‘Nandus World’ಗೆ ಬಿಗ್ ಶಾಕ್ - ತೆಲುಗಿನ ಫೇಮಸ್ ಯೂಟ್ಯೂಬ್ ಕಪಲ್ ವಿರುದ್ಧ ಯುಕೆ ವೀಸಾ ವಂಚನೆ ಆರೋಪ!!

ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಸಬ್‌ಸ್ಕ್ರೈಬರ್ಸ್ ಹೊಂದಿರೋ ಸೆಲೆಬ್ರಿಟಿ ಯೂಟ್ಯೂಬರ್ಸ್ ಅಂದ್ರೆ ಜನರಿಗೆ ಒಂಥರಾ ನಂಬಿಕೆ. ಅವರ ಲೈಫ್‌ಸ್ಟೈಲ್ ನೋಡಿ ಫ್ಯಾನ್ಸ್ ಫಿದಾ ಆಗ್ತಾರೆ. ಆದ್ರೆ ಅದೇ ನಂಬಿಕೆಯನ್ನು ಬಂಡವಾಳ ಮಾಡ್ಕೊಂಡು ಕೋಟ್ಯಂತರ ರೂಪಾಯಿ ವಂಚನೆ ಮಾಡಿರೋ ಗಂಭೀರ ಆರೋಪವೊಂದು ಈಗ ತೆಲುಗಿನ ಫೇಮಸ್ ಯೂಟ್ಯೂಬ್ ಕಪಲ್ ಮೇಲೆ ಕೇಳಿಬಂದಿದೆ. ಹೌದು, ತಮ್ಮ ‘London Life’ ವಿಡಿಯೋಗಳ ಮೂಲಕವೇ ಭಾರಿ ಫೇಮಸ್ ಆಗಿದ್ದ ‘Nandus World’ ಯೂಟ್ಯೂಬ್ ಚಾನೆಲ್‌ನ ರಮಾನಂದನಾ ಮತ್ತು ಆಕೆಯ ಪತಿ ಜಗರ್ಲಮುಡಿ ಮಧುಕರ್ ಸದ್ಯಕ್ಕೀಗ ಯುಕೆ (UK) ವೀಸಾ ಮತ್ತು ಜಾಬ್ ಫ್ರಾಡ್ ಕೋಲಾಹಲದಲ್ಲಿ ಸಿಲುಕಿದ್ದಾರೆ. ಇದು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿರದೆ, ಈಗ ಮಲ್ಟಿ-ಸ್ಟೇಟ್ ಇನ್ವೆಸ್ಟಿಗೇಷನ್ ಆಗಿ ಬದಲಾಗಿದೆ!

ಯೂಟ್ಯೂಬ್ ಸ್ಟಾರ್ಸ್ ಈಗ ವೀಸಾ ಹಗರಣದ ಆರೋಪಿಗಳು
ಯೂಟ್ಯೂಬ್ ಸ್ಟಾರ್ಸ್ ಈಗ ವೀಸಾ ಹಗರಣದ ಆರೋಪಿಗಳು

ಹೇಗೆ ಶುರುವಾಯ್ತು ಈ ವೀಸಾ ಹಗರಣ?

ಈ ಇಡೀ ವಿವಾದ ಆರಂಭವಾಗಿದ್ದು ಕಳೆದ ವರ್ಷ ನವೆಂಬರ್‌ನಲ್ಲಿ. ಆಂಧ್ರಪ್ರದೇಶದ ಎನ್‌ಟಿಆರ್ (NTR) ಜಿಲ್ಲೆಯ ಇಬ್ರಾಹಿಂಪಟ್ನಂ ಪೊಲೀಸ್ ಸ್ಟೇಷನ್‌ನಲ್ಲಿ ಸಲ್ಲಿಕೆಯಾದ ಒಂದು ದೂರಿನಿಂದ ಈ ಕಪಲ್ ಅಸಲಿ ಮುಖವಾಡ ಕಳಚಿಬಿದ್ದಿದೆ. ಯುಕೆಗೆ ಹೋಗಿ ಕೆಲಸ ಮಾಡಬೇಕು, ಅಲ್ಲಿ ವೀಸಾ ಸ್ಪಾನ್ಸರ್‌ಶಿಪ್ ಸಿಗಬೇಕು ಅಂತ ಆಸೆ ಪಟ್ಟ ನೂರಾರು ಜನರಿಂದ ಈ ದಂಪತಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಅನ್ನೋದು ದೂರಿನ ಸಾರಾಂಶ.

