ಮೆಟ್ರೋ ಪಿಲ್ಲರ್‌ಗಳ ಮೇಲೆ ಡಿಜಿಟಲ್ ಜಾಹೀರಾತುಗಳ ಅಬ್ಬರ - ಕಾಸು ಮಾಡಲು ಹೊರಟ BMRCL!!

ನಮ್ಮ ಮೆಟ್ರೋ ಪಿಲ್ಲರ್‌ಗಳ ಮೇಲೆ ಇನ್ಮುಂದೆ ಡಿಜಿಟಲ್ ಜಾಹೀರಾತುಗಳ ಅಬ್ಬರ ಶುರುವಾಗಲಿದೆಯಂತೆ! ಟಿಕೆಟ್ ದುಡ್ಡಿನ ಜೊತೆಗೆ ಬೇರೆ ಕಡೆಯಿಂದಲೂ ಭರ್ಜರಿ ಕಾಸು ಮಾಡೋಕೆ ಬಿಎಂಆರ್‌ಸಿಎಲ್ (BMRCL) ಭರ್ಜರಿ ಪ್ಲಾನ್ ರೆಡಿ ಮಾಡಿದೆ. ಬೆಂಗಳೂರಿನಾದ್ಯಂತ ಇರೋ ಬರೋಬ್ಬರಿ 5,000ಕ್ಕೂ ಹೆಚ್ಚು ಮೆಟ್ರೋ ಪಿಲ್ಲರ್‌ಗಳಲ್ಲಿ ಡಿಜಿಟಲ್ ಜಾಹೀರಾತು ಬೋರ್ಡ್‌ಗಳನ್ನು ಹಾಕೋಕೆ ದೊಡ್ಡ ಟೆಂಡರ್ ಅನ್ನೇ ಕರೆದಿದೆ. ಆದ್ರೆ, ಈ ವಿಷಯ ಗೊತ್ತಾಗ್ತಿದ್ದಂತೆ ಸಿಲಿಕಾನ್ ಸಿಟಿ ಜನ ಮಾತ್ರ ಸಖತ್ ಕೆಂಡಾಮಂಡಲವಾಗಿದ್ದಾರೆ. "ರೀ.. ಇದ್ರಿಂದ ವೆಹಿಕಲ್ ಓಡಿಸೋರ ಗಮನ ಬೇರೆ ಕಡೆ ಹೋಗಿ ಆಕ್ಸಿಡೆಂಟ್ ಆದ್ರೆ ಯಾರು ಹೊಣೆ?" ಅಂತ ಜನ ಸಾರ್ವಜನಿಕವಾಗಿ ಆಕ್ರೋಶ ಹೊರಹಾಕ್ತಿದ್ದಾರೆ.

ಮೆಟ್ರೋ ಪಿಲ್ಲರ್  ಮೇಲೆ ಡಿಜಿಟಲ್ ಬೋರ್ಡ್‌
ಮೆಟ್ರೋ ಪಿಲ್ಲರ್ ಮೇಲೆ ಡಿಜಿಟಲ್ ಬೋರ್ಡ್‌

ಬೆಂಗಳೂರಿನ ಲೈಫ್‌ಲೈನ್ ಆಗಿರೋ ನಮ್ಮ ಮೆಟ್ರೋ ಇನ್ಮುಂದೆ ಬರೀ ಜನರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕರ್ಕೊಂಡು ಹೋಗೋ ಸಾರಿಗೆ ಸಂಸ್ಥೆಯಾಗಿ ಮಾತ್ರ ಉಳಿಯಲ್ಲ ಅನಿಸುತ್ತೆ. ಯಾಕಂದ್ರೆ, ಇದನ್ನ ಒಂದು ಭಾರಿ ಆದಾಯ ತರೋ ಬಿಸಿನೆಸ್ ಹಬ್ ಆಗಿ ಬದಲಾಯಿಸೋಕೆ ಬಿಎಂಆರ್‌ಸಿಎಲ್ ಪ್ಲಾನ್ ಮಾಡಿದೆ. ಬರೀ ಟಿಕೆಟ್ ಕಾಸನ್ನೇ ನಂಬಿಕೊಂಡಿದ್ರೆ ಸಾಲಲ್ಲ ಅಂತ, ಟಿಕೆಟ್ ಹೊರತಾದ ಬೇರೆ ಮೂಲಗಳ ಆದಾಯವನ್ನು (ನಾನ್-ಫೇರ್ ಬಾಕ್ಸ್ ರೆವಿನ್ಯೂ) ಡಬಲ್ ಮಾಡ್ಕೊಳ್ಳೋಕೆ ಈ ಮೆಗಾ ಪ್ಲಾನ್ ರೆಡಿಯಾಗಿದೆ.

