ಪ್ರೀತಿ ಎಂಬುದು ಹೃದಯದ ಭಾಷೆ ಎನ್ನುವುದು ನಿಜವಾದರೂ, ಕಾಲ ಕಳೆದಂತೆ ಅದು ಅಪ್ಪಟ ವ್ಯಾವಹಾರಿಕವಾಗಿ ಬದಲಾಗುತ್ತಿದೆ. ಮನುಷ್ಯ ನಿರ್ಮಿತ ಜಾತಿ, ಧರ್ಮ, ಅಂತಸ್ತು ಮತ್ತು ಸಂಪ್ರದಾಯದ ಗೋಡೆಗಳು ಪ್ರೀತಿಯ ಹಾದಿಗೆ ಅಡ್ಡಬಂದಾಗ, ಅನೇಕ ಪ್ರೇಮಕಥೆಗಳು ದುರಂತದಲ್ಲಿ ಅಂತ್ಯವಾಗುತ್ತವೆ. ಇನ್ನು ಕೆಲವು ಸಂದರ್ಭಗಳಲ್ಲಿ ಹೆತ್ತವರ ವಿರೋಧವನ್ನೂ ಮೀರಿ ಮನೆಬಿಟ್ಟು ಓಡಿಹೋಗಿ ಮದುವೆಯಾಗುವ ಅನಿವಾರ್ಯತೆ ಎದುರಾಗುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿರುವ ಮೋನಾಲಿಸಾ ಅವರ ಮದುವೆಯ ಕಥೆಯೂ ಇದೇ ಹಾದಿಯಲ್ಲಿದೆ. ಆದರೆ, ಇಲ್ಲಿ ಪ್ರೀತಿಗಿಂತ ಹೆಚ್ಚಾಗಿ "ಖೆಡ್ಡಾ" ಮತ್ತು "ಸಂಚಿನ" ವಾಸನೆ ಬರುತ್ತಿದೆ ಎಂಬ ಅನುಮಾನ ಹಲವರನ್ನು ಕಾಡುತ್ತಿದೆ.
ಕೇವಲ ಒಂದು ವರ್ಷದ ಹಿಂದೆ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಮೋನಾಲಿಸಾ ಎಂಬ ಸಾಮಾನ್ಯ ಹುಡುಗಿ, ತನ್ನ ಆಕರ್ಷಕ ಕಣ್ಣುಗಳಿಂದಾಗಿ ಇಡೀ ದೇಶದ ಗಮನ ಸೆಳೆದಿದ್ದಳು. ರಾತ್ರೋರಾತ್ರಿ ಅವಳ ಫೋಟೋಗಳು ವೈರಲ್ ಆಗಿ ಮಹಾಕುಂಭದ ಮೋನಾಲಿಸಾ ಎಂದೇ ಪ್ರಖ್ಯಾತಿಯಾದಳು. ಬಡತನದ ಗುಡಿಸಲಿನಲ್ಲಿದ್ದ ಈಕೆಯ ಬದುಕು ಈಗ ಬದಲಾಯಿತು ಎಂದು ಎಲ್ಲರೂ ಭಾವಿಸಿದ್ದರು. ಬದುಕು ಬದಲಾಗಿದ್ದೇನೋ ನಿಜ, ಆದರೆ ಅದು ಅವಳ ಹೆತ್ತವರ ಪಾಲಿಗೆ ನರಕವಾಗಿ ಪರಿಣಮಿಸಿದೆ.
ಮೋನಾಲಿಸಾ ಇತ್ತೀಚೆಗೆ ಫರ್ಮಾನ್ ಖಾನ್ ಎಂಬ ಯುವಕನನ್ನು ಮದುವೆಯಾಗಿದ್ದೇ ತಡ, ಸೋಶಿಯಲ್ ಮೀಡಿಯಾದಲ್ಲಿ ಲವ್ ಜಿಹಾದ್ ಕೂಗು ಕೇಳಿಬರುತ್ತಿದೆ. ಮಧ್ಯಪ್ರದೇಶದ ಮಹೇಶ್ವರದ ಬಂಜಾರಾ ಸಮುದಾಯದ ಗುಡಿಸಲಿನಲ್ಲಿ ವಾಸವಿರುವ ಮೋನಾಲಿಸಾ ತಾಯಿ ಲತಾ ಭೋಂಸ್ಲೆ ಇಂದು ಬೀದಿಗೆ ಬಿದ್ದಿದ್ದಾರೆ. ನನ್ನ ಮಗಳನ್ನು ಮರಳಿ ಕೊಡಿಸಿ, ಇಲ್ಲದಿದ್ದರೆ ನಾವು ವಿಷ ಕುಡಿದು ಸಾಯುತ್ತೇವೆ ಎಂದು ಅವರು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಮನೆಯಲ್ಲಿರುವ ಉಳಿದ ಮೂವರು ಮಕ್ಕಳ ಭವಿಷ್ಯದ ಬಗ್ಗೆ ಅವರಿಗೆ ಆತಂಕ ಶುರುವಾಗಿದೆ.