ಎನ್‌ಟಿಆರ್ ಜಿಲ್ಲೆಯ ಕೊತ್ತೂರು ಗ್ರಾಮದ ನಿವಾಸಿ ಶಿವ ಕ್ರಾಂತಿ ಕುಮಾರ್ ಎಂಬುವವರು ಈ ವಂಚನೆ ಜಾಲಕ್ಕೆ ಬಿದ್ದ ಮೊದಲ ಸಂತ್ರಸ್ತ. ಶಿವ ಅವರು ಲಂಡನ್‌ನಲ್ಲಿ ಓದುತ್ತಿದ್ದ ದಿನಗಳಲ್ಲೇ ಮಧುಕರ್ ಪರಿಚಯವಾಗಿತ್ತು. ಓದು ಮುಗಿಸಿ ಇಂಡಿಯಾಕ್ಕೆ ಬಂದ ಶಿವ, ಮತ್ತೆ ಯುಕೆಗೆ ಹೋಗಿ ಸೆಟಲ್ ಆಗಬೇಕು ಅನ್ಕೊಂಡಿದ್ರು. ಅದಕ್ಕಾಗಿ ತಮಗೆ ವೀಸಾ ರಿನ್ಯೂವಲ್ ಮಾಡಿಕೊಡಲು ಮತ್ತು ತಮ್ಮ ಪತ್ನಿಗೆ ‘ಸ್ಪಾನ್ಸರ್‌ಶಿಪ್ ಸರ್ಟಿಫಿಕೇಟ್’ (COS) ಕೊಡಿಸಿ, ಅಲ್ಲಿ ಕೆಲಸ ಕೊಡಿಸುವಂತೆ ಮಧುಕರ್ ಸಹಾಯ ಕೇಳಿದ್ದಾರೆ.

ಬಂದಿದ್ದೇ ಚಾನ್ಸ್ ಅಂತ ಮಧುಕರ್, ತಮಗೆ ‘ಡೆಸ್ಟಿನಿ ಕನ್ಸಲ್ಟೆನ್ಸಿ’ (Destiny Consultancy) ಅನ್ನೋ ಸಂಸ್ಥೆ ಇರೋದಾಗಿ ನಂಬಿಸಿದ್ದಾನೆ. ಶಿವ ಅವರ ತಂದೆ ಮೋಹನ್ ರಾವ್ ಜೊತೆ ಮಾತುಕತೆ ನಡೆಸಿ, ಇಡೀ ಡೀಲ್‌ಗೆ ಬರೋಬ್ಬರಿ 15 ಲಕ್ಷ ರೂಪಾಯಿ ಫಿಕ್ಸ್ ಮಾಡಿದ್ದಾನೆ. ಯೂಟ್ಯೂಬ್‌ನಲ್ಲಿ ಅಷ್ಟೊಂದು ಫೇಮಸ್ ಇರೋರು ಸುಳ್ಳು ಹೇಳಲ್ಲ ಅಂತ ನಂಬಿದ ಶಿವ, 2023ರಲ್ಲಿ ಮಧುಕರ್ ಕೊಟ್ಟ ಬ್ಯಾಂಕ್ ಅಕೌಂಟ್‌ಗಳಿಗೆ ಹಂತ ಹಂತವಾಗಿ 15 ಲಕ್ಷ ರೂಪಾಯಿ ಜಮಾ ಮಾಡಿದ್ದಾರೆ.

ನಕಲಿ ಸರ್ಟಿಫಿಕೇಟ್ ಕೊಟ್ಟಾಗ ಸಿಕ್ಕಿಬಿದ್ದ ಮಧುಕರ್

ದುಡ್ಡು ಕೊಟ್ಟ ಎರಡು ತಿಂಗಳ ನಂತರ ಶಿವ ಕೈಗೆ ಒಂದು ಸ್ಪಾನ್ಸರ್‌ಶಿಪ್ ಸರ್ಟಿಫಿಕೇಟ್ ಸಿಕ್ಕಿದೆ. ಆದ್ರೆ ‘ಅಗಾರ್ಡ್ ಸೊಲ್ಯೂಷನ್ಸ್’ (Aguard Solutions) ಅನ್ನೋ ಕಂಪನಿ ಹೆಸರಲ್ಲಿದ್ದ ಆ ಲೆಟರ್ ನೋಡಿ ಶಿವಗೆ ಅನುಮಾನ ಬಂದಿದೆ. ತಕ್ಷಣ ಅವರು ಯುಕೆನಲ್ಲಿರೋ ಆ ಕಂಪನಿಯ ಮಾಲೀಕ ಫೈಜಲ್ ಎಂಬುವವರನ್ನು ನೇರವಾಗಿ ಕಾಂಟ್ಯಾಕ್ಟ್ ಮಾಡಿದ್ದಾರೆ. ಆಗ ಫೈಜಲ್, "ನಾನು ಕಳೆದ ಕೆಲವು ಸಮಯದಿಂದ ದೇಶದಲ್ಲೇ ಇಲ್ಲ, ಈ ಡಾಕ್ಯುಮೆಂಟ್ ಖಂಡಿತಾ ನಕಲಿ" ಅಂತ ಶಾಕಿಂಗ್ ಸತ್ಯ ಬಿಚ್ಚಿಟ್ಟಿದ್ದಾರೆ.

