Apr 12, 2026 Languages : ಕನ್ನಡ | English

ಸಂಗೀತ ಲೋಕದ ಸುಪ್ರಸಿದ್ಧ ಧ್ವನಿ ಇನ್ನು ನೆನಪು ಮಾತ್ರ - 'ಮೆಲೋಡಿ ಕ್ವೀನ್' ಆಶಾ ಭೋಸ್ಲೆ ನಿಧನ!!

ಭಾರತೀಯ ಸಂಗೀತ ಲೋಕದ ಅಪ್ರತಿಮ ಗಾಯಕಿ, ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ 'ಮೆಲೋಡಿ ಕ್ವೀನ್' ಆಶಾ ಭೋಸ್ಲೆ (92) ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಉಸಿರಾಟದ ತೊಂದರೆ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಶನಿವಾರವಷ್ಟೇ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಚಿಕಿತ್ಸೆ ನೀಡುತ್ತಿದ್ದ ವೈದ್ಯರ ತಂಡ ಅವರ ಸಾವನ್ನು ಅಧಿಕೃತವಾಗಿ ಪ್ರಕಟಿಸಿದೆ.

ಭಾರತೀಯ ಚಿತ್ರರಂಗದ ಒಂದು ಯುಗ ಅಂತ್ಯ
ಭಾರತೀಯ ಚಿತ್ರರಂಗದ ಒಂದು ಯುಗ ಅಂತ್ಯ

ಆರಂಭಿಕ ಜೀವನ ಮತ್ತು ಸಂಘರ್ಷ

ಆಶಾ ಭೋಸ್ಲೆ ಅವರು ಸೆಪ್ಟೆಂಬರ್ 8, 1933 ರಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಗೋಕರ್ ಎಂಬ ಹಳ್ಳಿಯಲ್ಲಿ ಜನಿಸಿದರು. ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ಇವರಿಗೆ ಬಾಲ್ಯದಲ್ಲೇ ಸಂಗೀತದ ಗೀಳು ಹತ್ತಿತ್ತು. ಆದರೆ, ಇವರ ಒಂಬತ್ತನೇ ವಯಸ್ಸಿನಲ್ಲಿ ತಂದೆ ಪಂಡಿತ್ ದೀನನಾಥ್ ಮಂಗೇಶ್ಕರ್ ಅವರು ನಿಧನರಾದಾಗ ಕುಟುಂಬಕ್ಕೆ ಆಸರೆಯಾಗುವ ಜವಾಬ್ದಾರಿ ಇವರ ಮೇಲೆ ಬಿತ್ತು. ಆಗ ಇಡೀ ಕುಟುಂಬ ಮುಂಬೈಗೆ ವಲಸೆ ಬಂದಿತು. ಆಶಾ ಅವರ ಹಿರಿಯ ಸಹೋದರಿ ಲತಾ ಮಂಗೇಶ್ಕರ್ ಆಗಲೇ ಗಾಯಕಿಯಾಗಿ ಗುರುತಿಸಿಕೊಳ್ಳುತ್ತಿದ್ದರು. ಆಶಾ ಅವರು ಕೂಡ ಅಕ್ಕನ ಹಾದಿಯಲ್ಲೇ ಸಾಗಿ ಚಿತ್ರರಂಗಕ್ಕೆ ಕಾಲಿಟ್ಟರು.

ಸಂಗೀತ ಪಯಣದ ಮೈಲಿಗಲ್ಲುಗಳು

ಆಶಾ ಅವರು 1948ರಲ್ಲಿ 'ಚುನ್ರಿಯಾ' ಎಂಬ ಚಿತ್ರದ 'ಸಾವನ್ ಆಯಾ' ಹಾಡಿನ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಶುರುವಾದ ಇವರ ಗಾಯನ ಯಾತ್ರೆ ದಶಕಗಳ ಕಾಲ ನಿರಂತರವಾಗಿ ಸಾಗಿತು. 1950ರಿಂದ 1970ರ ದಶಕದವರೆಗೆ ಬಾಲಿವುಡ್‌ನ ಸಂಗೀತದ ಸುವರ್ಣ ಯುಗದಲ್ಲಿ ಆಶಾ ಭೋಸ್ಲೆ ಅವರದ್ದೇ ಹವಾ ಇತ್ತು. ಕೇವಲ ಮೆಲೋಡಿ ಹಾಡುಗಳು ಮಾತ್ರವಲ್ಲದೆ, ಪಾಪ್, ಶಾಸ್ತ್ರೀಯ ಸಂಗೀತ, ಭಜನೆ, ಗಜಲ್ ಮತ್ತು ಕವ್ವಾಲಿಗಳಲ್ಲೂ ಅವರು ತಮ್ಮ ಛಾಪು ಮೂಡಿಸಿದರು. ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 12 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಅವರು ಗಿನ್ನೆಸ್ ದಾಖಲೆಯನ್ನೂ ಬರೆದಿದ್ದಾರೆ.

