ಪೊಲೀಸರ ನೈತಿಕತೆ ಹಾಳು ಮಾಡ್ತಿರೋ ನಿರ್ಧಾರಕ್ಕೆ ಬಿಡಲ್ಲ - ಆಳಂದ ದರ್ಗಾ ಕೇಸ್ ವಾಪಸ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಮುತಾಲಿಕ್!!

ಕಲಬುರ್ಗಿಯ ಲಾಡ್ಲೆ ಮಶಾಕ್ ದರ್ಗಾ ಗಲಭೆ ಕೇಸ್ ವಾಪಸ್ ಪಡೆದಿರೋ ಸರ್ಕಾರದ ನಿರ್ಧಾರಕ್ಕೆ ಈಗ ಹಿಂದೂ ಸಂಘಟನೆಗಳಿಂದ ಭಾರಿ ಆಕ್ರೋಶ ವ್ಯಕ್ತವಾಗ್ತಿದೆ. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಸರ್ಕಾರದ ವಿರುದ್ಧ ಸಖತ್ ಆಕ್ರೋಶ ಹೊರಹಾಕಿದ್ದಾರೆ. "ಪೊಲೀಸರ ನೈತಿಕತೆ ಹಾಳು ಮಾಡ್ತಿರೋ ಈ ನಿರ್ಧಾರದ ವಿರುದ್ಧ ನಾವು ಸುಮ್ಮನೆ ಕೂರಲ್ಲ, ಕೋರ್ಟ್‌ನಲ್ಲಿ ಪಿ.ಐ.ಎಲ್. (PIL) ಹಾಕಿ ಇದನ್ನ ರದ್ದು ಮಾಡಿಸ್ತೀವಿ" ಅಂತ ಸರ್ಕಾರಕ್ಕೆ ನೇರವಾಗಿಯೇ ಸವಾಲು ಹಾಕಿದ್ದಾರೆ.

ಆಳಂದ ಗಲಭೆಕೋರರಿಗೆ ಕ್ಲೀನ್ ಚೀಟ್ ಕೊಟ್ಟಿದ್ದಕ್ಕೆ ಶ್ರೀರಾಮಸೇನೆ ಗರಂ
ಆಳಂದ ಗಲಭೆಕೋರರಿಗೆ ಕ್ಲೀನ್ ಚೀಟ್ ಕೊಟ್ಟಿದ್ದಕ್ಕೆ ಶ್ರೀರಾಮಸೇನೆ ಗರಂ

ಅಸಲಿ ಇತಿಹಾಸವೇ ಬೇರೆ ಇದೆ!

ದರ್ಗಾದ ಹಿನ್ನೆಲೆ ಬಗ್ಗೆ ಮಾತನಾಡಿದ ಪ್ರಮೋದ್ ಮುತಾಲಿಕ್, "ಅಲ್ಲಿರೋದು ರಾಘವ ಚೈತನ್ಯರು ಪ್ರತಿಷ್ಠಾಪನೆ ಮಾಡಿದ್ದ ಪವಿತ್ರವಾದ ಈಶ್ವರ ಲಿಂಗ. ಆದರೆ, ಮುಸ್ಲಿಮರು ಅದನ್ನ ಅತಿಕ್ರಮಣ ಮಾಡಿಕೊಂಡು ದರ್ಗಾ ಅಂತ ಮಾಡಿಕೊಂಡಿದ್ದಾರೆ, ಅಲ್ಲಿ ಉರೂಸ್ ಕೂಡ ಮಾಡ್ತಾರೆ. ಇಷ್ಟೇ ಅಲ್ಲ, ಎರಡು ವರ್ಷಗಳ ಹಿಂದೆ ಆ ಪವಿತ್ರ ಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದರು. ಇಂಥ ಇತಿಹಾಸ ಇರೋ ಜಾಗದಲ್ಲಿ ನಮ್ಮ ಸಂಸ್ಕೃತಿ ಉಳಿಸೋಕೆ ನಾವೆಲ್ಲಾ ಸೇರಿ ಹೋರಾಟ ಮಾಡೋಕೆ ಹೋದ್ರೆ, ಅಲ್ಲಿ ಭೀಕರ ಸಂಘರ್ಷ ನಡೀತು. ನಮ್ಮನ್ನ ದರ್ಗಾದ ಒಳಗೆ ಬಿಡಲೇ ಇಲ್ಲ. ಇಷ್ಟಕ್ಕೂ ನನ್ನನ್ನ ಕಲಬುರ್ಗಿ ಬಾರ್ಡರ್‌ನಲ್ಲೇ ತಡೆದು, ಜಿಲ್ಲೆಗೆ ಎಂಟ್ರಿ ಕೊಡದಂತೆ ಬ್ಯಾನ್ ಮಾಡಿದ್ದರು" ಅಂತ ಹಳೇ ಘಟನೆಯನ್ನ ನೆನಪಿಸಿಕೊಂಡಿದ್ದಾರೆ.

