ಲೋಕಸಭೆಯಲ್ಲಿ ನೀಟ್ ಬಿರುಗಾಳಿ - ರಾಹುಲ್ ಗಾಂಧಿ ಬಳಸಿ ನಡವೆ 'ಅಂಧಭಕ್ತ', 'ಮೂರ್ಖ' ಪದಗಳಿಗೆ ಬಿಜೆಪಿಯಿಂದ ತೀವ್ರ ಆಕ್ರೋಶ!!

ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ, ಅದರ ಹೊಣೆಗಾರಿಕೆ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಭಾರೀ ಗದ್ದಲ ಉಂಟಾಗಿದೆ. ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಕುರಿತು ಬುಧವಾರ (ಜು. 29) ನಡೆದ ಮಹತ್ವದ ಚರ್ಚೆಯು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ವೇದಿಕೆಯಾಯಿತು.

ಪ್ರಶ್ನೆ ಪತ್ರಿಕೆ ಸೋರಿಕೆ ಮಸೂದೆ ಚರ್ಚೆ ವೇಳೆ ರಣರಂಗವಾದ ಲೋಕಸಭೆ | Photo Credit: https://x.com/INCIndia
ಪ್ರಶ್ನೆ ಪತ್ರಿಕೆ ಸೋರಿಕೆ ಮಸೂದೆ ಚರ್ಚೆ ವೇಳೆ ರಣರಂಗವಾದ ಲೋಕಸಭೆ | Photo Credit: https://x.com/INCIndia

ಈ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೇಶದ ಯುವಕರ ಆಕ್ರೋಶ ಮತ್ತು ಪ್ರತಿಭಟನೆಯ ನಿಜವಾದ ಅರ್ಥವನ್ನು ವಿವರಿಸಿದರು. ಆದರೆ, ತಮ್ಮ ಭಷಣದ ನಡುವೆ ಅವರು ಬಳಸಿದ 'ಮೂರ್ಖರು' ಮತ್ತು 'ಅಂಧಭಕ್ತರು' ಎಂಬ ಪದಗಳು ಲೋಕಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗುವುದರ ಜೊತೆಗೆ ಬಿಜೆಪಿ ನಾಯಕರ ಭಾರಿ ಆಕ್ರೋಶಕ್ಕೆ ಸಾಕ್ಷಿಯಾಯಿತು.

ಸದನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶದ ಯುವಕರು ನಡೆಸುತ್ತಿರುವ ಪ್ರತಿಭಟನೆಗಳು ಕೇವಲ ಕೋಪ ಅಥವಾ ಹಿಂಸೆಯ ಪ್ರದರ್ಶನವಲ್ಲ ಎಂದು ಸ್ಪಷ್ಟಪಡಿಸಿದರು. ಬದಲಾಗಿ ಅದು ದ್ವೇಷಕ್ಕಿಂತಲೂ ಹೆಚ್ಚಾಗಿ ದೇಶದ ಯುವ ಸಮುದಾಯದ ಆಳವಾದ ನೋವು ಮತ್ತು ಅಭಿವ್ಯಕ್ತಿಯಾಗಿತ್ತು ಎಂದು ಬಣ್ಣಿಸಿದರು. ಬಿಜೆಪಿ ಸೇರಿದಂತೆ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಯುವ ಭಾರತೀಯರ ಈ ಅಭಿವ್ಯಕ್ತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಗೌರವಿಸಬೇಕು ಎಂದು ಅವರು ಒತ್ತಾಯಿಸಿದರು.