ಸಿಟಿಯಾದ್ಯಂತ ಇರೋ ಮೆಟ್ರೋ ಪಿಲ್ಲರ್‌ಗಳನ್ನು ಕಮರ್ಷಿಯಲ್ ಮತ್ತು ಡಿಜಿಟಲ್ ಅಡ್ವರ್ಟೈಸ್‌ಮೆಂಟ್‌ಗಳಿಗೆ ಬಿಟ್ಟುಕೊಡೋಕೆ ಟೆಂಡರ್ ಅಂತೂ ಕರೆದಿದ್ದಾರೆ. ಆದ್ರೆ, ಸರ್ಕಾರದ ಈ ಐಡಿಯಾ ಬೆಂಗಳೂರಿನ ಸೌಂದರ್ಯ ಹಾಳು ಮಾಡತ್ತೆ, ಜೊತೆಗೆ ರಸ್ತೆಯಲ್ಲಿ ಹೋಗೋ ವಾಹನ ಸವಾರರ ಮೈಂಡ್ ಡೈವರ್ಟ್ ಮಾಡುತ್ತೆ ಅಂತ ಜನ ಮಾತ್ರ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.

ಈ ಯೋಜನೆಯ ಮುಖ್ಯ ಹೈಲೈಟ್ಸ್ ಇಲ್ಲಿದೆ ನೋಡಿ:

5,000ಕ್ಕೂ ಹೆಚ್ಚು ಪಿಲ್ಲರ್‌ಗಳು: ಸಿಟಿಯ ಪ್ರಮುಖ ರಸ್ತೆಗಳಲ್ಲಿರೋ ಎಲ್ಲ ಮೆಟ್ರೋ ಪಿಲ್ಲರ್‌ಗಳಿಗೂ ಡಿಜಿಟಲ್ ಲುಕ್ ಸಿಗಲಿದೆ.

ಕಲೆಗೆ ಧಕ್ಕೆ ಇಲ್ಲ: ಈಗಾಗಲೇ ಲೋಕಲ್ ಕಲಾವಿದರು ಪಿಲ್ಲರ್‌ಗಳ ಮೇಲೆ ಬಿಡಿಸಿರೋ ಸುಂದರ ಪೇಂಟಿಂಗ್ಸ್ ಮತ್ತು ಕಲಾಕೃತಿಗಳನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆಯಂತೆ. ಪಿಲ್ಲರ್‌ಗಳ ಮಧ್ಯದ ಭಾಗದಲ್ಲಿ ಮಾತ್ರ ಈ ಡಿಜಿಟಲ್ ಜಾಹೀರಾತು ಬೋರ್ಡ್‌ಗಳನ್ನು ಅಳವಡಿಸೋಕೆ ಪರ್ಮಿಷನ್ ನೀಡಲಾಗಿದೆ.

ಹೈಟೆಕ್ ದೃಶ್ಯ ವೈಭವದ ಆತಂಕ: ರಸ್ತೆ ಮಧ್ಯೆ ಮಿನುಗೋ ಈ ಲೈಟಿಂಗ್ಸ್ ಮತ್ತು ವಿಡಿಯೋಗಳು ವಾಹನ ಸವಾರರಿಗೆ ಹೊಸ ಆತಂಕ ತಂದಿಟ್ಟಿದೆ.

‘ದುಡ್ಡು ಮಾಡುವುದೇ ಉದ್ದೇಶ, ಸಿಟಿ ಅಂದ ಕೆಡಿಸಬೇಡಿ!’

ಬಿಎಂಆರ್‌ಸಿಎಲ್ ತಗೊಂಡಿರೋ ಈ ಕಮರ್ಷಿಯಲ್ ಡಿಸಿಷನ್‌ಗೆ ಸಾರ್ವಜನಿಕ ವಲಯದಿಂದ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗ್ತಿದೆ. ಈ ಬಗ್ಗೆ ಮಾತನಾಡಿದ ವೀರೇಶ್ ಅನ್ನೋ ಸಾರ್ವಜನಿಕರೊಬ್ಬರು, "ಮೆಟ್ರೋ ಸಂಸ್ಥೆಗೆ ಬರೀ ದುಡ್ಡು ಮಾಡೋದೇ ಮುಖ್ಯ ಆಗ್ಬಿಟ್ಟಿದೆ. ಹಣ ಗಳಿಸೋಕೋಸ್ಕರ ನಮ್ಮ ಬೆಂಗಳೂರಿನ ಅಂದವನ್ನು ಹಾಳು ಮಾಡೋಕೆ ಹೊರಟಿದ್ದಾರೆ. ಅದರಲ್ಲೂ ರಾತ್ರಿ ಟೈಮ್‌ನಲ್ಲಿ ಈ ಪ್ರಕಾಶಮಾನವಾದ ಡಿಜಿಟಲ್ ಬೋರ್ಡ್‌ಗಳು ಕಣ್ಣಿಗೆ ಹೊಡೆದ ಹಾಗೆ ಆಗ್ತವೆ. ಇಂಥ ಲೈಟಿಂಗ್ಸ್ ಮಧ್ಯೆ ಗಾಡಿ ಓಡಿಸೋದು ತುಂಬಾ ಕಷ್ಟ. ಇದು ಖಂಡಿತವಾಗಿಯೂ ಡೇಂಜರ್" ಅಂತ ಆಡಳಿತ ಮಂಡಳಿ ವಿರುದ್ಧ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

