ಮತ್ತೆ ಹಿಂಸಾಚಾರದ ಜ್ವಾಲೆಗೆ ಸಿಲುಕಿದ ಮಣಿಪುರ: ಬಾಂಬ್ ದಾಳಿಗೆ ಅನಾಥವಾದ ಸಂಸಾರ - ಉಗ್ರಗಾಮಿಗಳ ಕೃತ್ಯಕ್ಕೆ ಜನಾಕ್ರೋಶ!!

ಮಣಿಪುರದಲ್ಲಿ ಹಿಂಸಾಚಾರದ ಕಿಚ್ಚು ಆರುವ ಲಕ್ಷಣಗಳೇ ಕಾಣುತ್ತಿಲ್ಲ. ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ವ್ಯಾಪ್ತಿಯಲ್ಲಿರೋ ತೌಂಗ್‌ಲಾವೋಬಿ ಅವಾಂಗ್ ಲೈಕೈ ಎಂಬಲ್ಲಿ ನಡೆದ ಘೋರ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ದುಷ್ಕರ್ಮಿಗಳು ಒಂದು ಮನೆಯನ್ನೇ ಗುರಿಯಾಗಿಸಿಕೊಂಡು ಬಾಂಬ್ ಎಸೆದಿದ್ದಾರೆ. ಈ ಭೀಕರ ಸ್ಫೋಟಕ್ಕೆ ಆ ಮನೆಯಲ್ಲಿದ್ದ ಇಬ್ಬರು ಪುಟ್ಟ ಮಕ್ಕಳು ಬಲಿಯಾಗಿದ್ದಾರೆ. ಮಕ್ಕಳನ್ನು ಉಳಿಸಿಕೊಳ್ಳಲು ಹೋದ ತಾಯಿ ಕೂಡ ತೀವ್ರವಾಗಿ ಗಾಯಗೊಂಡಿದ್ದು, ಆಕೆಯ ಸ್ಥಿತಿ ಈಗ ಚಿಂತಾಜನಕವಾಗಿದೆ. ಈ ಇಡೀ ಘಟನೆ ಮನುಕುಲವೇ ತಲೆತಗ್ಗಿಸುವಂತಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್: ಬಾಂಬ್ ದಾಳಿಯ ದೃಶ್ಯಗಳು!! | Photo Credit: https://x.com/ANI
ಸೋಶಿಯಲ್ ಮೀಡಿಯಾದಲ್ಲಿ ವೈರಲ್: ಬಾಂಬ್ ದಾಳಿಯ ದೃಶ್ಯಗಳು!! | Photo Credit: https://x.com/ANI

ತಮ್ಮ ಕಣ್ಣೆದುರೇ ಇಬ್ಬರು ಪುಟ್ಟ ಜೀವಗಳು ಬಾಂಬ್ ದಾಳಿಗೆ ಬಲಿಯಾದ ಸುದ್ದಿ ಕೇಳುತ್ತಿದ್ದಂತೆಯೇ ಸ್ಥಳೀಯರ ಆಕ್ರೋಶ ಕಟ್ಟೆಯೊಡೆದಿದೆ. "ನಮ್ಮ ರಕ್ಷಣೆ ಮಾಡುವವರು ಯಾರು?" ಅಂತ ಕೇಳುತ್ತಾ ಸಾವಿರಾರು ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆಕ್ರೋಶಗೊಂಡ ಪ್ರತಿಭಟನಾಕಾರರು ಕನಿಷ್ಠ ಮೂರು ಲಾರಿಗಳಿಗೆ ಬೆಂಕಿ ಹಚ್ಚಿದ್ದಾರೆ. ಇಡೀ ಏರಿಯಾದಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಜನರ ಕೂಗು ಮತ್ತು ಅಳಲು ಎಲ್ಲೆಡೆ ಕೇಳಿಬರುತ್ತಿದೆ. ಈ ಹಿಂಸಾಚಾರ ನಿಯಂತ್ರಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಮಣಿಸಿದೆ.

ಈ ದಾಳಿಯನ್ನು ಖಂಡಿಸಿ ಜನರು ಇಂಫಾಲ-ಟಿಡಿಮ್ ಮುಖ್ಯ ರಸ್ತೆಯನ್ನು ಹಲವು ಕಡೆಗಳಲ್ಲಿ ಕಲ್ಲು ಮತ್ತು ಮರದ ದಿಮ್ಮಿಗಳನ್ನು ಹಾಕಿ ಬ್ಲಾಕ್ ಮಾಡಿದ್ದಾರೆ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆಯಕಟ್ಟಿನ ಜಾಗಗಳಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಸಾಮಾನ್ಯ ಜನರು ಓಡಾಡಲು ಭಯಪಡುವಂತಾಗಿದ್ದು, ಇಡೀ ಪ್ರದೇಶದಲ್ಲಿ ಕರ್ಫ್ಯೂ ಅಂತಹ ವಾತಾವರಣ ನಿರ್ಮಾಣವಾಗಿದೆ. ಭದ್ರತಾ ಪಡೆಗಳು ಜನರನ್ನು ಚದುರಿಸಲು ಹರಸಾಹಸ ಪಡುತ್ತಿವೆ.

ಮಣಿಪುರದಲ್ಲಿ ಜನಾಂಗೀಯ ಸಂಘರ್ಷದ ನಡುವೆ ಈಗ ಉಗ್ರಗಾಮಿಗಳ ಕೈವಾಡ ಕೂಡ ಇರೋದು ಸ್ಪಷ್ಟವಾಗಿ ಕಾಣುತ್ತಿದೆ. ಅಮಾಯಕ ಕುಟುಂಬಗಳು ಮತ್ತು ಮಕ್ಕಳ ಮೇಲೆ ಬಾಂಬ್ ದಾಳಿ ಮಾಡುವುದು ಯಾವ ರೀತಿಯ ಹೋರಾಟ? ಈ ಪುಟ್ಟ ಮಕ್ಕಳು ಯಾವ ತಪ್ಪು ಮಾಡಿದ್ದರು? ಮನೆ ಮೇಲೆ ದಾಳಿ ಮಾಡಿ ನೆಮ್ಮದಿಯಿಂದ ಇದ್ದ ಸಂಸಾರವನ್ನು ಬೀದಿಗೆ ತಂದ ಇಂತಹ ಕ್ರೂರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಅನ್ನೋದು ಜನರ ಒತ್ತಾಯವಾಗಿದೆ. ಈ ಘಟನೆ ಮಣಿಪುರದಲ್ಲಿ ಶಾಂತಿ ಸ್ಥಾಪನೆ ಎಷ್ಟು ಕಷ್ಟ ಅನ್ನೋದನ್ನ ಮತ್ತೊಮ್ಮೆ ಸಾಬೀತುಪಡಿಸಿದೆ.

ಸದ್ಯಕ್ಕೆ ಬಿಷ್ಣುಪುರ ಮತ್ತು ಮೊಯಿರಾಂಗ್ ಪ್ರದೇಶದಲ್ಲಿ ಪರಿಸ್ಥಿತಿ ತುಂಬಾನೇ ಉದ್ವಿಗ್ನವಾಗಿದೆ. ಸೇನೆ ಮತ್ತು ಅರೆಸೇನಾ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಅಧಿಕಾರಿಗಳು ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತಿದ್ದರೂ, ಜನರ ಆಕ್ರೋಶ ಮಾತ್ರ ಕಡಿಮೆಯಾಗುತ್ತಿಲ್ಲ. ಗಾಯಗೊಂಡಿರೋ ತಾಯಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆ ಗುಣಮುಖಳಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಮಣಿಪುರದಲ್ಲಿ ನೆತ್ತರ ಮಳೆ ನಿಂತು ಮತ್ತೆ ಹೂವಿನ ನಗು ಅರಳೋದು ಯಾವಾಗ ಅನ್ನೋದೇ ದೊಡ್ಡ ಪ್ರಶ್ನೆ.

ಹಿಂಸೆ ಯಾವುದಕ್ಕೂ ಪರಿಹಾರವಲ್ಲ. ಮಕ್ಕಳ ರಕ್ತದ ಮೇಲೆ ಕಟ್ಟುವ ಹೋರಾಟ ಯಾವತ್ತೂ ಸಫಲವಾಗಲ್ಲ. ಮಣಿಪುರಕ್ಕೆ ಈಗ ಕೇವಲ ಭದ್ರತೆ ಮಾತ್ರವಲ್ಲ, ಮನುಷ್ಯತ್ವದ ಮುಲಾಮು ಕೂಡ ಬೇಕಿದೆ. ಬಲಿಯಾದ ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಮಣಿಪುರದಲ್ಲಿ ಆದಷ್ಟು ಬೇಗ ಶಾಂತಿ ನೆಲೆಸಲಿ ಎಂದು ಆಶಿಸೋಣ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನೋದನ್ನ ಮರೆಯದೆ ಹಂಚಿಕೊಳ್ಳಿ.

Latest News