ಪೊಲೀಸರ ಮೇಲೆಯೇ ಅಟ್ಯಾಕ್ ಮಾಡಿದ್ರು!

"ಆ ಸಮಯದಲ್ಲಿ ಅಲ್ಲಿ ಏನಾಯ್ತು ಅನ್ನೋದು ಇಡೀ ರಾಜ್ಯಕ್ಕೆ ಗೊತ್ತು" ಎಂದ ಮುತಾಲಿಕ್, "ಅಲ್ಲಿರೋ ಮುಸ್ಲಿಂ ಗೂಂಡಾಗಳು ಕಾನೂನನ್ನು ಕೈಗೆ ತಗೊಂಡು ನೇರವಾಗಿ ಪೊಲೀಸರ ಮೇಲೆಯೇ ಅಟ್ಯಾಕ್ ಮಾಡಿದ್ದರು. ಎಷ್ಟರ ಮಟ್ಟಿಗೆ ಅಂದ್ರೆ, ಗಲಭೆ ಕಂಟ್ರೋಲ್ ಮಾಡೋಕೆ ಬಂದಿದ್ದ ಸ್ವತಃ ಎಸ್ಪಿ (SP) ಮತ್ತು ಡಿಸಿ (DC) ಅವರನ್ನೇ ಅಲ್ಲಿಂದ ಓಡಿಸುವಂತೆ ದಾಂಧಲೆ ನಡೆಸಿದ್ದರು. ಪೊಲೀಸರ ಮೇಲೆ ಕಲ್ಲು ತೂರಿ, ರೌಡಿಸಂ ಮಾಡಿದ ಆ ಗೂಂಡಾಗಳ ಮೇಲಿರೋ ಕೇಸ್‌ಗಳನ್ನು ಈಗ ಈ ಸರ್ಕಾರ ವಾಪಸ್ ಪಡಿತಾ ಇದೆಯಲ್ಲ, ಇದು ಎಷ್ಟರ ಮಟ್ಟಿಗೆ ಸರಿ? ಯಾವ ನ್ಯಾಯ ಇದು?" ಅಂತ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ.

ಪೊಲೀಸರ ಧೈರ್ಯ ಮುರಿಯಬೇಡಿ!

ಸರ್ಕಾರದ ಈ ನಡೆ ಇಡೀ ಪೊಲೀಸ್ ಇಲಾಖೆಯ ನೈತಿಕತೆಯನ್ನೇ ಕುಸಿಯುವಂತೆ ಮಾಡುತ್ತದೆ ಎಂದು ಮುತಾಲಿಕ್ ಆತಂಕ ವ್ಯಕ್ತಪಡಿಸಿದ್ದಾರೆ. "ರಾಜ್ಯದಲ್ಲಿ ಅಸಲು ಪೊಲೀಸ್ ಇಲಾಖೆ ಇರೋದು ಏತಕ್ಕೆ? ಹಗಲಿರುಳು ಕಷ್ಟಪಟ್ಟು ರೌಡಿಗಳನ್ನ, ಗೂಂಡಾಗಳನ್ನ ಹಿಡಿಯೋಕೆ ಅಲ್ವಾ? ಆದರೆ, ನೀವು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಗೂಂಡಾಗಳ ಕೇಸ್ ವಾಪಸ್ ಪಡೆದರೆ, ಪೊಲೀಸರ ಧೈರ್ಯ ಮತ್ತು ನೈತಿಕತೆ ಸಂಪೂರ್ಣ ಹಾಳಾಗುತ್ತೆ. ಮುಂದೆ ಇಂಥದ್ದೇನಾದ್ರೂ ಗಲಭೆ ನಡೆದರೆ ಪೊಲೀಸರು ರಕ್ಷಣೆ ಕೊಡೋಕೆ ಮುಂದೆ ಬರಲ್ಲ, ಸುಮ್ಮನೆ ಕೈಕಟ್ಟಿ ಕೂರಬೇಕಾಗುತ್ತೆ" ಎಂದಿದ್ದಾರೆ.