ಅಪಾರ ಗೌರವ ಮತ್ತು ಪ್ರಶಸ್ತಿಗಳು

ಇವರ ಸಾಧನೆಯನ್ನು ಪರಿಗಣಿಸಿ ಭಾರತ ಸರ್ಕಾರವು 2000ನೇ ಇಸವಿಯಲ್ಲಿ ಚಿತ್ರರಂಗದ ಅತ್ಯುನ್ನತ ಗೌರವವಾದ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ ನೀಡಿ ಗೌರವಿಸಿತು. 2008ರಲ್ಲಿ ಅವರಿಗೆ ದೇಶದ ಎರಡನೇ ಅತಿದೊಡ್ಡ ನಾಗರಿಕ ಪ್ರಶಸ್ತಿಯಾದ 'ಪದ್ಮ ವಿಭೂಷಣ' ನೀಡಿ ಸನ್ಮಾನಿಸಲಾಯಿತು. 'ಉಮ್ರಾವ್ ಜಾನ್' ಮತ್ತು 'ಇಜಾಜತ್' ಚಿತ್ರದ ಅದ್ಭುತ ಗಾಯನಕ್ಕಾಗಿ ಅವರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಧ್ವನಿಯಲ್ಲಿನ ವೈವಿಧ್ಯತೆ ಮತ್ತು ಎಂತಹ ಕಠಿಣ ರಾಗಗಳನ್ನಾದರೂ ಲೀಲಾಜಾಲವಾಗಿ ಹಾಡುವ ಕಲೆ ಅವರನ್ನು ಇಂದಿನ ಯುವ ಗಾಯಕರಿಗೆ ಮಾದರಿಯನ್ನಾಗಿ ಮಾಡಿದೆ.

ಮರೆಯಲಾಗದ ವ್ಯಕ್ತಿತ್ವ

ಆಶಾ ಭೋಸ್ಲೆ ಅವರು ಕೇವಲ ಗಾಯಕಿಯಾಗಿರದೆ, ಧೈರ್ಯಶಾಲಿ ಮಹಿಳೆಯಾಗಿಯೂ ಗುರುತಿಸಿಕೊಂಡಿದ್ದರು. ಏಳುಬೀಳುಗಳ ನಡುವೆಯೂ ಸದಾ ನಗುಮೊಗದಿಂದ ಇರುತ್ತಿದ್ದ ಅವರು, ಜೀವನದ ಕೊನೆಯವರೆಗೂ ಸಂಗೀತವನ್ನು ಪ್ರೀತಿಸಿದರು. ಅವರ ನಿಧನದಿಂದಾಗಿ ಭಾರತೀಯ ಚಿತ್ರರಂಗದ ಒಂದು ಯುಗವೇ ಅಂತ್ಯಗೊಂಡಂತಾಗಿದೆ. ಅವರ ಮೊಮ್ಮಗಳು ಜನೈ ಭೋಸ್ಲೆ ಅವರು ಸಮಾಜಿಕ ಜಾಲತಾಣದಲ್ಲಿ ಅಜ್ಜಿಯ ಆರೋಗ್ಯದ ಬಗ್ಗೆ ಹಂಚಿಕೊಂಡಿದ್ದ ಪೋಸ್ಟ್ ನೋಡಿ ಅಭಿಮಾನಿಗಳು ಚೇತರಿಸಿಕೊಳ್ಳುತ್ತಾರೆ ಎಂದು ನಂಬಿದ್ದರು. ಆದರೆ ಇಂದು ಆಶಾ ಅವರು ನಮ್ಮನ್ನು ಅಗಲಿದ್ದಾರೆ. ಅವರ ಭೌತಿಕ ಶರೀರ ಮರೆಯಾದರೂ, ಅವರು ಹಾಡಿರುವ ಸಾವಿರಾರು ಹಾಡುಗಳ ಮೂಲಕ ಅವರು ಎಂದೆಂದಿಗೂ ಅಮರರಾಗಿರುತ್ತಾರೆ.

ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಭಾರತೀಯರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇಡೀ ದೇಶ ಪ್ರಾರ್ಥಿಸುತ್ತಿದೆ.