ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಸಿಡಿಮಿಡಿ; ದಲಿತ, ಅಲ್ಪಸಂಖ್ಯಾತ, ಹಿಂದುಳಿದವರ ವಿರೋಧಿ ಎಂದು ಗಂಭೀರ ಆರೋಪ!!

ಚಿಂತಾಮಣಿಯ ಶಾಸಕ ಡಾ. ಎಂ.ಸಿ. ಸುಧಾಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರದೀಪ್ ಈಶ್ವರ್, ಸುಧಾಕರ್ ಅವರು ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ವಿವಿಧ ಸಮುದಾಯಗಳನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರದೀಪ್ ಈಶ್ವರ್-ಎಂ.ಸಿ. ಸುಧಾಕರ್ ನಡುವೆ ರಾಜಕೀಯ ಸಮರ ತೀವ್ರ | Photo Credit: https://www.facebook.com/drmcsudhakar?__tn__=-UC*F|https://x.com/PNimmondige
ಪ್ರದೀಪ್ ಈಶ್ವರ್-ಎಂ.ಸಿ. ಸುಧಾಕರ್ ನಡುವೆ ರಾಜಕೀಯ ಸಮರ ತೀವ್ರ | Photo Credit: https://www.facebook.com/drmcsudhakar?__tn__=-UC*F|https://x.com/PNimmondige

ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಪ್ರದೀಪ್ ಈಶ್ವರ್, “ಚಿಂತಾಮಣಿಯಲ್ಲಿ ದಲಿತರನ್ನು ಟಾರ್ಗೆಟ್ ಮಾಡುತ್ತಿದ್ದೀರ, ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುತ್ತಿದ್ದೀರ, ಹಿಂದುಳಿದವರನ್ನು ಟಾರ್ಗೆಟ್ ಮಾಡುತ್ತಿದ್ದೀರ” ಎಂದು ಆರೋಪಿಸಿದ್ದಾರೆ. ಬಲಿಜಿಗ ಹಾಗೂ ಕುರುಬ ಸಮುದಾಯದ ಬಗ್ಗೆಯೂ ಸುಧಾಕರ್ ಅವರ ನಡೆ ಸರಿಯಿಲ್ಲ ಎಂದು ಟೀಕಿಸಿದ್ದಾರೆ. ಎಸ್‌ಸಿ, ಎಸ್‌ಟಿ ಸಮುದಾಯದವರನ್ನು ತಿಂಗಳುಗಟ್ಟಲೆ ಭೇಟಿಯಾಗುವುದಿಲ್ಲ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.

ಸಂಬಂಧಿಕರಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ ಎಂಬ ಆರೋಪ

ಸುಧಾಕರ್ ವಿರುದ್ಧ ಸ್ವಜನಪಕ್ಷಪಾತದ ಆರೋಪವನ್ನೂ ಪ್ರದೀಪ್ ಈಶ್ವರ್ ಮಾಡಿದ್ದಾರೆ. ತಮ್ಮ ಎಲ್ಲಾ ಪದವಿಗಳನ್ನು ಹಾಗೂ ಅವಕಾಶಗಳನ್ನು ಸಂಬಂಧಿಕರಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಅನ್ಯ ಸಮುದಾಯಗಳನ್ನು ಗುರಿಯಾಗಿಸುವ ಮನಸ್ಥಿತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇದರ ಜೊತೆಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಅವರನ್ನು ವಿನಾಕಾರಣ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಪ್ರದೀಪ್ ಈಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿಡ್ಲಘಟ್ಟದ ಕಾಂಗ್ರೆಸ್ ಅಭ್ಯರ್ಥಿ ರಾಜು ಗೌಡ ಅವರನ್ನೂ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

“ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡಿದ್ದರೂ ನನ್ನನ್ನೂ ವಿನಾಕಾರಣ ಟಾರ್ಗೆಟ್ ಮಾಡಲಾಗುತ್ತಿದೆ” ಎಂದು ಪ್ರದೀಪ್ ಈಶ್ವರ್ ಅಸಮಾಧಾನ ಹೊರಹಾಕಿದ್ದಾರೆ.