"ರಾತ್ರಿ ವೇಳೆ ಈ ಪ್ರಕಾಶಮಾನವಾದ ಡಿಜಿಟಲ್ ಬೋರ್ಡ್‌ಗಳಿಂದಾಗಿ ವಾಹನ ಚಾಲನೆ ಮಾಡುವುದು ಕಷ್ಟವಾಗುತ್ತದೆ."
— ವೀರೇಶ್, ಸಾರ್ವಜನಿಕರು

ಮೆಟ್ರೋ ಅಧಿಕಾರಿಗಳು ಏನಂತಾರೆ?

ಜನರ ಈ ಎಲ್ಲಾ ಆಪಾದನೆಗಳನ್ನು ಬಿಎಂಆರ್‌ಸಿಎಲ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿರೋ ಯಶ್ವಂತ್ ಚೌಹಾಣ್ ಅವರು ನೇರವಾಗಿ ತಳ್ಳಿಹಾಕಿದ್ದಾರೆ. "ನಾವು ಸುಮ್ಮ ಸುಮ್ಮನೆ ಬೋರ್ಡ್ ಹಾಕ್ತಾ ಇಲ್ಲ. ಒಂದು ವರ್ಲ್ಡ್ ಕ್ಲಾಸ್ ಲೆವೆಲ್‌ನ ಸಂಘಟಿತ ಜಾಹೀರಾತು ಮಾದರಿಯನ್ನು ಇಲ್ಲಿ ತರುತ್ತಿದ್ದೇವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಲೋಕಲ್ ಸಂಸ್ಥೆಗಳ ಕಠಿಣ ನಿಯಮಾವಳಿಗಳು ಏನಿವೆಯೋ, ಅದನ್ನೆಲ್ಲಾ ಸರಿಯಾಗಿ ಫಾಲೋ ಮಾಡಿಯೇ ಈ ಬೋರ್ಡ್‌ಗಳನ್ನು ಅಳವಡಿಸಲಾಗುತ್ತದೆ" ಅಂತ ಸಾರ್ವಜನಿಕರಿಗೆ ಕ್ಲಾರಿಟಿ ಕೊಟ್ಟಿದ್ದಾರೆ.

ರಸ್ತೆ ಸುರಕ್ಷತೆಯೇ ಈಗ ದೊಡ್ಡ ಸವಾಲು!

ಮೆಟ್ರೋ ಸಂಸ್ಥೆ ತನ್ನ ಕಾಲಿನ ಮೇಲೆ ತಾನು ನಿಲ್ಲೋಕೆ, ಅಂದ್ರೆ ಆರ್ಥಿಕವಾಗಿ ಸ್ವಾವಲಂಬಿಯಾಗೋಕೆ ಈ ಹೆಜ್ಜೆ ಇಟ್ಟಿರುವುದು ಬಿಸಿನೆಸ್ ದೃಷ್ಟಿಯಿಂದ ಓಕೆ ಇರಬಹುದು. ಆದ್ರೆ, ದಿನಾಲೂ ಟ್ರಾಫಿಕ್‌ನಲ್ಲಿ ನರಳ್ತಿರೋ ಬೆಂಗಳೂರು ರಸ್ತೆಗಳಲ್ಲಿ ಸುರಕ್ಷತೆಯನ್ನು ಕಾಪಾಡೋದು ಇದೀಗ ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತು ಬಿಎಂಆರ್‌ಸಿಎಲ್‌ಗೆ ಅತಿ ದೊಡ್ಡ ಚಾಲೆಂಜ್ ಆಗೋದ್ರಲ್ಲಿ ಡೌಟೇ ಇಲ್ಲ. ಜಾಹೀರಾತುಗಳ ಝಗಮಗಿಸುವಿಕೆ ಮಧ್ಯೆ ಸವಾರರು ಸೇಫ್ ಆಗಿ ಮನೆ ತಲುಪುತ್ತಾರಾ ಅನ್ನೋದೇ ಸದ್ಯದ ಯಕ್ಷಪ್ರಶ್ನೆ.

Latest News