ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ಪದ್ಧತಿಯಲ್ಲಿ ದೊಡ್ಡ ಬದಲಾವಣೆ ತಂದಿದೆ. ಇನ್ನು ಮುಂದೆ ಪರೀಕ್ಷೆಯಲ್ಲಿ ತೃತೀಯ ಭಾಷೆಯಾಗಿ ಹಿಂದಿ ಕಡ್ಡಾಯವಾಗಿರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
"ನಾನು ಹಿಂದಿ ಕಲಿಯಬಾರದು ಎಂದು ಹೇಳುತ್ತಿಲ್ಲ, ಆದರೆ ಪರೀಕ್ಷೆಗೆ ಅದು ಕಡ್ಡಾಯ ಆಗಬಾರದು" ಎಂಬುದು ಸಿಎಂ ಸಿದ್ದರಾಮಯ್ಯ ಅವರ ಮಾತು. "ನಾವು ಓದುವ ಕಾಲದಲ್ಲಿ ಹಿಂದಿ ಕಡ್ಡಾಯ ಇರಲಿಲ್ಲ, ಹೀಗಾಗಿ ಅದನ್ನು ಕಡ್ಡಾಯವಾಗಿ ಹೇರುವುದು ಸರಿಯಲ್ಲ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡಿಗರ ಮೇಲೆ ಯಾವುದೇ ಭಾಷೆಯ ಹೇರಿಕೆ ಇರಬಾರದು ಎಂಬುದು ಸರ್ಕಾರದ ನಿಲುವು.
ಈ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತೃತೀಯ ಭಾಷೆಯ ಅಂಕವನ್ನು ಪರಿಗಣಿಸದಿರಲು ತೀರ್ಮಾನ ಕೈಗೊಂಡಿದ್ದೇವೆ. ಎಸ್‌ಎಸ್‌ಎಲ್‌ಸಿ ಯಲ್ಲಿ 625 ಅಂಕಗಳನ್ನು 525 ಕ್ಕೆ ನಿಗದಿಪಡಿಸಲು ತೀರ್ಮಾನಿಸಲಾಗಿದೆ. ಸರ್ಕಾರದ ಯಾವುದೇ ತೀರ್ಮಾನಕ್ಕೆ ಬೆಂಬಲ ಇಲ್ಲವೇ ವಿರೋಧವೂ ವ್ಯಕ್ತವಾಗಬಹುದು. ಹಿಂದಿ ಭಾಷೆಯನ್ನು ಕಲಿಯುವುದರಲ್ಲಿ ಸರ್ಕಾರದ… pic.twitter.com/SyecQbUXBw
— Siddaramaiah (@siddaramaiah) March 28, 2026
ಈಗಾಗಲೇ ಜಾರಿಯಲ್ಲಿರುವ 625 ಅಂಕಗಳ ಪರೀಕ್ಷಾ ಪದ್ಧತಿಯನ್ನು 525 ಅಂಕಗಳಿಗೆ ಇಳಿಕೆ ಮಾಡಲಾಗಿದೆ. ತೃತೀಯ ಭಾಷಾ ಪರೀಕ್ಷೆಯನ್ನು ರದ್ದುಪಡಿಸಿಲ್ಲ, ಬದಲಾಗಿ ಅದನ್ನು ಅಂಕಗಳ ಲೆಕ್ಕಾಚಾರದಿಂದ ಹೊರಗಿಟ್ಟು ಕೇವಲ 'ಗ್ರೇಡ್' (Grade) ಪದ್ಧತಿಯನ್ನು ಜಾರಿಗೆ ತರಲಾಗಿದೆ. ಅಂದರೆ, ಈ ಪರೀಕ್ಷೆಯಲ್ಲಿ ಪಾಸ್ ಅಥವಾ ಫೇಲ್ ಎಂಬ ಭಯವಿಲ್ಲದೆ ವಿದ್ಯಾರ್ಥಿಗಳು ಗ್ರೇಡ್‌ಗಳನ್ನು ಪಡೆಯಬಹುದು. ಈ ಹೊಸ ನಿಯಮ ಈ ವರ್ಷದಿಂದಲೇ ಜಾರಿಗೆ ಬಂದಿದೆ.
ಯಾವುದೇ ಸರ್ಕಾರಿ ನಿರ್ಧಾರಕ್ಕೂ ವಿರೋಧ ಮತ್ತು ಬೆಂಬಲ ಇದ್ದೇ ಇರುತ್ತದೆ. "ಶೇ 100ರಷ್ಟು ಜನರಿಗೆ ಇಷ್ಟವಾಗುವ ತೀರ್ಮಾನ ತೆಗೆದುಕೊಳ್ಳುವುದು ಕಷ್ಟ. ಆದರೆ, ಎಲ್ಲವನ್ನೂ ಪರಾಮರ್ಶಿಸಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಯಾರೋ ಕೆಲವರು ವಿರೋಧಿಸುತ್ತಾರೆ ಎಂದ ಮಾತ್ರಕ್ಕೆ ನಾವು ಹಿಂದೆ ಸರಿಯುವುದಿಲ್ಲ" ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಡ್ರಗ್ಸ್ ಮುಕ್ತ ಕರ್ನಾಟಕವೇ ಗುರಿ
ಶಿಕ್ಷಣದ ಜೊತೆಗೆ ರಾಜ್ಯದಲ್ಲಿ ಮಿತಿಮೀರುತ್ತಿರುವ ಡ್ರಗ್ಸ್ ದಂಧೆಯ ವಿರುದ್ಧವೂ ಸಿಎಂ ಸಮರ ಸಾರಿದ್ದಾರೆ. "ಕರ್ನಾಟಕವನ್ನು ಸಂಪೂರ್ಣವಾಗಿ ಡ್ರಗ್ಸ್ ಮುಕ್ತಗೊಳಿಸುವುದು ನಮ್ಮ ಉದ್ದೇಶ. ಮೈಸೂರಿನಲ್ಲಿ ಡ್ರಗ್ಸ್ ಜಾಲ ಪತ್ತೆಯಾಗಿದ್ದು, ಇದರ ಹಿಂದೆ ಯಾರೇ ಇದ್ದರೂ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ" ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಮೈಸೂರಿನ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ದೂರುಗಳು ಬಂದರೆ ತಕ್ಷಣ ಪರಿಶೀಲಿಸಿ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮೇಲಿನ ಭಾಷೆಯ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಇಟ್ಟಿರುವ ಈ ಹೆಜ್ಜೆ, ಶೈಕ್ಷಣಿಕ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.