‘ನಿನ್ನ ವಿರುದ್ಧ ಸಮರ ನಿರಂತರ’ ಎಂದ ಪ್ರದೀಪ್ ಈಶ್ವರ್

ತಮ್ಮ ವಾಗ್ದಾಳಿಯನ್ನು ಮುಂದುವರಿಸಿರುವ ಪ್ರದೀಪ್ ಈಶ್ವರ್, ಸುಧಾಕರ್ ಅವರನ್ನು ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗಗಳ ವಿರೋಧಿ ಎಂದು ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಸಂಬಂಧಿಕರನ್ನು ಹೊರತುಪಡಿಸಿ ಬೇರೆ ಯಾರನ್ನೂ ಒಪ್ಪಿಕೊಳ್ಳುವುದಿಲ್ಲ ಎಂದು ಟೀಕಿಸಿದ್ದಾರೆ.

“ಏನೇ ಆಗಲಿ ಡಿಕ್ಟೇಟರ್‌, ನಿನ್ನ ವಿರುದ್ಧ ಸಮರ ನಿರಂತರ” ಎಂದು ಹೇಳುವ ಮೂಲಕ ಸುಧಾಕರ್ ವಿರುದ್ಧ ತಮ್ಮ ಹೋರಾಟ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಇದರಿಂದ ಇಬ್ಬರು ಕಾಂಗ್ರೆಸ್ ಶಾಸಕರ ನಡುವಿನ ಆಂತರಿಕ ಭಿನ್ನಮತ ಇದೀಗ ಬಹಿರಂಗ ರಾಜಕೀಯ ಸಮರದ ಸ್ವರೂಪ ಪಡೆದುಕೊಂಡಿದೆ.

ಒಂದೇ ಮಾತಿನಲ್ಲಿ ತಿರುಗೇಟು ನೀಡಿದ ಸುಧಾಕರ್

ಮತ್ತೊಂದೆಡೆ, ತಮ್ಮ ವಿರುದ್ಧ ಸತತವಾಗಿ ಆರೋಪ ಮಾಡುತ್ತಿರುವ ಪ್ರದೀಪ್ ಈಶ್ವರ್ ಅವರಿಗೆ ಎಂ.ಸಿ. ಸುಧಾಕರ್ ನೇರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. “ನಮ್ಮ ಮೌನ ದೌರ್ಬಲ್ಯವಲ್ಲ” ಎಂದು ಹೇಳಿರುವ ಅವರು, ಕಾಂಗ್ರೆಸ್ ಪಕ್ಷ ತಮ್ಮನ್ನು ಗುರುತಿಸಿ ಸಚಿವರನ್ನಾಗಿ ಮಾಡಿತ್ತು ಎಂದು ನೆನಪಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ಸಂಗತಿಗಳೂ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಗಮನದಲ್ಲಿವೆ. ಹೀಗಾಗಿ ಈ ಬಗ್ಗೆ ತಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಹಿರಿಯ ನಾಯಕರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಸಿಎಂ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ನಿರ್ಧಾರದತ್ತ ಕಣ್ಣು

ಪ್ರದೀಪ್ ಈಶ್ವರ್ ಅವರ ನಿರಂತರ ಸಾಮಾಜಿಕ ಜಾಲತಾಣದ ವಾಗ್ದಾಳಿಯ ಹಿನ್ನೆಲೆಯಲ್ಲಿ ಸುಧಾಕರ್ ಇದೀಗ ಪಕ್ಷದ ವರಿಷ್ಠರ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ. ತಾವು ಕಾಂಗ್ರೆಸ್‌ನಲ್ಲಿ ಜವಾಬ್ದಾರಿಯುತ ಶಾಸಕನಾಗಿದ್ದು, ಪಕ್ಷದೊಳಗಿನ ಎಲ್ಲ ವಿಚಾರಗಳೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷರ ಗಮನದಲ್ಲಿವೆ ಎಂದು ಹೇಳಿದ್ದಾರೆ.

