ಬೆಂಗಳೂರು ನಗರದ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋಟಿ ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ದುಬೈಗೆ ತೆರಳುತ್ತಿದ್ದ ಮಹಿಳೆಯ ಲಗೇಜ್ ಬ್ಯಾಗ್‌ನಲ್ಲಿದ್ದ ಅಮೂಲ್ಯ ಆಭರಣಗಳು ಮಾಯವಾಗಿರುವುದು ಪ್ರಕರಣದ ಕೇಂದ್ರಬಿಂದುವಾಗಿದೆ.
ಮಹಿಳೆ ಬೆಂಗಳೂರಿನಿಂದ ದುಬೈಗೆ ಪ್ರಯಾಣಿಸುತ್ತಿದ್ದಾಗ, ಚೆಕ್–ಇನ್ ವೇಳೆ ಚಿನ್ನಾಭರಣಗಳನ್ನು ಅಧಿಕಾರಿಗಳಿಗೆ ತೋರಿಸಿ, ಬ್ಯಾಗ್‌ಗೆ ಟ್ಯಾಗ್ ಮಾಡಿಸಿದ್ದರು. ನಂತರ ಆ ಬ್ಯಾಗ್ ಪ್ಲೈಟ್ ಲಗೇಜ್‌ಗೆ ಹಾಕಲಾಯಿತು. ಆದರೆ ದುಬೈಗೆ ತಲುಪುವಷ್ಟರಲ್ಲಿ ಬ್ಯಾಗ್‌ನಲ್ಲಿದ್ದ ಚಿನ್ನ ಮತ್ತು ವಜ್ರಾಭರಣಗಳು ಕಾಣೆಯಾಗಿದ್ದವು.
ಈ ಘಟನೆಯ ಬಗ್ಗೆ ಮಹಿಳೆ ಶಂಕೆ ವ್ಯಕ್ತಪಡಿಸಿದ್ದು, ಏರ್ಪೋಟ್ ಸಿಬ್ಬಂದಿಯೇ ಕಳ್ಳತನಕ್ಕೆ ಕಾರಣರಾಗಿರಬಹುದು ಎಂದು ಹೇಳಲಾಗಿದೆ. ಸುಮಾರು 790 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು 8 ಲಕ್ಷ ರೂಪಾಯಿ ಮೌಲ್ಯದ ವಜ್ರಾಭರಣಗಳು ಕಳ್ಳತನವಾಗಿವೆ ಎಂದು ದೂರು ದಾಖಲಿಸಲಾಗಿದೆ.
ಕಳೆದ ನವೆಂಬರ್‌ನಲ್ಲಿ ಈ ಮಹಿಳೆ ಕೆಐಎಬಿಯಿಂದ ದುಬೈ ಮೂಲಕ ಅಮೇರಿಕಾಗೆ ತೆರಳಿದ್ದರು. ಹುಬ್ಬಳ್ಳಿ ಮೂಲದ ಈ ಮಹಿಳೆ ಅಮೇರಿಕಾದಲ್ಲಿ ಮಗನ ಜೊತೆ ವಾಸವಾಗಿದ್ದರು. ಇದೀಗ ರಾಜ್ಯಕ್ಕೆ ವಾಪಸ್ ಬಂದ ಸಂದರ್ಭದಲ್ಲಿ, ತಮ್ಮ ಲಗೇಜ್‌ನಲ್ಲಿದ್ದ ಆಭರಣಗಳು ಕಳ್ಳತನವಾಗಿರುವುದನ್ನು ಗಮನಿಸಿ, ಏರ್ಪೋಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಾದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಲಗೇಜ್ ಬ್ಯಾಗ್‌ನಲ್ಲಿ ಚಿನ್ನಾಭರಣಗಳು ಹೇಗೆ ಮಾಯವಾದವು, ಯಾರಿಂದ ಕಳ್ಳತನ ನಡೆದಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಏರ್ಪೋಟ್ ಸಿಬ್ಬಂದಿ, ಲಗೇಜ್ ಹ್ಯಾಂಡ್ಲಿಂಗ್ ಪ್ರಕ್ರಿಯೆ ಹಾಗೂ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ಈ ಘಟನೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ್ದು, ಲಗೇಜ್ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಪ್ರಯಾಣಿಕರು ತಮ್ಮ ಅಮೂಲ್ಯ ವಸ್ತುಗಳನ್ನು ಲಗೇಜ್‌ನಲ್ಲಿ ಇಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ಕೆಂಪೇಗೌಡ ಏರ್ಪೋಟ್‌ನಲ್ಲಿ ನಡೆದ ಈ ಚಿನ್ನ–ವಜ್ರಾಭರಣ ಕಳ್ಳತನ ಪ್ರಕರಣವು ಭದ್ರತಾ ವ್ಯವಸ್ಥೆಯ ಮೇಲೆ ಗಂಭೀರ ಅನುಮಾನಗಳನ್ನು ಹುಟ್ಟಿಸಿದೆ. ತನಿಖೆಯ ಫಲಿತಾಂಶದಿಂದಲೇ ನಿಜವಾದ ಆರೋಪಿಗಳು ಯಾರು ಎಂಬುದು ಬಹಿರಂಗವಾಗಲಿದೆ.