May 2, 2026 Languages : ಕನ್ನಡ | English

ಜೂನ್‌ನಿಂದ ಡ್ರೈವರ್ ಇಲ್ಲದೆಯೇ ಓಡಲಿವೆ ರೈಲುಗಳು - ಪಿಂಕ್ ಲೈನ್ ಉದ್ಘಾಟನೆಗೆ ಮುಹೂರ್ತ ಫಿಕ್ಸ್!!

ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುವ ಪಿಂಕ್ ಲೈನ್ ಮೆಟ್ರೋ ಹತ್ತಲು ನೀವು ಇನ್ನೊಂದು ತಿಂಗಳು ಕಾಯಲೇಬೇಕು. ಹೌದು, ಈ ಮೊದಲು ಮೇ ತಿಂಗಳಲ್ಲೇ ಈ ಮಾರ್ಗ ಮುಕ್ತವಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಅಂತಿಮ ಹಂತದ ತಪಾಸಣೆಗಳು ಬಾಕಿ ಇರುವುದರಿಂದ ಈಗ ಜೂನ್‌ ತಿಂಗಳಿಗೆ ಮುಹೂರ್ತ ಫಿಕ್ಸ್ ಆದಂತಿದೆ.

ಕಾಳೇನ ಅಗ್ರಹಾರ - ನಾಗವಾರ ಮೆಟ್ರೋ ಲೇಟೆಸ್ಟ್ ಅಪ್‌ಡೇಟ್ | Photo Credit: AI
ಕಾಳೇನ ಅಗ್ರಹಾರ - ನಾಗವಾರ ಮೆಟ್ರೋ ಲೇಟೆಸ್ಟ್ ಅಪ್‌ಡೇಟ್ | Photo Credit: AI

ತಪಾಸಣೆಗಳ ಸುರಿಮಳೆ: 15 ದಿನ ಹೈ ಅಲರ್ಟ್ ಚೆಕ್ಕಿಂಗ್

ಯಾವುದೇ ಮೆಟ್ರೋ ಮಾರ್ಗ ಜನಸಾಮಾನ್ಯರ ಬಳಕೆಗೆ ಮುಕ್ತವಾಗುವ ಮುನ್ನ ಕೇಂದ್ರ ರೈಲ್ವೆ ಇಲಾಖೆಯ ಆರ್‌ಡಿಎಸ್‌ಓ (RDSO) ತಂಡದಿಂದ ಗ್ರೀನ್ ಸಿಗ್ನಲ್ ಸಿಗಬೇಕು. ಈಗ ಈ ತಪಾಸಣೆ ಕಾರ್ಯ ಅಧಿಕೃತವಾಗಿ ಆರಂಭವಾಗಿದೆ. ಮುಂದಿನ 15 ದಿನಗಳ ಕಾಲ ಅಧಿಕಾರಿಗಳ ತಂಡ ಈ ಕೆಳಗಿನ ಪ್ರಮುಖ ಅಂಶಗಳನ್ನು ಹಗಲಿರುಳು ಚೆಕ್ ಮಾಡಲಿದೆ:

ರೈಲಿನ ಸ್ಪೀಡ್ ಟೆಸ್ಟ್: ಹಳಿಗಳ ಮೇಲೆ ರೈಲು ಎಷ್ಟು ವೇಗವಾಗಿ ಸೇಫ್ ಆಗಿ ಚಲಿಸುತ್ತದೆ ಎಂಬ ಪರೀಕ್ಷೆ.

ಲೋಡ್ ಟೆಸ್ಟ್: ರೈಲಿನಲ್ಲಿ ಜನ ತುಂಬಿದಾಗ ಹೇಗಿರುತ್ತದೆ ಎಂಬ ಪರೀಕ್ಷೆ ಹಾಗೂ ಖಾಲಿ ರೈಲಿನ ಓಡಾಟ.

ಟ್ರ್ಯಾಕ್ ಮತ್ತು ಪವರ್ ಚೆಕ್ಕಿಂಗ್: ಹಳಿಗಳ ಗುಣಮಟ್ಟ ಮತ್ತು ವಿದ್ಯುತ್ ಸರಬರಾಜಿನ ಸ್ಥಿತಿಗತಿ.