ತಮಗೆ ಮೋಸ ಹೋಗಿರೋದು ಕನ್ಫರ್ಮ್ ಆಗ್ತಿದ್ದಂತೆ ಶಿವ ದಂಪತಿಯನ್ನು ತರಾಟೆಗೆ ತಗೆದುಕೊಂಡಿದ್ದಾರೆ. ದುಡ್ಡು ವಾಪಸ್ ಕೊಡಿ ಅಂತ ಗಲಾಟೆ ಮಾಡಿದಾಗ ಮಧುಕರ್ ಕೇವಲ 2 ಲಕ್ಷ ರೂಪಾಯಿ ಕೊಟ್ಟು ಕೈ ತೊಳೆದುಕೊಂಡಿದ್ದಾನೆ. ಇದರಿಂದ ಬೇಸತ್ತ ಶಿವ ಪೊಲೀಸರ ಮೆಟ್ಟಿಲೇರಿದ್ದಾರೆ. ಸದ್ಯ ಇಬ್ರಾಹಿಂಪಟ್ನಂ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದು, ಅದರಲ್ಲಿ ಜಗರ್ಲಮುಡಿ ಮಧುಕರ್‌ನ ನಂಬರ್ 1 ಆರೋಪಿ (A1), ರಮಾನಂದನಾಳನ್ನು ನಂಬರ್ 2 (A2) ಮತ್ತು ಮೋಹನ್ ರಾವ್‌ನನ್ನು ನಂಬರ್ 3 (A3) ಆರೋಪಿಯನ್ನಾಗಿ ಮಾಡಿದ್ದಾರೆ.

ದೇಶಾದ್ಯಂತ ಹರಡಿದೆ ವಂಚನೆ ಜಾಲ

ಟ್ವಿಸ್ಟ್ ಏನಪ್ಪಾ ಅಂದ್ರೆ, ವಂಚನೆಗೆ ಒಳಗಾಗಿದ್ದು ಬರೀ ಶಿವ ಒಬ್ಬರೇ ಅಲ್ಲ! ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಮಾಹಿತಿ ಪ್ರಕಾರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ರಾಜಸ್ಥಾನ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳ ನಿವಾಸಿಗಳು ಈ ‘ನಂದುಸ್ ವರ್ಲ್ಡ್’ ಕಪಲ್ ಕೈಯಲ್ಲಿ ಮೋಸ ಹೋಗಿದ್ದಾರೆ ಎನ್ನಲಾಗ್ತಿದೆ. ಯುಕೆ ಕೆಲಸದ ಆಸೆಗೆ ಬಿದ್ದು ಕೆಲವರಂತೂ 20 ಲಕ್ಷ ರೂಪಾಯಿವರೆಗೂ ಕೊಟ್ಟಿದ್ದಾರಂತೆ. ಆದ್ರೆ ಈ ಬಗ್ಗೆ ಪೊಲೀಸರು ಇನ್ನೂ ಅಧಿಕೃತ ತನಿಖೆ ನಡೆಸಿ ಕನ್ಫರ್ಮ್ ಮಾಡಬೇಕಿದೆ.

ಪ್ರಸ್ತುತ ಸ್ಥಿತಿ: ಸದ್ಯಕ್ಕೆ ಆರೋಪಿಗಳಿಬ್ಬರೂ ಪೊಲೀಸರು ನೀಡಿರೋ ನೋಟಿಸ್‌ಗೆ ಯಾವುದೇ ರೆಸ್ಪಾನ್ಸ್ ಮಾಡಿಲ್ಲ. ಬದಲಾಗಿ ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಯೂಟ್ಯೂಬರ್ ರಮಾನಂದನಾ ತಮಗೂ ಈ ವೀಸಾ ಬಿಸಿನೆಸ್‌ಗೂ ಯಾವುದೇ ಸಂಬಂಧವಿಲ್ಲ, ಇದು ನಮ್ಮ ಹೆಸರನ್ನು ಹಾಳು ಮಾಡಲು ಮಾಡ್ತಿರೋ ಪ್ಲಾನ್ ಅಂತ ವಿಡಿಯೋ ಮಾಡಿ ಕಣ್ಣೀರು ಹಾಕಿದ್ದಾರೆ. ಸದ್ಯಕ್ಕಂತೂ ತೆಲುಗು ಸೋಶಿಯಲ್ ಮೀಡಿಯಾ ಲೋಕದಲ್ಲಿ ಈ ಇನ್ಫ್ಲುಯೆನ್ಸರ್ ವಿವಾದ ಸಖತ್ ಬೆಂಕಿ ಹಚ್ಚಿದೆ. ಪೊಲೀಸರ ತನಿಖೆ ಮುಗಿದ ಮೇಲಷ್ಟೇ ಈ ‘ಲಂಡನ್ ಲೈಫ್’ ಕಪಲ್‌ನ ಅಸಲಿ ಆಟ ಏನೆಂಬುದು ಹೊರಬರಬೇಕಿದೆ.

Latest News