ಬೆಂಗಳೂರು: ರಾಜ್ಯದಲ್ಲಿ ಬಿಸಿಲು ಮತ್ತು ಮಳೆಯ ನಡುವೆ ಕಣ್ಣಾಮುಚ್ಚಾಲೆ ಆಟ ಶುರುವಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮೇ 14ರಂದು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವರುಣನ ಆರ್ಭಟ ಇರಲಿದೆ. ಸುಮಾರು ಮುಕ್ಕಾಲು ಭಾಗದಷ್ಟು ಕರ್ನಾಟಕದಲ್ಲಿ ಮಳೆಯಾಗುವ ನಿರೀಕ್ಷೆ ಇದ್ದರೆ, ಕೆಲವು ಜಿಲ್ಲೆಗಳಲ್ಲಿ ಮಾತ್ರ ಬಿಸಿಲಿನ ಪ್ರಖರತೆ ಹೆಚ್ಚಾಗಲಿದೆ.
ಎಲ್ಲೆಲ್ಲಿ ಮಳೆಯಾಗುವ ಸಾಧ್ಯತೆ ಇದೆ?
ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಎಚ್ಚರಿಸಲಾಗಿದೆ.
ಕರಾವಳಿ: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಮಂಡ್ಯದ ಕೆಲವು ಭಾಗಗಳಲ್ಲಿ ಮಳೆಯ ಸಿಂಚನವಾಗಲಿದೆ.
ಉತ್ತರ ಒಳನಾಡು: ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲೂ ಮಳೆಯ ನಿರೀಕ್ಷೆ ಇದೆ.
ಮಳೆ ಬರುವ ಸಮಯದಲ್ಲಿ ಜೋರಾದ ಗಾಳಿ ಕೂಡ ಬೀಸಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಉತ್ತರ ಒಳನಾಡಿಗೆ ಹೀಟ್ ವೇವ್ ಆತಂಕ!
ಒಂದು ಕಡೆ ಮಳೆಯ ಮುನ್ಸೂಚನೆ ಇದ್ದರೂ, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಎಂದು ಇಲಾಖೆ ಎಚ್ಚರಿಸಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸದ್ಯಕ್ಕೆ ಮಳೆ ಬರುವ ಸಾಧ್ಯತೆ ಕಡಿಮೆ ಇದ್ದು, ಒಣ ಹವೆ ಮುಂದುವರಿಯಲಿದೆ. ಇಲ್ಲಿ ಬಿಸಿಲಿನ ತಾಪ ಜನರನ್ನು ಮತ್ತಷ್ಟು ಹೈರಾಣಾಗಿಸಬಹುದು.
#ಆಲಿಕಲ್ಲುಮಳೆ ಎಚ್ಚರಿಕೆ: #hailstorm #Warning: #orange #Alert #rainfall #thunderstorm #lightning #ksndmc@DeputyCommissi8 @dcdavanagere @DcDharwad@deobelagavi @DCHaveri @dc_gadag @KodaguDC @DEO_CHIKMAGALUR @Deo_dc_hassan@KarnatakaVarthe #KarnatakaRains #Premonsoon pic.twitter.com/iX2Z6ujhek
— Karnataka State Natural Disaster Monitoring Centre (@KarnatakaSNDMC) May 13, 2026
ಬೆಂಗಳೂರಿನ ಹವಾಮಾನ ಹೇಗಿರಲಿದೆ?
ರಾಜಧಾನಿ ಬೆಂಗಳೂರಿನಲ್ಲಿ ನಾಳೆ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿದೆ.
ತಾಪಮಾನ: ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ.
ಗಾಳಿಯ ವೇಗ: ಗಂಟೆಗೆ ಸುಮಾರು 10 ಕಿಲೋ ಮೀಟರ್ ವೇಗದಲ್ಲಿ ತಂಗಾಳಿ ಬೀಸಲಿದೆ.
ರಾಜ್ಯದ ಬಹುತೇಕ ಕಡೆಗಳಲ್ಲಿ ವರುಣ ತಂಪು ನೀಡಲಿದ್ದರೂ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮಾತ್ರ ಬಿಸಿಲಿನ ಬೇಗೆ ಮುಂದುವರಿಯಲಿದೆ. ಹೊರಗೆ ಹೋಗುವಾಗ ಕೊಡೆ ಹಿಡಿದುಕೊಂಡು ಹೋಗುವುದು ಒಳಿತು, ಯಾಕಂದ್ರೆ ಯಾವಾಗ ಮಳೆ ಬರುತ್ತೆ ಅಂತ ಹೇಳೋಕೆ ಆಗಲ್ಲ!