ನಮ್ಮ ಕಷ್ಟಕ್ಕೆ ಆಗಲಿ ಅಂತ ಬ್ಯಾಂಕ್‌ನಲ್ಲಿ ಒಡವೆ ಇಟ್ಟು ಸಾಲ ಪಡೀತೀವಿ. ಆದ್ರೆ ಅದೇ ಬ್ಯಾಂಕ್ ನಮ್ಮ ಹಣಕ್ಕೆ ಕನ್ನ ಹಾಕಿದ್ರೆ? ಇಂತಹದ್ದೇ ಒಂದು ಘಟನೆ ಮಲ್ಲೇಶ್ವರಂನ ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿ ನಡೆದಿದೆ ಅಂತ ಗ್ರಾಹಕರಾದ ಬಾಬು ಶಂಕರ್ ಎಂಬುವವರು ಕಣ್ಣೀರು ಹಾಕ್ತಿದ್ದಾರೆ. ಚಿನ್ನದ ಸಾಲ ಪಡೆದ ಬೆನ್ನಲ್ಲೇ ಅವರ ಅಕೌಂಟ್‌ನಿಂದ ಬರೋಬ್ಬರಿ 1.17 ಲಕ್ಷ ರೂಪಾಯಿ ಮಂಗಮಾಯವಾಗಿದೆ!
ಬಾಬು ಶಂಕರ್ ಅವರು ಕಳೆದ ಏಪ್ರಿಲ್ 23 ರಂದು ಇದೇ ಬ್ಯಾಂಕ್‌ನಲ್ಲಿ ತಮ್ಮ ಚಿನ್ನಾಭರಣಗಳನ್ನು ಇಟ್ಟು 18.80 ಲಕ್ಷ ರೂಪಾಯಿ ಗೋಲ್ಡ್ ಲೋನ್ ಪಡೆದಿದ್ದರು. ಲೋನ್ ಸಿಕ್ಕಿದ ಖುಷಿಯಲ್ಲಿದ್ದ ಅವರಿಗೆ ಬ್ಯಾಂಕಿನ ರಿಲೇಷನ್‌ಶಿಪ್ ಮ್ಯಾನೇಜರ್ ಒಬ್ಬರು ಕಾಟ ಕೊಡಲು ಶುರು ಮಾಡಿದರಂತೆ. "ನಮ್ಮಲ್ಲಿ ಇನ್ವೆಸ್ಟ್ ಮಾಡಿ, ಒಳ್ಳೆ ರಿಟರ್ನ್ಸ್ ಸಿಗುತ್ತೆ" ಅಂತ ಬಾಬು ಶಂಕರ್ ಅವರಿಗೆ ಒತ್ತಾಯ ಮಾಡಿದ್ದಾರೆ. ಆದ್ರೆ ಬಾಬು ಶಂಕರ್ ಇದಕ್ಕೆ ಒಪ್ಪಿರಲಿಲ್ಲ.
ಟ್ವಿಸ್ಟ್ ಮೇಲೆ ಟ್ವಿಸ್ಟ್!
ಯಾವಾಗ ಇವರು ಹೂಡಿಕೆಗೆ ಒಪ್ಪಲಿಲ್ಲವೋ, ಅಲ್ಲಿಂದ ಶುರುವಾಯ್ತು ನೋಡಿ ಅಸಲಿ ಆಟ. ಬ್ಯಾಂಕಿನಿಂದ ಇದ್ದಕ್ಕಿದ್ದಂತೆ ಇವರಿಗೆ ಒಂದು ನೋಟಿಸ್ ಬಂದಿದೆ. "ನೀವು ಕೂಡಲೇ 1.50 ಲಕ್ಷ ರೂಪಾಯಿ ಪಾವತಿ ಮಾಡಬೇಕು" ಅಂತ ಅದರಲ್ಲಿತ್ತು. ಇದನ್ನ ನೋಡಿ ಬಾಬು ಶಂಕರ್ ಗಾಬರಿಯಾಗಿದ್ದಾರೆ. ಇದರ ಬೆನ್ನಲ್ಲೇ ಅಪರಿಚಿತರಿಂದ ಸತತವಾಗಿ ಕಾಲ್‌ಗಳು ಮತ್ತು ಮೊಬೈಲ್‌ಗೆ ಓಟಿಪಿಗಳು (OTP) ಬರಲು ಶುರುವಾಗಿವೆ.