ಒಂದು ವೇಳೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಆಡಳಿತ ಪಕ್ಷದ ನಾಯಕರು ಅಥವಾ ಸ್ವತಃ ಬಿಜೆಪಿ ಮುಖಂಡರು ತಮ್ಮ ಮಕ್ಕಳಂತೆ ಕುಳಿತು ಮಾತನಾಡಿದ್ದರೆ, ಅವರ ಸಂಕಷ್ಟಗಳು ಹಾಗೂ ನೋವುಗಳ ಬಗ್ಗೆ ನಿಜವಾದ ಸಹಾನುಭೂತಿ ವ್ಯಕ್ತವಾಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಸಂಸತ್ತಿನಲ್ಲಿ ತಮ್ಮೊಂದಿಗೆ ಮಾತುಕತೆ ನಡೆಸಿದ ಓರ್ವ ವಿದ್ಯಾರ್ಥಿನಿಯ ಮಾತನ್ನು ಉಲ್ಲೇಖಿಸುತ್ತಾ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದರು. ದೇಶವನ್ನು ಆಳುವವರು ಮೂರ್ಖರಾಗಿದ್ದು, ತಮಗೆ ಎಲ್ಲವೂ ತಿಳಿದಿದೆ ಎಂಬ ಸುಳ್ಳು ದುರಹಂಕಾರದಲ್ಲಿ ನಮ್ಮ ದನಿಯನ್ನು ಕೇಳಿಸಿಕೊಳ್ಳುತ್ತಿಲ್ಲ.

ಅವರು ಕೇವಲ ಅಂಧಭಕ್ತರಂತೆ ವರ್ತಿಸುತ್ತಿದ್ದಾರೆ ಎಂದು ಆ ವಿದ್ಯಾರ್ಥಿನಿ ತನ್ನ ಅಳಲನ್ನು ತೋಡಿಕೊಂಡಿದ್ದಳು ಎಂದು ರಾಹುಲ್ ಸದನದ ಗಮನಕ್ಕೆ ತಂದರು. ರಾಹುಲ್ ಗಾಂಧಿ ಅವರ ಬಾಯಿಯಿಂದ ಈ ಪದಗಳು ಬಂದ ತಕ್ಷಣವೇ ಆಡಳಿತ ಪಕ್ಷದ ಎನ್‌ಡಿಎ ಸಂಸತರು ತೀವ್ರವಾಗಿ ತಿರುಗಿಬಿದ್ದರು. ಕೇಂದ್ರ ಸಚಿವ ಕಿರಣ್ ರಿಜಿಜು ಎದ್ದು ನಿಂತು, ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಸದನದಲ್ಲಿ ಅತ್ಯಂತ ಅಸಂಸದೀಯ ಪದಗಳನ್ನು ಬಳಸುತ್ತಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದರು.

ಬಿಜೆಪಿ ನಾಯಕರ ತೀವ್ರ ವಿರೋಧ ಹಾಗೂ ಗದ್ದಲ ಜೋರಾದಾಗ, ತಾವು ಯಾರನ್ನೂ ವೈಯಕ್ತಿಕವಾಗಿ ಉದ್ದೇಶಿಸಿ ಆ ಮಾತನ್ನು ಆಡಿಲ್ಲ ಎಂದು ರಾಹುಲ್ ಗಾಂಧಿ ಸಮರ್ಥಿಸಿಕೊಳ್ಳಲು ಯತ್ನಿಸಿದರು. ಪರಿಸ್ಥಿತಿ ವಿಕಾರವಾಗುತ್ತಿರುವುದನ್ನು ಗಮನಿಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ತಕ್ಷಣವೇ ಮಧ್ಯಪ್ರವೇಶ ಮಾಡಿದರು. ಸದಸ್ಯರು ಮಸೂದೆಗೆ (Bill) ಸಂಬಂಧಿಸಿದ ವಿಷಯಗಳ ಕುರಿತು ಮಾತ್ರ ಮಾತನಾಡಬೇಕೆಂದು ತಾಕೀತು ಮಾಡಿದ ಸ್ಪೀಕರ್, ರಾಹುಲ್ ಗಾಂಧಿ ಬಳಸಿದ 'ಮೂರ್ಖ' ಮತ್ತು 'ಅಂಧಭಕ್ತ' ಎಂಬ ಪದಗಳನ್ನು ಸಂಸತ್ತಿನ ಕಡತದಿಂದ (Records) ಅಧಿಕೃತವಾಗಿ ತೆಗೆದುಹಾಕಲು ನಿರ್ದೇಶನ ನೀಡಿದರು.

