವಣೆ ಮುಗಿದ ಕೇವಲ 16 ದಿನಗಳಲ್ಲಿ 14 ಬಾರಿ ಬೆಲೆ ಹೆಚ್ಚಿಸಲಾಯಿತು.

ಈಗ (2026): ಈಗ ಮತ್ತೆ ಚುನಾವಣೆ ಮುಗಿಯುತ್ತಿದ್ದಂತೆ, ಮೇ 15 ರಂದು ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಬೆಲೆಗಳನ್ನು ಏರಿಸಲಾಗಿದೆ. ಇದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಎಂದು ಅವರು ಹೇಳಿದ್ದಾರೆ.

ಗ್ಯಾಸ್ ಸಿಲಿಂಡರ್ ಬೆಲೆಯಲ್ಲೂ ಭಾರಿ ಶಾಕ್!

ಇನ್ನು ಅಡುಗೆ ಅನಿಲದ (LPG) ಕಥೆಯಂತೂ ಕೇಳಲೇಬೇಡಿ. 2014 ರಲ್ಲಿ ₹414 ಇದ್ದ ಗೃಹಬಳಕೆಯ ಸಿಲಿಂಡರ್ ಬೆಲೆ ಇವತ್ತು ₹915.5 ಕ್ಕೆ ಬಂದು ನಿಂತಿದೆ. ಅಂದರೆ ಬರೋಬ್ಬರಿ 121.6% (₹501.5) ಬೆಲೆ ಏರಿಕೆಯಾಗಿದೆ. ಜಾಗತಿಕವಾಗಿ ಎಲ್‌ಪಿಜಿ ಬೆಲೆ 38.5% ಕಮ್ಮಿಯಾಗಿದ್ದರೂ ಭಾರತದಲ್ಲಿ ಮಾತ್ರ ಬೆಲೆ ಗಗನಕ್ಕೇರಿದೆ!

ವಾಣಿಜ್ಯ ಸಿಲಿಂಡರ್ (19 ಕೆಜಿ) ಬೆಲೆ ₹1,241 ರಿಂದ ಇವತ್ತು ₹3,152 ಕ್ಕೆ ಏರಿದೆ.

ಇನ್ನು ನಮ್ಮ ಬೆಂಗಳೂರಿನಲ್ಲಿ 5 ಕೆಜಿ ಸಣ್ಣ ಸಿಲಿಂಡರ್ ಬೆಲೆಯನ್ನು ಮೇ 1 ರಿಂದ ಜಾರಿಗೆ ಬರುವಂತೆ ₹21.50 ಹೆಚ್ಚಿಸಲಾಗಿದ್ದು, ಅದು ₹340 ಕ್ಕೆ ತಲುಪಿದೆ.

Latest News