ಮುಂದುವರಿದು, "ಪೊಲೀಸರು ಕಷ್ಟಪಟ್ಟು ಇವರನ್ನ ಅರೆಸ್ಟ್ ಮಾಡ್ತಾರೆ, ಎಫ್‌ಐಆರ್ ಹಾಕ್ತಾರೆ, ಜೈಲಿಗೆ ಕಳಿಸ್ತಾರೆ. ಆದರೆ, ಸರ್ಕಾರ ಬಂದ ತಕ್ಷಣ ಈ ತರಹ ಕೇಸ್ ವಾಪಸ್ ತಗೊಂಡ್ರೆ, ಪೊಲೀಸರ ಮನಸ್ಥಿತಿ ಏನಾಗಬೇಡ? 'ನಾವು ಯಾಕೆ ಅರೆಸ್ಟ್ ಮಾಡಬೇಕು? ಯಾಕೆ ಕೇಸ್ ಹಾಕಬೇಕು? ಹೆಂಗೂ ಸರ್ಕಾರ ಕೇಸ್ ವಾಪಸ್ ತಗೊಳ್ಳುತ್ತೆ ಅಲ್ವಾ' ಅನ್ನೋ ನಿರಾಸೆ ಪೊಲೀಸರಲ್ಲಿ ಬಂದುಬಿಡುತ್ತೆ. ಗೂಂಡಾಗಿರಿ ಮಾಡಿದವರ ಮೇಲೆ ಕಠಿಣ ಕ್ರಮ ತಗೋಬೇಕಾದ ಸರ್ಕಾರ, ಅವರನ್ನ ಹೀಗೆ ರಾಜಾರೋಷವಾಗಿ ಬಿಡ್ತಿರೋದು ಸಮಾಜಕ್ಕೆ ತುಂಬಾ ಡೇಂಜರಸ್" ಅಂತ ಎಚ್ಚರಿಸಿದ್ದಾರೆ.

ಕೋರ್ಟ್‌ನಲ್ಲಿ ಫೈಟ್ ಮಾಡ್ತೀವಿ!

"ಯಾರೋ ಮಾಡಿದ ತಪ್ಪುಗಳಿಗೆ, ಪೊಲೀಸರ ಮೇಲೆ ಹಲ್ಲೆ ಮಾಡಿದ ಗೂಂಡಾಗಳಿಗೆ ಕ್ಲೀನ್ ಚೀಟ್ ಕೊಡೋಕೆ ಹೊರಟಿರೋ ಸರ್ಕಾರದ ಈ ನಡೆ ಒಪ್ಪಲು ಸಾಧ್ಯವೇ ಇಲ್ಲ. ನಾವು ಕಾನೂನಾತ್ಮಕವಾಗಿ ಇದರ ವಿರುದ್ಧ ಹೋರಾಟ ಮಾಡೇ ಮಾಡ್ತೀವಿ. ಹೈಕೋರ್ಟ್‌ನಲ್ಲಿ ಪಿ.ಐ.ಎಲ್. ದಾಖಲಿಸುವ ಮೂಲಕ ಸರ್ಕಾರದ ಈ ಜನವಿರೋಧಿ ಆದೇಶವನ್ನು ರದ್ದು ಮಾಡಿಸುವ ಕೆಲಸ ಮಾಡ್ತೀವಿ" ಅಂತ ಪ್ರಮೋದ್ ಮುತಾಲಿಕ್ ಖಡಕ್ ಆಗಿ ಹೇಳಿದ್ದಾರೆ.

Latest News