ರಕ್ತಸಿಕ್ತವಾಯ್ತು ಟೈಗರ್ ರೋಡ್ - ಕುಕಿ ಧರ್ಮಗುರುಗಳ ಹತ್ಯೆಯಿಂದ ಹೊತ್ತಿ ಉರಿಯುತ್ತಿದೆ ಮಣಿಪುರ!!

ಕಳೆದ ಒಂದು ವರ್ಷದಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ಕಿಚ್ಚು ಇನ್ನೂ ತಣ್ಣಗಾದಂತೆ ಕಾಣುತ್ತಿಲ್ಲ. ಶಾಂತಿ ನೆಲೆಸುತ್ತಿದೆ ಎಂದು ಭಾವಿಸುವಷ್ಟರಲ್ಲೇ ಒಂದಲ್ಲ ಒಂದು ಭೀಕರ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸುತ್ತಿದೆ. ಇದೀಗ ಬಂದಿರುವ ಸುದ್ದಿ ಏನೆಂದರೆ, ಮಣಿಪುರದಲ್ಲಿ ನಡೆದ ಉಗ್ರರ ಹೊಂಚುದಾಳಿಯಲ್ಲಿ ಮೂವರು ಪ್ರಮುಖ ಕುಕಿ (Kuki) ಚರ್ಚ್ ನಾಯಕರು ಕ್ರೂರವಾಗಿ ಹ*ತ್ಯೆಗೀಡಾಗಿದ್ದಾರೆ.

ಮಣಿಪುರದಲ್ಲಿ ಕುಕಿ ಚರ್ಚ್ ನಾಯಕರ ಹತ್ಯೆ; | Photo Credit: https://x.com/AJEnglish
ಮಣಿಪುರದಲ್ಲಿ ಕುಕಿ ಚರ್ಚ್ ನಾಯಕರ ಹತ್ಯೆ; | Photo Credit: https://x.com/AJEnglish

ನಡೆದಿದ್ದೇನು? ಆ ಬುಧವಾರದ ಕರಾಳ ಬೆಳಿಗ್ಗೆ;

ಘಟನೆ ನಡೆದಿದ್ದು ಬುಧವಾರ ಮುಂಜಾನೆ. ಚುರಾಚಂದ್‌ಪುರದಲ್ಲಿ ನಡೆದ ಒಂದು ಪ್ರಮುಖ ಚರ್ಚ್ ಕಾನ್ಫರೆನ್ಸ್ ಮುಗಿಸಿಕೊಂಡು ವಾಪಸ್ ಬರುತ್ತಿದ್ದ 'ಥಾಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್' (Thadou Baptist Association) ಸದಸ್ಯರ ಮೇಲೆ ಈ ದಾಳಿ ನಡೆದಿದೆ. ಇವರು ಪ್ರಯಾಣಿಸುತ್ತಿದ್ದ ಎರಡು ವಾಹನಗಳು ಕಾಂಗ್‌ಪೋಕ್ಪಿ ಜಿಲ್ಲೆಯ 'ಟೈಗರ್ ರೋಡ್' ಎಂಬ ರಸ್ತೆಯಲ್ಲಿ ಬರುತ್ತಿದ್ದಾಗ, ಹಠಾತ್ ಆಗಿ ಹೊಂಚು ಹಾಕಿದ್ದ ಉಗ್ರರು ಮನಬಂದಂತೆ ಗುಂಡಿನ ಮಳೆ ಕರೆದಿದ್ದಾರೆ.

ಈ ಭೀಕರ ದಾಳಿಯಲ್ಲಿ ರೆವೆರೆಂಡ್ ಡಾ. ವುಮ್‌ಥಾಂಗ್ ಸಿತ್ಲೌ, ರೆವೆರೆಂಡ್ ಕೈಗೌಲುನ್ ಲೌವುಮ್ ಮತ್ತು ಪಾಸ್ಟರ್ ಪೋಗೌಲೆನ್ ಸಿತ್ಲೌ ಎಂಬ ಮೂವರು ನಾಯಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ ಇನ್ನೂ 4 ರಿಂದ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಂತಿಯ ಸಂಕೇತಗಳ ಮೇಲೂ ಕರುಣೆ ತೋರದೇ ನಡೆದ ದಾಳಿ;