ಪಕ್ಷದ ವೇದಿಕೆಯಲ್ಲೇ ಸಮಸ್ಯೆಗಳನ್ನು ಚರ್ಚಿಸಬೇಕು ಎಂಬ ನಿಲುವನ್ನು ಸುಧಾಕರ್ ವ್ಯಕ್ತಪಡಿಸಿದ್ದು, ಸಾರ್ವಜನಿಕವಾಗಿ ಪ್ರತಿಕ್ರಿಯಿಸುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಬಹುದು ಎಂಬ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ.

ಬೆಂಬಲಿಗರಿಗೆ ಬಹಿರಂಗ ಹೇಳಿಕೆ ನೀಡದಂತೆ ಸೂಚನೆ

ಇದೇ ವೇಳೆ, ಎಂ.ಸಿ. ಸುಧಾಕರ್ ಅವರು ಚಿಕ್ಕಬಳ್ಳಾಪುರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಕ್ಷದ ವಿರುದ್ಧವಾಗಲಿ ಅಥವಾ ನಾಯಕರ ವಿರುದ್ಧವಾಗಲಿ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಸೂಚನೆ ನೀಡಿದ್ದಾರೆ.

ಶಾಸಕರು, ಮುಖಂಡರು ಸೇರಿದಂತೆ ಯಾರೇ ಆಗಿರಲಿ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗ ಹೇಳಿಕೆ ನೀಡಬಾರದು. ಇಂತಹ ಹೇಳಿಕೆಗಳಿಂದ ಪಕ್ಷಕ್ಕೂ, ನಾಯಕರಿಗೂ ಮುಜುಗರ ಉಂಟಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಪಕ್ಷದೊಳಗೆ ಯಾವುದೇ ಸಮಸ್ಯೆ ಅಥವಾ ಭಿನ್ನಮತ ಇದ್ದರೂ ಅದನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಬೇಕು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಎಲ್ಲಾ ವಿಚಾರಗಳೂ ತಿಳಿದಿವೆ. ಹೀಗಾಗಿ ಯಾರೂ ಆತುರಪಡಬಾರದು ಎಂದು ತಮ್ಮ ಬೆಂಬಲಿಗರಿಗೆ ಸುಧಾಕರ್ ಸೂಚನೆ ನೀಡಿದ್ದಾರೆ.

ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ರಾಜಕಾರಣದಲ್ಲಿ ಪ್ರದೀಪ್ ಈಶ್ವರ್ ಹಾಗೂ ಎಂ.ಸಿ. ಸುಧಾಕರ್ ನಡುವಿನ ಭಿನ್ನಮತ ಇದೀಗ ಬಹಿರಂಗ ಚರ್ಚೆಯ ವಿಷಯವಾಗಿದೆ. ಒಂದು ಕಡೆ ಪ್ರದೀಪ್ ಈಶ್ವರ್ ಸಾಮಾಜಿಕ ಜಾಲತಾಣಗಳ ಮೂಲಕ ಆರೋಪಗಳನ್ನು ಮುಂದುವರಿಸುತ್ತಿದ್ದರೆ, ಮತ್ತೊಂದೆಡೆ ಸುಧಾಕರ್ ನೇರ ಪ್ರತಿಕ್ರಿಯೆಯಿಂದ ದೂರ ಉಳಿದು ಪಕ್ಷದ ವರಿಷ್ಠರ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕತ್ವ ಈ ಭಿನ್ನಮತವನ್ನು ಯಾವ ರೀತಿಯಲ್ಲಿ ಬಗೆಹರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

Latest News