ಮೋನಾಲಿಸಾ ಮತ್ತು ಫರ್ಮಾನ್ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ ಎಂಬ ಸುಳಿವು ಮನೆಯವರಿಗೆ ಇರಲಿಲ್ಲ. ಆಕ್ಟಿಂಗ್ ಕ್ಲಾಸ್‌ಗಾಗಿ ಕೇರಳಕ್ಕೆ ಹೋಗುತ್ತಿದ್ದೇನೆ ಎಂದು ಸುಳ್ಳು ಹೇಳಿ ಮನೆಯಿಂದ ತೆರಳಿದ್ದ ಮೋನಾಲಿಸಾ, ದಿಢೀರನೆ ಮದುವೆಯ ವಿಡಿಯೋ ಹಂಚಿಕೊಂಡಾಗ ಹೆತ್ತವರಿಗೆ ಬರಸಿಡಿಲು ಬಡಿದಂತಾಗಿದೆ. ಮದುವೆಯಾದ ನಂತರ ಅವಳು ಒಮ್ಮೆಯೂ ತಂದೆ ತಾಯಿಗೆ ಕರೆ ಮಾಡಿಲ್ಲ. ತನ್ನ ಚಿಕ್ಕಮ್ಮನ ಮಗನ ಜೊತೆ ಬಲವಂತದ ಮದುವೆ ಮಾಡಲು ಮನೆಯವರು ಮುಂದಾಗಿದ್ದರು ಎಂದು ಮೋನಾಲಿಸಾ ಆರೋಪಿಸಿದ್ದಾಳೆ. ಆದರೆ ಇದನ್ನು ನಿರಾಕರಿಸಿರುವ ತಾಯಿ ಲತಾ, 'ನಾವೆಲ್ಲಾ ಹಿಂದೂಗಳು, ನಮ್ಮಲ್ಲಿ ಅಣ್ಣ ತಂಗಿ ಸಂಬಂಧದ ಮದುವೆಗೆ ಅವಕಾಶವೇ ಇಲ್ಲ. ಅವಳು ಹೇಳುತ್ತಿರುವ ಮಾತುಗಳು ಅವಳದ್ದಲ್ಲ, ಆ ಹುಡುಗ ಅವಳಿಗೆ ವಶೀಕರಣ ಮಾಡಿ ಹೀಗೆ ಹೇಳಿಸುತ್ತಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮೋನಾಲಿಸಾ ತನಗೆ 18 ವರ್ಷ ಎಂದು ವಾದಿಸುತ್ತಿದ್ದರೂ, ತಾಯಿ ಮಾತ್ರ ಅವಳಿಗೆ ಕೇವಲ 16 ವರ್ಷ ಎನ್ನುತ್ತಿದ್ದಾರೆ. 'ಅವಳಿಗೆ ಅಡುಗೆ ಕೂಡ ಮಾಡಲು ಬರುವುದಿಲ್ಲ, ಆಧಾರ್ ಕಾರ್ಡ್‌ನಲ್ಲಿ ವಯಸ್ಸು ಹೇಗೆ ಬದಲಾಯಿತು ಎಂದು ನಮಗೆ ತಿಳಿಯುತ್ತಿಲ್ಲ' ಎಂದು ಕಣ್ಣೀರು ಹಾಕಿದ್ದಾರೆ. ಮೋನಾಲಿಸಾ ಪ್ರತಿದಿನ ಬೆಳಿಗ್ಗೆ ಸಂಜೆ ದೇವರಿಗೆ ಪೂಜೆ ಮಾಡುತ್ತಿದ್ದ ಭಕ್ತಿವಂತೆ ಎಂದು ಸೋದರ ಸಂಬಂಧಿ ರೂಪರೇಖಾ ನೆನಪಿಸಿಕೊಂಡಿದ್ದಾರೆ.
ಸಮುದಾಯದ ಅಭಿವೃದ್ಧಿ ಮಾಡಬೇಕು, ಶಾಲೆ ಕಟ್ಟಿಸಬೇಕು ಎಂಬ ದೊಡ್ಡ ಕನಸು ಹೊತ್ತಿದ್ದ ಹುಡುಗಿ, ಇಂದು ಮದುವೆಯಾಗಿ ಎಲ್ಲವನ್ನೂ ಮರೆತಿರುವುದು ಬಂಜಾರಾ ಸಮುದಾಯದಲ್ಲಿ ಸ್ಮಶಾನ ಮೌನ ಆವರಿಸುವಂತೆ ಮಾಡಿದೆ. ಮಗಳು ಅಲ್ಲಿ ಸುಖವಾಗಿದ್ದಾಳೆ ಎಂದುಕೊಂಡರೂ, ಇಲ್ಲಿ ಹೆತ್ತವರು ಮತ್ತು ಸಮುದಾಯದ ಗೌರವ ಮಣ್ಣುಪಾಲಾಗಿದೆ ಎಂಬ ನೋವು ಅವರ ಕುಟುಂಬವನ್ನು ಕಾಡುತ್ತಿದೆ.