ಬಳಸದ ಕಾರ್ಡ್‌ನಿಂದಲೂ ಹಣ ಡೆಬಿಟ್!
ಅಸಲಿ ಶಾಕ್ ಕಾದಿದ್ದು ಮೇ 4 ರಂದು. ಬಾಬು ಶಂಕರ್ ಅವರ ಅಕೌಂಟ್‌ನಿಂದ ಒಂದೇ ದಿನ 97,500 ರೂಪಾಯಿ ಕಟ್ ಆಗಿದೆ. ಅಷ್ಟೇ ಅಲ್ಲ, ಅವರು ಇದುವರೆಗೆ ಬಳಸದೇ ಇದ್ದ, ಮನೆಯಲ್ಲೇ ಸುಮ್ಮನೆ ಬಿದ್ದಿದ್ದ ಹೊಸ ಕ್ರೆಡಿಟ್ ಕಾರ್ಡ್‌ನಿಂದಲೂ 19,500 ರೂಪಾಯಿ ಮಾಯವಾಗಿದೆ! ಆ ಕಾರ್ಡ್‌ನ ಲಿಮಿಟ್ ಇರೋದೇ 20 ಸಾವಿರ, ಅದರಲ್ಲಿ 19,500 ರೂಪಾಯಿ ಲಪಟಾಯಿಸಿದ್ದಾರೆ ಅಂದ್ರೆ ಇದು ಬ್ಯಾಂಕ್ ಒಳಗಿನವರ ಕೈವಾಡವೇ ಇರಬಹುದು ಅನ್ನೋದು ಇವರ ಬಲವಾದ ಸಂಶಯ.
ಬ್ಯಾಂಕ್ ಸಿಬ್ಬಂದಿ ಮೇಲೆ ನೇರ ಆರೋಪ
"ನಾನು ಕ್ರೆಡಿಟ್ ಕಾರ್ಡ್ ಆ್ಯಕ್ಟಿವೇಟ್ ಮಾಡಿಲ್ಲ, ಯಾರಿಗೂ ಪಿನ್ ನಂಬರ್ ಕೊಟ್ಟಿಲ್ಲ. ಹಾಗಿರುವಾಗ ಹಣ ಹೇಗೆ ಕಟ್ ಆಯ್ತು?" ಅನ್ನೋದು ಬಾಬು ಶಂಕರ್ ಅವರ ಪ್ರಶ್ನೆ. ಬ್ಯಾಂಕ್ ಸಿಬ್ಬಂದಿಯೇ ನನ್ನ ಅಕೌಂಟ್ ಮತ್ತು ಕಾರ್ಡ್ ಮಾಹಿತಿಯನ್ನು ಸೈಬರ್ ಕ್ರಿಮಿನಲ್‌ಗಳಿಗೆ ಲೀಕ್ ಮಾಡಿದ್ದಾರೆ ಅಂತ ಅವರು ನೇರವಾಗಿ ಇಂಡಸ್‌ಇಂಡ್ ಬ್ಯಾಂಕ್ ಮೇಲೆ ಬೆರಳು ತೋರಿಸುತ್ತಿದ್ದಾರೆ.
ಬಾಬು ಶಂಕರ್ ಈಗ ಮಲ್ಲೇಶ್ವರಂ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದು, ತಮಗಾದ ಅನ್ಯಾಯಕ್ಕೆ ನ್ಯಾಯ ಕೇಳುತ್ತಿದ್ದಾರೆ. ನೀವು ಕೂಡ ಬ್ಯಾಂಕ್‌ನಲ್ಲಿ ಏನಾದರೂ ಲೋನ್ ಅಥವಾ ಇನ್ವೆಸ್ಟ್‌ಮೆಂಟ್ ಮಾಡಿದ್ರೆ, ನಿಮ್ಮ ಅಕೌಂಟ್ ಮತ್ತು ಕಾರ್ಡ್ ಡೀಟೇಲ್ಸ್ ಬಗ್ಗೆ ಸ್ವಲ್ಪ ಎಚ್ಚರವಾಗಿರಿ. ಬ್ಯಾಂಕ್ ಸಿಬ್ಬಂದಿ ಅಂತ ನಂಬಿ ಅತಿಯಾದ ಮಾಹಿತಿ ಹಂಚಿಕೊಳ್ಳೋ ಮುನ್ನ ನೂರು ಸಲ ಯೋಚಿಸಿ!