Feb 16, 2026 Languages : ಕನ್ನಡ | English

ನೆಲಮಂಗಲದಲ್ಲಿ ಭೀಕರ ಅಪಘಾತ - ಡಿವೈಡರ್ ಹಾರಿ ಬಸ್‌ಗೆ ಡಿಕ್ಕಿ ಹೊಡೆದ ಕಾರು, ಐವರು ದುರ್ಮರಣ!!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ಐವರು ದುರ್ಮರಣ ಹೊಂದಿದ ದುಃಖದ ಘಟನೆ ನಡೆದಿದೆ. ನೆಲಮಂಗಲ ಜಿಂದಾಲ್ ಸಮೀಪ ತುಮಕೂರು ಕಡೆಯಿಂದ ಬರುತ್ತಿದ್ದ ಇಂಡಿಕಾ ಕಾರು ಡಿವೈಡರ್ ಹಾರಿ ಎದುರು ದಿಕ್ಕಿನಲ್ಲಿ ಬರುತ್ತಿದ್ದ KSRTC ಬಸ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಾಲಕನು ಆಸ್ಪತ್ರೆಗೆ ದಾಖಲಿಸಿದ ನಂತರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಕುಟುಂಬಗಳ ಕನಸುಗಳು ಕ್ಷಣಗಳಲ್ಲಿ ನಜ್ಜುಗುಜ್ಜು!
ಕುಟುಂಬಗಳ ಕನಸುಗಳು ಕ್ಷಣಗಳಲ್ಲಿ ನಜ್ಜುಗುಜ್ಜು!

ಘಟನೆ ಶುಕ್ರವಾರ ರಾತ್ರಿ ಸಂಭವಿಸಿದ್ದು, ಅಪಘಾತದ ಸದ್ದು ಕೇಳಿ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್‌ನ ಮುಂಭಾಗಕ್ಕೂ ಭಾರೀ ಹಾನಿಯಾಗಿದೆ. ಅಪಘಾತದ ಭೀಕರ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಮೃತರಾದವರಲ್ಲಿ ದೊಡ್ಡಬಳ್ಳಾಪುರದ ಹರ್ಷಿತ್ ಮತ್ತು ನಿಖಿತ್ ಎಂಬವರ ಗುರುತು ಪತ್ತೆಯಾಗಿದ್ದು, ಇತರ ಮೂವರ ಗುರುತು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹರ್ಷಿತ್ ರಾಜನಕುಂಟೆಯ ಸಾಯಿ ವಿದ್ಯಾ ಕಾಲೇಜಿನ ದ್ವಿತೀಯ ವರ್ಷದ ಡಿಗ್ರಿ ವಿದ್ಯಾರ್ಥಿಯಾಗಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ರಾತ್ರಿ 8.30ರವರೆಗೆ ಮನೆಯಲ್ಲಿದ್ದ ಹರ್ಷಿತ್, ಸ್ನೇಹಿತನನ್ನು ಭೇಟಿ ಮಾಡಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದನು. ಆದರೆ ಕೆಲವು ಗಂಟೆಗಳಲ್ಲೇ ಅವನ ಜೀವ ಅಪಘಾತದಲ್ಲಿ ಕೊನೆಗೊಂಡಿರುವುದು ಕುಟುಂಬದವರಿಗೆ ದೊಡ್ಡ ಆಘಾತ ತಂದಿದೆ.

ಅಪಘಾತದ ನಂತರ ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆಯ ಮುಂಭಾಗ ಮೃತ ಹರ್ಷಿತ್ ತಾಯಿ ಮಗನ ಮೃತದೇಹ ತಬ್ಬಿಕೊಂಡು ಕಣ್ಣೀರು ಹಾಕಿದ ದೃಶ್ಯ ಹೃದಯವಿದ್ರಾವಕವಾಗಿತ್ತು. ಕುಟುಂಬಸ್ಥರ ಅಳಲು ಎಲ್ಲರ ಮನಸನ್ನೂ ಮಿಡಿಯುವಂತೆ ಮಾಡಿತು.

ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ನಡೆದ ಮತ್ತೊಂದು ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್, ಬೈಕ್ ಮತ್ತು ಎಕ್ಸ್‌ಯುವಿ ಕಾರಿನ ನಡುವೆ ಸರಣಿ ಡಿಕ್ಕಿ ಸಂಭವಿಸಿ ಆರು ಮಂದಿ ಕಾರಿನಲ್ಲೇ ಮತ್ತು ಒಬ್ಬ ಬೈಕ್ ಸವಾರ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಆ ಘಟನೆ ಮಾಸುವ ಮುನ್ನವೇ ಇದೀಗ ನೆಲಮಂಗಲದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿರುವುದು ಆತಂಕ ಹೆಚ್ಚಿಸಿದೆ.

ರಸ್ತೆ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಗಂಭೀರ ಚರ್ಚೆ ಅಗತ್ಯವಾಗಿದೆ. ವೇಗದ ಚಾಲನೆ, ನಿರ್ಲಕ್ಷ್ಯ ಮತ್ತು ನಿಯಮ ಉಲ್ಲಂಘನೆ ಇಂತಹ ದುರ್ಘಟನೆಗಳಿಗೆ ಕಾರಣವಾಗುತ್ತಿರುವುದಾಗಿ ತಜ್ಞರು ಎಚ್ಚರಿಸಿದ್ದಾರೆ. ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದು ಸಾರ್ವಜನಿಕರ ಮನವಿ.

Latest News