ಧಾರವಾಡದಲ್ಲಿ ಶಿರಡಿ ಸಾಯಿ ಮಂದಿರದ ಅವ್ಯವಹಾರದ ಬಗ್ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತೊಮ್ಮೆ ಧ್ವನಿ ಎತ್ತಿದ್ದಾರೆ. ಹುಬ್ಬಳ್ಳಿಯ ಶಿರಡಿ ಮಂದಿರದಲ್ಲಿ ನಡೆಯುತ್ತಿರುವ ಅನೈತಿಕತೆ, ದಾಖಲೆಗಳ ತಿದ್ದುಪಡಿ ಹಾಗೂ ಹುಂಡಿ ಹಣದ ಆಡಿಟಿಂಗ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುತಾಲಿಕ್ ಅವರ ಹೇಳಿಕೆಯ ಪ್ರಕಾರ, ಈ ವಿಷಯವನ್ನು ಅವರು ಎರಡು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿ (ಡಿಸಿ) ಅವರ ಗಮನಕ್ಕೆ ತಂದಿದ್ದರು.
ಅಲ್ಲದೆ ರಾಷ್ಟ್ರಮಟ್ಟದ ಸರ್ಕಾರಿ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರು. ಆದರೆ ಇದುವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದನ್ನು ಅವರು ಪ್ರಶ್ನಿಸಿದ್ದಾರೆ. “ಆಡಳಿತ ಮಂಡಳಿಯ ಜನರು ನಮಗೆ ಮನವಿ ಕೊಟ್ಟು ಏನು ಮಾಡಿದ್ರಿ ಅಂತ ಕೇಳುತ್ತಿದ್ದಾರೆ. ಸೊಕ್ಕಿನಿಂದ ಮಾತನಾಡುತ್ತಿದ್ದಾರೆ. ದಾಖಲೆಗಳನ್ನು ಮುಚ್ಚಿಡುತ್ತಿದ್ದಾರೆ, ತಿದ್ದುಪಡಿ ಮಾಡುತ್ತಿದ್ದಾರೆ” ಎಂದು ಮುತಾಲಿಕ್ ಅವ್ರು ಆರೋಪಿಸಿದರು.
ಹೌದು ಡಿ.ಆರ್. ಅಧಿಕಾರಿಗಳ ಎದುರು ನಡೆದ ಸಭೆಯಲ್ಲಿ ಹುಂಡಿ ಹಣ ಸೇರಿದಂತೆ ಆಡಿಟಿಂಗ್‌ನಲ್ಲಿ ನಡೆದಿರುವ ಅಕ್ರಮಗಳು ಬಹಿರಂಗವಾಗಿವೆ ಎಂದು ಅವರು ಹೇಳಿದರು. “ಆಡಿಟಿಂಗ್ ಹೇಗೆ ಮೋಸ ಮಾಡಿದ್ದಾರೆ ಅನ್ನೋದರ ಬಗ್ಗೆ 10 ಪಾಯಿಂಟ್‌ಗಳ ದಾಖಲೆ ಸಮೇತ ಕೊಟ್ಟಿದ್ದೇವೆ. ಆದರೆ ಇನ್ನೂ ತನಿಖೆ ಪ್ರಾರಂಭವಾಗಿಲ್ಲ, ಕ್ರಮ ಕೈಗೊಳ್ಳಲಾಗಿಲ್ಲ” ಎಂದು ಮುತಾಲಿಕ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮುತಾಲಿಕ್ ಅವರ ಪ್ರಕಾರ, ಈ ಪ್ರಕರಣದಲ್ಲಿ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿ ತನಿಖೆ ನಡೆಸಬೇಕು. “ಡಿಸಿಯವರೆಗೆ ಕೊನೆಯ ಎಚ್ಚರಿಕೆ ಕೊಟ್ಟಿದ್ದೇವೆ. ಇನ್ನೂ ಕ್ರಮ ತೆಗೆದುಕೊಳ್ಳದಿದ್ದರೆ ದೇವಸ್ಥಾನ ಎದುರುಗಡೆ, ಡಿ.ಆರ್. ಕಚೇರಿ ಎದುರುಗಡೆ ಕುಳಿತು ಪ್ರತಿಭಟನೆ ನಡೆಸುತ್ತೇವೆ” ಎಂದು ಅವರು ಎಚ್ಚರಿಕೆ ನೀಡಿದರು. “ದೇವಸ್ಥಾನದ ಮುಂಭಾಗದಲ್ಲಿ ಕುಳಿತು ಏನಾಗುತ್ತಿದೆ ಅನ್ನೋದನ್ನ ಜನತೆಗೆ ಹೇಳುತ್ತೇವೆ. ಎಲ್ಲದರ ಬಗ್ಗೆ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗಬೇಕು. ಹಳಬರು ಮಾಡಿದರು ತಪ್ಪೇ, ಈಗಿನವರು ಮಾಡಿದರು ತಪ್ಪೇ” ಎಂದು ಮುತಾಲಿಕ್ ಸ್ಪಷ್ಟಪಡಿಸಿದರು.
ಈಗಿನ ಅಧ್ಯಕ್ಷರು ತನಿಖೆ ಆಗಲಿ ಎಂದು ಹೇಳಿದರೂ, ಡಿ.ಆರ್. ಅಧಿಕಾರಿಗಳು ಮಾತ್ರ ಆಟ ಆಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. “ತನಿಖೆ ಮಾಡಲು ನಿಮ್ಮನ್ನು ಅಲ್ಲಿ ಕೂರಿಸಿದ್ದು. ನೀವು ಈ ರೀತಿ ತಡ ಮಾಡಿದರೆ ನಾವು ಒಪ್ಪುವುದಿಲ್ಲ” ಎಂದು ಮುತಾಲಿಕ್ ತೀವ್ರ ಎಚ್ಚರಿಕೆ ನೀಡಿದರು. ಹೌದು ಒಟ್ಟಿನಲ್ಲಿ ಹೇಳಬೇಕು ಅಂದರೆ, ಶಿರಡಿ ಸಾಯಿ ಮಂದಿರದ ಅವ್ಯವಹಾರದ ಬಗ್ಗೆ ಪ್ರಮೋದ್ ಮುತಾಲಿಕ್ ಮತ್ತೊಮ್ಮೆ ಅವರು ಧ್ವನಿ ಎತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ತಡವು ಜನರಲ್ಲಿ ಕುತೂಹಲ ಮತ್ತು ಅಸಮಾಧಾನ ಮೂಡಿಸಿದೆ.