Mar 4, 2026 Languages : ಕನ್ನಡ | English

ಬಿಸಿಲಿನ ನಡುವೆ ಮಳೆಯ ಸೂಚನೆ ಕೊಟ್ಟ ಹವಾಮಾನ ಇಲಾಖೆ - ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ ಆಗುತ್ತೆ?

ರಾಜ್ಯದಲ್ಲಿ ಪ್ರತಿದಿನ ಸಹ ವಾತಾವರಣ ಹೆಚ್ಚೆಚ್ಚು ಬದಲಾವಣೆ ಆಗುತ್ತಲೇ ಇದೆ. ಕೆಲವೊಂದು ಪ್ರದೇಶದಲ್ಲಿ ಬಿಸಿಲು ವಾತಾವರಣ ಕಂಡು ಬರುತ್ತಿದ್ದು ಬೇಸಿಗೆ ತಾಪಮಾನ ಏರುತ್ತಲೇ ಇದೆ ಎನ್ನಬಹುದು. ಅಂದಹಾಗೆ ಇಂದಿನ ಹವಾಮಾನ ರಾಜ್ಯದ ಯಾವ ಯಾವ ಪ್ರದೇಶದಲ್ಲಿ ಹೇಗಿದೆ, ಯಾವ ಯಾವ ಊರಿನ ಕಡೆ ಹೆಚ್ಚು ಬಿಸಿಲಿಗೆ ಜನರು ಸುಸ್ತಾಗಿ ಹೋಗಿದ್ದಾರೆ, ಹಾಗೇನೇ ಎಲ್ಲೆಲ್ಲಿ ಬಿಸಿಲಿನ ನಡುವೆಯೇ ಮಳೆ ಆಗುವ ಸಾಧ್ಯತೆ ಎಂದು ಈ ಲೇಖನದಲ್ಲಿ ನೋಡೋಣ ಬನ್ನಿ. ಹೌದು, ರಾಜ್ಯದಲ್ಲಿ ಫೆಬ್ರವರಿಯಿಂದಲೇ ಬೇಸಿಗೆ ತಾಪಮಾನ ಬಾರಿ ಏರಿಕೆಯಾಗಿದ್ದು, ಜನರು ಬಿಸಿಲಿನಿಂದ ಸಕತ್ ಹೈರಾಣಾಗಿದ್ದಾರೆ. 

ಕರ್ನಾಟಕದಲ್ಲಿ ಬೇಸಿಗೆ ತೀವ್ರತೆ – ನಾಳೆಯಿಂದ ಮಳೆಯ ಮುನ್ಸೂಚನೆ!
ಕರ್ನಾಟಕದಲ್ಲಿ ಬೇಸಿಗೆ ತೀವ್ರತೆ – ನಾಳೆಯಿಂದ ಮಳೆಯ ಮುನ್ಸೂಚನೆ!

ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಮೀರಿದೆ ಎನ್ನುವ ಅಂಶ ದಾಖಲು ಆಗಿದೆ. ವಿಶೇಷವಾಗಿ ಕಲಬುರಗಿಯಲ್ಲಿ 35°C ತಾಪಮಾನ ದಾಖಲಾಗಿರುವುದು ಬೇಸಿಗೆಯ ತೀವ್ರತೆಯನ್ನು ಮತ್ತೊಮ್ಮೆ ಅದರ ಪ್ರಾಮುಖ್ಯತೆ ತೋರಿಸುತ್ತದೆ. ಆದರೆ ಈ ನಡುವೆ ಭಾರತೀಯ ಹವಾಮಾನ ಇಲಾಖೆಯಾದ ಇಂಡಿಯಾ ಮೆಟಿಯೋರಾಲಾಜಿಕಲ್ ಡಿಪಾರ್ಟ್‌ಮೆಂಟ್(IMD), ರಾಜ್ಯದ ಜನರಿಗೆ ಸ್ವಲ್ಪ ಸಮಾಧಾನಕರ ಸುದ್ದಿ ನೀಡಿದೆ ಎನ್ನಬಹುದು. ಭಾನುವಾರದಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುಂಜಾಗ್ರತಾ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾಸಾಗರ ಭಾಗದಲ್ಲಿ ವಾಯುಭಾರ ಕುಸಿತ ಹಾಗೂ ಚಂಡಮಾರುತೀಯ ಪರಿಚಲನ (Cyclonic Circulation) ಉಂಟಾಗಿದೆಯಂತೆ. ಇದರ ಪರಿಣಾಮವಾಗಿ ಫೆಬ್ರವರಿ 22ರಿಂದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗಲಿದೆ. ಈ ಮಳೆಯು ಹಗುರದಿಂದ ಸಾಧಾರಣ ಮಟ್ಟದವರೆಗೆ ಇರಬಹುದು ಅಷ್ಟೇ ಎಂದು ಇಲಾಖೆ ಸೂಚಿಸಿದೆ. ಇನ್ನೂ ಕೆಲವು ಕಡೆಗೆ  ಗುಡುಗು ಸಹಿತ ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ರೈತರು ಮತ್ತು ಆಯಾ ಪ್ರದೇಶದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಮತ್ತು ರಾಮನಗರ ಜಿಲ್ಲೆಗಳಲ್ಲಿ ಭಾನುವಾರದಿಂದ ಮಳೆಯಾಗುವ ಸಾಧ್ಯತೆ ಹೆಚ್ಚು. ಈ ಭಾಗಗಳಲ್ಲಿ ದೈನಂದಿನ ಬಿಸಿಲಿನ ತೀವ್ರತೆ ಕಡಿಮೆಯಾಗಬಹುದು. ಮೈಸೂರು ಮತ್ತು ಮಂಡ್ಯ ಭಾಗದಲ್ಲಿ ಗುಡುಗು ಸಹಿತ ಸ್ವಲ್ಪ ಮಳೆಯಾಗುವ ನಿರೀಕ್ಷೆಯಿದೆ. ಕೊಡಗು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಸಾಧಾರಣ ಮಳೆಯಾಗಬಹುದು. ಈ ಮಳೆಯು ತಾತ್ಕಾಲಿಕವಾದರೂ ಬೇಸಿಗೆಯ ಬೇಗೆಗೆ ಸ್ವಲ್ಪ ಪರಿಹಾರ ಸಿಕ್ಕಂತಾಗಾಬಹುದು. 

ಉತ್ತರ ಒಳನಾಡು ಮತ್ತು ಕರಾವಳಿ ಭಾಗಗಳಲ್ಲೂ ಕೆಲವು ಜಿಲ್ಲೆಗಳಲ್ಲಿ ಮಳೆಯ ಲಕ್ಷಣಗಳಿವೆ. ಬೀದರ್, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಆದರೆ ಉಡುಪಿ, ಉತ್ತರ ಕನ್ನಡ ಹಾಗೂ ಗದಗ, ಹಾವೇರಿ, ಕೊಪ್ಪಳ ಮುಂತಾದ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ಭಾಗಗಳಲ್ಲಿ ಬಿಸಿಲೇ ಮುಂದುವರಿಯಲಿದ್ದು, ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ.