ಸ್ಟೇಷನ್ ಪರಿಶೀಲನೆ: ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅಗತ್ಯವಿರುವ ಸೌಲಭ್ಯಗಳ ಪರಿಶೀಲನೆ.

ಡ್ರೈವರ್ ಇಲ್ಲದ ರೈಲುಗಳ ಕಮಾಲ್!

ಪಿಂಕ್ ಲೈನ್‌ನ ಮತ್ತೊಂದು ವಿಶೇಷ ಅಂದ್ರೆ ಇಲ್ಲಿ ಓಡಲಿರುವುದು 'ಡ್ರೈವರ್‌ಲೆಸ್' (ಚಾಲಕ ರಹಿತ) ರೈಲುಗಳು. ಬಿಎಂಆರ್‌ಸಿಎಲ್ ಈಗಾಗಲೇ 5 ರೈಲುಗಳನ್ನು ತರಿಸಿಕೊಂಡಿದ್ದು, ಮೇ ಮೊದಲ ವಾರದಲ್ಲಿ ಆರನೇ ರೈಲು ಕೂಡ ಬೆಂಗಳೂರಿಗೆ ಬಂದಿಳಿಯಲಿದೆ. ಬಿಇಎಂಎಲ್ ಸಂಸ್ಥೆಯಿಂದ ಈ ಆರು ರೈಲುಗಳು ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗುತ್ತಿದ್ದಂತೆಯೇ ವಾಣಿಜ್ಯ ಸಂಚಾರಕ್ಕೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪಿಂಕ್ ಲೈನ್ ಮ್ಯಾಪ್ ಹೀಗಿದೆ ನೋಡಿ

ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಒಟ್ಟು 21.25 ಕಿ.ಮೀ ವಿಸ್ತೀರ್ಣ ಹೊಂದಿದೆ.

ಒಟ್ಟು ನಿಲ್ದಾಣಗಳು: 18

ಎಲಿವೇಟೆಡ್ (ಮೇಲ್ಸೇತುವೆ): 6 ಸ್ಟೇಷನ್ (ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ)

ಅಂಡರ್ ಗ್ರೌಂಡ್ (ಸುರಂಗ): 12 ಸ್ಟೇಷನ್

ಸದ್ಯಕ್ಕೆ ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗಿನ 6 ಎಲಿವೇಟೆಡ್ ಸ್ಟೇಷನ್‌ಗಳನ್ನು ಓಪನ್ ಮಾಡಲು ಪ್ಲಾನ್ ಮಾಡಲಾಗಿದೆ. ಇನ್ನುಳಿದ 13.76 ಕಿ.ಮೀ ಉದ್ದದ ಸುರಂಗ ಮಾರ್ಗದ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ವರ್ಷದ ಅಂತ್ಯದ ವೇಳೆಗೆ ಇಡೀ ಪಿಂಕ್ ಲೈನ್ ನಿಮ್ಮ ಸೇವೆಗೆ ಸಿದ್ಧವಾಗಲಿದೆ.

ಸ್ವಲ್ಪ ವಿಳಂಬ ಯಾಕೆ?

ವಾಸ್ತವವಾಗಿ ಮೇ ತಿಂಗಳಲ್ಲೇ ಈ 6 ಸ್ಟೇಷನ್‌ಗಳನ್ನು ಓಪನ್ ಮಾಡಬೇಕು ಅಂದುಕೊಳ್ಳಲಾಗಿತ್ತು. ಆದರೆ ಸುರಕ್ಷತಾ ಪರೀಕ್ಷೆಗಳು ಅಂದುಕೊಂಡಿದ್ದಕ್ಕಿಂತ ಸ್ವಲ್ಪ ತಡವಾಗುತ್ತಿವೆ. ಸುರಕ್ಷತೆಯ ವಿಷಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಿಎಂಆರ್‌ಸಿಎಲ್ ಸಿದ್ಧವಿಲ್ಲ. ಹಾಗಾಗಿ ಜೂನ್ ತಿಂಗಳ ಆರಂಭದಲ್ಲಿ ಪಕ್ಕಾ ಆಗಿ ಈ ಮಾರ್ಗ ಜನರಿಗೆ ಸಿಗುವ ಸಾಧ್ಯತೆ ದಟ್ಟವಾಗಿದೆ.

Latest News