ಇಲ್ಲಿ ಅತ್ಯಂತ ಬೇಸರದ ಸಂಗತಿ ಏನೆಂದರೆ, ಇವರು ಪ್ರಯಾಣಿಸುತ್ತಿದ್ದ ವಾಹನಗಳ ಮೇಲೆ 'ಕ್ರಿಶ್ಚಿಯನ್ ಧರ್ಮದ ಚಿಹ್ನೆಗಳನ್ನು' ಸ್ಪಷ್ಟವಾಗಿ ಹಾಕಲಾಗಿತ್ತು. ಇವರು ಯಾವುದೇ ಆಯುಧ ಹಿಡಿದು ಹೊರಟವರಲ್ಲ, ಕೇವಲ ದೇವರ ಸೇವೆಯಲ್ಲಿ ತೊಡಗಿದ್ದ ಧರ್ಮಗುರುಗಳು. ಹೀಗಿದ್ದರೂ ಉಗ್ರರು ಕರುಣೆ ತೋರದೆ ಗುಂಡು ಹಾರಿಸಿರುವುದು ಮನುಕುಲವೇ ತಲೆತಗ್ಗಿಸುವಂತಿದೆ. ಇಂತಹ ಘಟನೆಗಳು ರಾಜ್ಯದಲ್ಲಿ ಈಗಾಗಲೇ ಇರುವ ಉದ್ವಿಗ್ನ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಅಪಾಯವನ್ನು ತಂದೊಡ್ಡಿದೆ.

ಈ ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಕುಕಿ ಸಂಘಟನೆಗಳು ನಾಗಾ ಉಗ್ರರ ಗುಂಪುಗಳಾದ ZUF ಮತ್ತು NSCN-IM ಮೇಲೆ ಗಂಭೀರ ಆರೋಪ ಮಾಡಿವೆ. ಆದರೆ, ಈ ಎರಡೂ ಸಂಘಟನೆಗಳು ಈ ಘಟನೆಯಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿವೆ. ಈ ದಾಳಿಯಿಂದಾಗಿ ಕಾಂಗ್‌ಪೋಕ್ಪಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಜನ ಬೀದಿಗಿಳಿದು ಆಕ್ರೋಶ ಹೊರಹಾಕುತ್ತಿದ್ದಾರೆ, ಅಲ್ಲದೆ ಹಲವೆಡೆ ಬಂದ್ ಕೂಡಾ ಘೋಷಿಸಲಾಗಿದೆ.

ಮೇ 2023 ರಿಂದ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಈ ಹಿಂಸಾಚಾರದಲ್ಲಿ ಇದುವರೆಗೆ 260 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಕುಟುಂಬಗಳು ನಿರ್ಗತಿಕವಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಷ್ಟೇ ಪ್ರಯತ್ನಪಟ್ಟರೂ ಹಿಂಸೆ ಸಂಪೂರ್ಣವಾಗಿ ನಿಲ್ಲುತ್ತಿಲ್ಲ. ಈಗ ಧಾರ್ಮಿಕ ನಾಯಕರನ್ನೇ ಗುರಿಯಾಗಿಸಿಕೊಂಡು ನಡೆದ ಈ ದಾಳಿ ಸಮಾಜದ ಶಾಂತಿ ಕದಡಲು ಮಾಡಿದ ದೊಡ್ಡ ಸಂಚು ಎಂದು ರಾಜಕೀಯ ನಾಯಕರು ಖಂಡಿಸಿದ್ದಾರೆ.

ಸಂಕ್ಷಿಪ್ತ ಮಾಹಿತಿ ಇಲ್ಲಿದೆ;

  • ಸ್ಥಳ - ಟೈಗರ್ ರೋಡ್, ಕಾಂಗ್‌ಪೋಕ್ಪಿ ಜಿಲ್ಲೆ, ಮಣಿಪುರ.
  • ಮೃತರು - ಡಾ. ವುಮ್‌ಥಾಂಗ್ ಸಿತ್ಲೌ, ಕೈಗೌಲುನ್ ಲೌವುಮ್, ಪಾಸ್ಟರ್ ಪೋಗೌಲೆನ್.
  • ಕಾರಣ - ಜನಾಂಗೀಯ ಸಂಘರ್ಷ ಮತ್ತು ಸಂಶಯಾಸ್ಪದ ಉಗ್ರಗಾಮಿ ದಾಳಿ.
  • ಪರಿಣಾಮ - ಸಾರ್ವಜನಿಕ ಪ್ರತಿಭಟನೆ ಮತ್ತು ಬಂದ್ ಘೋಷಣೆ.

ಧರ್ಮಗುರುಗಳ ಹ*ತ್ಯೆ ಎಂದರೆ ಅದು ಕೇವಲ ಒಂದು ಸಮುದಾಯದ ಮೇಲೆ ನಡೆದ ದಾಳಿಯಲ್ಲ, ಬದಲಾಗಿ ಇಡೀ ಮನುಷ್ಯತ್ವದ ಮೇಲೆ ನಡೆದ ದಾಳಿ. ಶಾಂತಿ ಮಂತ್ರ ಜಪಿಸುವವವರಿಗೇ ರಕ್ಷಣೆಯಿಲ್ಲದಂತಾಗಿರುವುದು ವಿಷಾದನೀಯ. ಸರ್ಕಾರಗಳು ಕೂಡಲೇ ಇಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಮಣಿಪುರದಲ್ಲಿ ಮತ್ತೆ ಶಾಂತಿ ನೆಲೆಸುವಂತೆ ಮಾಡಬೇಕು ಎಂಬುದೇ ನಮ್ಮ ಆಶಯ! 

Latest News