ಇಂದಿನ ಹವಾಮಾನವನ್ನು ನೋಡಿದರೆ, ದಾವಣಗೆರೆಯಲ್ಲಿ ಗರಿಷ್ಠ 33°C ಮತ್ತು ಕನಿಷ್ಠ 21°C ತಾಪಮಾನ ದಾಖಲಾಗುವ ನಿರೀಕ್ಷೆಯಿದೆ. ಮೋಡ ಕವಿದ ವಾತಾವರಣ ಕಂಡುಬಂದರೂ ಮಳೆಯ ಸಾಧ್ಯತೆ ಕಡಿಮೆ. ಬೆಂಗಳೂರಿನಲ್ಲಿ ಹಗಲಿನಲ್ಲಿ ಒಣಹವೆ ಮುಂದುವರಿಯಲಿದ್ದು, ಗರಿಷ್ಠ 31°C ಮತ್ತು ಕನಿಷ್ಠ 17-18°C ತಾಪಮಾನ ಇರಲಿದೆ. ಮಂಗಳೂರು 32–25°C, ಶಿವಮೊಗ್ಗ 33–20°C, ಮೈಸೂರು 32–21°C, ಬೆಳಗಾವಿ 32–20°C, ಹುಬ್ಬಳ್ಳಿ 33–21°C, ಚಿತ್ರದುರ್ಗ 32–21°C, ರಾಯಚೂರು 34–22°C ಮತ್ತು ಉಡುಪಿ 32–24°C ತಾಪಮಾನ ದಾಖಲಾಗುವ ನಿರೀಕ್ಷೆಯಿದೆ.

ಹವಾಮಾನದಲ್ಲಿ ಆಗಾಗ್ಗೆ ಆಗುತ್ತಿರುವ ಬದಲಾವಣೆ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಒಂದೆಡೆ ಭಾರಿ ಬಿಸಿಲು, ಮತ್ತೊಂದೆಡೆ ಹಠಾತ್ ಮಳೆ, ಈ ಎಲ್ಲಾ ಮಿಶ್ರ ಹವಾಮಾನದಿಂದ ಶೀತ, ಕೆಮ್ಮು ಮತ್ತು ವೈರಲ್ ಜ್ವರಗಳ ಪ್ರಕರಣಗಳು ಹೆಚ್ಚಾಗಬಹುದು. ಹೀಗಾಗಿ ಹೊರಗಡೆ ಹೋಗುವಾಗ ಛತ್ರಿ ಕೊಂಡೊಯ್ಯುವುದು ಉತ್ತಮ ನಡೆ. ಹೆಚ್ಚು ಬಿಸಿಲಿರುವ ಸಮಯದಲ್ಲಿ ಅನಾವಶ್ಯಕವಾಗಿ ಹೊರಗೆ ಹೋಗುವುದನ್ನು ತಪ್ಪಿಸುವುದು ಒಳಿತಾಗಿದೆ. ಸಾಕಷ್ಟು ನೀರು ಕುಡಿಯುವುದು ಹಾಗೂ ಕುದಿಸಿ ಆರಿಸಿದ ನೀರನ್ನೇ ಸೇವಿಸುವುದು ಎಲ್ಲರ ಆರೋಗ್ಯಕ್ಕೂ ಆರೋಗ್ಯಕರವಾಗಿದೆ. 

ರಾಜ್ಯದಲ್ಲಿ ಬೇಸಿಗೆ ತೀವ್ರವಾಗಿದ್ದರೂ ನಾಳೆಯಿಂದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಜನರಿಗೆ ಹಾಗೂ ನಮ್ಮ ರೈತ ಬಾಂಧವರಿಗೂ  ಸ್ವಲ್ಪ ನಿರಾಳತೆಯನ್ನು ಕೊಡಲಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಮಳೆಯ ಪ್ರಮಾಣ ಹೆಚ್ಚು ಇರಬಹುದಾದರೆ, ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ ಒಣಹವೆ ಮುಂದುವರಿಯಲಿದೆ. ಹವಾಮಾನ ಇಲಾಖೆ ನೀಡುವ ಮುನ್ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಮತ್ತು ರೈತರು ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಕೈಗೊಳ್ಳುವುದು ಸೂಕ್ತ. ಮುಂದಿನ ಕೆಲವು ದಿನಗಳಲ್ಲಿ ಹವಾಮಾನದಲ್ಲಿ ಇನ್ನಷ್ಟು ಬದಲಾವಣೆಗಳಾಗುವ ಸಾಧ್ಯತೆ ಇರುವುದರಿಂದ ಅಧಿಕೃತ ಮಾಹಿತಿಯನ್ನು ಪರಿಶೀಲಿಸುತ್ತಿರುವುದು ಉತ್ತಮ. 

Latest News