Mar 1, 2026 Languages : ಕನ್ನಡ | English

ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ - ಸಿಸಿಟಿವಿ ಕಣ್ಗಾವಲು ಮತ್ತು 'ಲೈವ್ ವೆಬ್‌ಕಾಸ್ಟಿಂಗ್' ನಡುವೆ ಪಿಯು ಪರೀಕ್ಷೆ!!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಾರ್ಚ್ 17 ರವರೆಗೆ ನಡೆಯುವ ಈ ಪರೀಕ್ಷೆಗಾಗಿ ರಾಜ್ಯಾದ್ಯಂತ ಒಟ್ಟು 1,217 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಿದೆ. ಈ ಬಾರಿ ದಾಖಲೆಯ 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 6,46,801 ವಿದ್ಯಾರ್ಥಿಗಳು ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿದ್ದರೆ, 50,540 ಪುನರಾವರ್ತಿತ ಅಭ್ಯರ್ಥಿಗಳು ಮತ್ತು 13,022 ಖಾಸಗಿ ಅಭ್ಯರ್ಥಿಗಳಿದ್ದಾರೆ. ವಿಭಾಗವಾರು ನೋಡುವುದಾದರೆ, ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 2.92 ಲಕ್ಷ ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2.11 ಲಕ್ಷ ಮತ್ತು ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಪರೀಕ್ಷೆಯು ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನಡೆಯಲು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.

ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಹಬ್ಬ - 7.10 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರದ ಘಳಿಗೆ!!
ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಹಬ್ಬ - 7.10 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರದ ಘಳಿಗೆ!!

ಕಟ್ಟುನಿಟ್ಟಿನ ಕಣ್ಗಾವಲು ಮತ್ತು ಸುರಕ್ಷತಾ ಕ್ರಮಗಳು

ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಮಂಡಳಿಯು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ಪ್ರತಿ ಪರೀಕ್ಷಾ ಕೊಠಡಿಯಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಜಿಲ್ಲಾ ಕೇಂದ್ರಗಳಿಂದಲೇ ನೇರವಾಗಿ ವೀಕ್ಷಿಸಬಹುದಾದ 'ವೆಬ್‌ಕಾಸ್ಟಿಂಗ್' ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ವಿಶೇಷವಾಗಿ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ನಕಲಿ ಪ್ರಶ್ನೆಪತ್ರಿಕೆಗಳ ವದಂತಿಗಳ ಮೇಲೆ ನಿಗಾ ಇರಿಸಲು ರಾಜ್ಯ ಮಟ್ಟದಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ತಕ್ಷಣವೇ ದೂರು ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಪೋಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಪರೀಕ್ಷೆಯ ಮೇಲೆ ಏಕಾಗ್ರತೆ ವಹಿಸುವಂತೆ ಶಿಕ್ಷಣ ಮಂಡಳಿ ಮನವಿ ಮಾಡಿದೆ.

ಹಾಜರಾತಿ ಕೊರತೆ ಮತ್ತು ವಿದ್ಯಾರ್ಥಿಗಳ ಮೇಲಿನ ನಿರ್ಬಂಧ

ಈ ವರ್ಷ ನಿಯಮಗಳ ಪ್ರಕಾರ ಶೇಕಡಾ 75 ರಷ್ಟು ಹಾಜರಾತಿ ಹೊಂದಿಲ್ಲದ ಕಾರಣ 1,005 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಲಾಗಿದೆ. ನಿಗದಿತ ಹಾಜರಾತಿ ಇಲ್ಲದ ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್ ವಿತರಿಸಲಾಗಿಲ್ಲ. ಆದಾಗ್ಯೂ, ಕಳೆದ ವರ್ಷಕ್ಕೆ (6,547 ವಿದ್ಯಾರ್ಥಿಗಳು) ಹೋಲಿಸಿದರೆ ಈ ಬಾರಿ ಹಾಜರಾತಿ ಕೊರತೆಯಿಂದ ಪರೀಕ್ಷೆಯಿಂದ ವಂಚಿತರಾದವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಸಮಾಧಾನಕರ ಸಂಗತಿ. ಅನಾರೋಗ್ಯದಂತಹ ಗಂಭೀರ ಕಾರಣಗಳಿಂದ ಗೈರಾದವರಿಗೆ ನಿಯಮಾನುಸಾರ ವಿನಾಯಿತಿ ನೀಡಲಾಗಿದ್ದು, ಉಳಿದ ಅರ್ಹರಲ್ಲದ ವಿದ್ಯಾರ್ಥಿಗಳಿಗೆ ಮುಂದಿನ ಎರಡು ಮತ್ತು ಮೂರನೇ ಹಂತದ ಪರೀಕ್ಷೆಗಳಲ್ಲಿ ಖಾಸಗಿ ಅಭ್ಯರ್ಥಿಗಳಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಅತ್ಯಂತ ಪಾರದರ್ಶಕವಾಗಿ ಮತ್ತು ಶಿಸ್ತುಬದ್ಧವಾಗಿ ಆರಂಭವಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.