ಆದರೂ ಸದನದಲ್ಲಿ ಉಂಟಾಗಿದ್ದ ಬಿಗುವಿನ ವಾತಾವರಣ ಮತ್ತು ಕೋಲಾಹಲ ಸ್ವಲ್ಪ ಹೊತ್ತು ಮುಂದುವರಿಯಿತು. ಚರ್ಚೆಯನ್ನು ಮುಂದುವರಿಸಿದ ರಾಹುಲ್ ಗಾಂಧಿ, ಕೇಂದ್ರ ಶಿಕ್ಷಣ ಸಚಿವಾಲಯದ ಕಾರ್ಯವೈಖರಿಯ ವಿರುದ್ಧವೂ ವಾಗ್ದಾಳಿ ನಡೆಸಿದರು. ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಎಂದಿಗೂ ಸ್ವತಂತ್ರವಾಗಿ ಶಿಕ್ಷಣ ಸಚಿವಾಲಯವನ್ನು ನಡೆಸಲಿಲ್ಲ, ಬದಲಿಗೆ ತೆರೆಮರೆಯಲ್ಲಿ ಆರ್‌ಎಸ್‌ಎಸ್ (RSS) ಸಂಘಟನೆಯೇ ಅದನ್ನು ನಿಯಂತ್ರಿಸುತ್ತಿತ್ತು ಮತ್ತು ನಡೆಸುತ್ತಿತ್ತು ಎಂದು ಗಂಭೀರ ಆರೋಪ ಮಾಡಿದರು. ದೇಶದ ಹಲವಾರು ಪ್ರಮುಖ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಅರ್ಹತೆಗಿಂತ ಹೆಚ್ಚಾಗಿ ಆರ್‌ಎಸ್‌ಎಸ್ ಸಿದ್ಧಾಂತಿಗಳನ್ನೇ ಉಪಕುಲಪತಿಗಳಾಗಿ (VC) ನೇಮಕ ಮಾಡಲಾಗಿದೆ.

ವಿದ್ಯಾರ್ಥಿಗಳನ್ನು ಸ್ವತಂತ್ರವಾಗಿ ಆಲೋಚಿಸಲು ಬಿಡದೆ ಅವರನ್ನು ಅಂಧಭಕ್ತರನ್ನಾಗಿ ಪರಿವರ್ತಿಸಲು ಆರ್‌ಎಸ್‌ಎಸ್ ಬಯಸಿದೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ವಿರುದ್ಧವೂ ನೇರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿಷಯದಲ್ಲಿ ಗೃಹ ಸಚಿವರಿಗೆ ನನ್ನ ಎದುರು ಬಂದು ನಿಲ್ಲುವ ಧೈರ್ಯವಿಲ್ಲ ಎಂದು ಟೀಕಿಸಿದರು. ಅವರು ಕಾರಿನಲ್ಲಿ ಕುಳಿತು ನಡುಗುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ವ್ಯಂಗ್ಯವಾಡಿದ ಅವರು, ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ (Pellet Gun) ಹಾರಿಸಲು ಸರ್ಕಾರವೇ ಅನುಮತಿ ನೀಡಿತ್ತು ಎಂದು ಅತ್ಯಂತ ಗಂಭೀರ ಆರೋಪ ಮಾಡಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಮೇಲಿನ ಚರ್ಚೆಯು ಯುವಕರ ಹಿತಾಸಕ್ತಿಗಿಂತ ರಾಜಕೀಯ ಆರೋಪ-ಪ್ರತ್ಯಾರೋಪಗಳು ಮತ್ತು ತೀವ್ರ ಕೋಲಾಹಲದಿಂದ ಕೂಡಿದ ಕದನ ಕಣವಾಗಿ ಮಾರ್ಪಟ್ಟಿತು. ಮುಂಬರುವ ದಿನಗಳಲ್ಲಿ ಸಂಸತ್ತಿನಲ್ಲಿ ಈ ವಿಷಯ ಮತ್ತಷ್ಟು ಬಿರುಗಾಳಿ ಎಬ್ಬಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

Latest News