ಶಾಂತವಾಗಿದ್ದ ಕೊಪ್ಪಳ ಜಿಲ್ಲೆಯಲ್ಲಿ ಈಗ 'ಲವ್ ಜಿಹಾದ್' ಆರೋಪ ದೊಡ್ಡ ಸಂಚಲನ ಮೂಡಿಸಿದೆ. ಮುಸ್ತಫಾ ಖಾದ್ರಿ ಎಂಬಾತನ ವಿರುದ್ಧ ಕೇಳಿಬಂದಿರುವ ಸ್ಫೋಟಕ ಮಾಹಿತಿಗಳಿಂದಾಗಿ ಜಿಲ್ಲೆಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಈ ಪ್ರಕರಣ ಈಗ ಕೇವಲ ಕ್ರೈಂ ಕೇಸ್ ಆಗಿ ಉಳಿಯದೆ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿ ನಾಯಕರು ಪೊಲೀಸ್ ಇಲಾಖೆಯ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ಮೊಬೈಲ್‌ನಲ್ಲಿ ಪತ್ತೆಯಾಯ್ತು 9 ಸಾವಿರ ವಿಡಿಯೋಗಳು!
ಮುಸ್ತಫಾ ಖಾದ್ರಿ ಎಂಬಾತನ ವಿರುದ್ಧ ಕೇಳಿಬಂದಿರುವ ದೂರು ಸಮಾಜವನ್ನು ಬೆಚ್ಚಿಬೀಳಿಸುವಂತಿದೆ. ಬಿಜೆಪಿ ನಾಯಕರ ಆರೋಪದ ಪ್ರಕಾರ, ಈತನ ಮೊಬೈಲ್‌ನಲ್ಲಿ ಬರೋಬ್ಬರಿ 16 ಜನ ಹಿಂದೂ ಯುವತಿಯರ 9 ಸಾವಿರ ವಿಡಿಯೋಗಳು ಮತ್ತು 7 ಸಾವಿರಕ್ಕೂ ಹೆಚ್ಚು ಫೋಟೋಗಳು ಪತ್ತೆಯಾಗಿವೆಯಂತೆ. ಅಮಾಯಕ ಯುವತಿಯರನ್ನು ಪ್ರೀತಿಯ ಹೆಸರಲ್ಲಿ ಪುಸಲಾಯಿಸಿ, ಅವರನ್ನು ಮತಾಂತರ ಮಾಡಲು ಪ್ರಯತ್ನ ನಡೆಸಿದ್ದಾನೆ ಎಂಬ ಗಂಭೀರ ಆರೋಪ ಈತನ ಮೇಲಿದೆ.
ಪೊಲೀಸ್ ಇಲಾಖೆಯ ಮೇಲೆ ಬಿಜೆಪಿ ಗರಂ
ಈ ಪ್ರಕರಣ ಬೆಳಕಿಗೆ ಬಂದು ವಾರ ಕಳೆದರೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎಂಬುದು ಬಿಜೆಪಿ ನಾಯಕರ ಮುಖ್ಯ ಆಕ್ರೋಶ. ಎಂಎಲ್‌ಸಿ ಹೇಮಲತಾ ನಾಯಕ್ ನೇತೃತ್ವದಲ್ಲಿ ಬಿಜೆಪಿ ನಿಯೋಗ ಇಂದು ಕೊಪ್ಪಳ ಎಸ್‌ಪಿ ಡಾ. ರಾಮ್ ಎಲ್. ಅರಸಿದ್ದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
"ಪೊಲೀಸರು ಇಷ್ಟೊಂದು ವಿಳಂಬ ಮಾಡುತ್ತಿರುವುದು ಯಾಕೆ? ಎಫ್‌ಎಸ್‌ಎಲ್ (FSL) ವರದಿ ಬರುವಷ್ಟರಲ್ಲಿ ಆ ವಿಡಿಯೋಗಳು ವೈರಲ್ ಆದರೆ ಆ ಹೆಣ್ಣುಮಕ್ಕಳ ಗತಿ ಏನು?" ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಸ್ಥಳೀಯ ಶಾಸಕರು ಮತ್ತು ಸಂಸದರ ಒತ್ತಡಕ್ಕೆ ಮಣಿದು ಪೊಲೀಸರು ಆರೋಪಿಯನ್ನು ರಕ್ಷಿಸುತ್ತಿದ್ದಾರೆ ಎಂಬ ಗಂಭೀರ ದೂರನ್ನೂ ಅವರು ನೀಡಿದ್ದಾರೆ.
ಕೇವಲ ಲವ್ ಜಿಹಾದ್ ಅಲ್ಲ, ಮಟ್ಕಾ-ಗಾಂಜಾ ದಂಧೆಯೂ ಇದೆ!
ಆರೋಪಿ ಮುಸ್ತಫಾ ಕೇವಲ ಯುವತಿಯರನ್ನಷ್ಟೇ ಟಾರ್ಗೆಟ್ ಮಾಡಿಲ್ಲ, ಈತ ಜಿಲ್ಲೆಯ ಮಟ್ಕಾ ಕಿಂಗ್ ಪಿನ್ ಕೂಡ ಹೌದು ಎಂಬ ಮಾತುಗಳು ಕೇಳಿಬರುತ್ತಿವೆ. ಗಾಂಜಾ ಸೇವನೆ ಮತ್ತು ನಿಷೇಧಿತ ಹುಕ್ಕಾ ಬಳಸುವ ವಿಡಿಯೋಗಳು ಕೂಡ ವೈರಲ್ ಆಗಿದ್ದು, ಈತನಿಗೆ ಇಷ್ಟೊಂದು ದೊಡ್ಡ ಜಾಲದ ಬೆಂಬಲ ಎಲ್ಲಿಂದ ಸಿಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ
"ಮುಸ್ತಫಾನನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ, ನಾವು ಸುಮ್ಮನೆ ಕೂರುವುದಿಲ್ಲ. ಕೊಪ್ಪಳದಿಂದ ಆರಂಭವಾಗುವ ಈ ಹೋರಾಟ ರಾಜ್ಯಾದ್ಯಂತ ಹರಡಲಿದೆ" ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
ಸದ್ಯಕ್ಕೆ ಪೊಲೀಸರು ಆರೋಪಿಯ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಎಫ್‌ಎಸ್ಎಲ್‌ಗೆ ಕಳುಹಿಸಿದ್ದಾರೆ. ಐಟಿ ಆ್ಯಕ್ಟ್ ಅಡಿಯಲ್ಲಿ ಸೈಬರ್ ಕ್ರೈಂ ಪೊಲೀಸರು ಮುಸ್ತಫಾನನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಮೊಬೈಲ್ ಫೋನ್‌ಗಳು ಇನ್ನೂ ಅನ್‌ಲಾಕ್ ಆಗಿಲ್ಲ ಎನ್ನಲಾಗುತ್ತಿದ್ದು, ಅವು ಓಪನ್ ಆದ ಮೇಲೆ ಪ್ರಕರಣಕ್ಕೆ ದೊಡ್ಡ ತಿರುವು ಸಿಗುವ ಸಾಧ್ಯತೆ ಇದೆ.