ಕರ್ನಾಟಕ ರಾಜಕೀಯದಲ್ಲಿ ಈಗ ಭಾರಿ ಬಿರುಗಾಳಿ ಎದ್ದಿದೆ. ಹೌದು, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಅಧಿಕೃತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ, ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಕುತೂಹಲಕ್ಕೆ ಸದ್ಯದಲ್ಲೇ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಬರುವ ಸೋಮವಾರವೇ ಕನಕಪುರ ಬಂಡೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಮಾಡಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಇದಕ್ಕೆ ಪೂರಕವೆಂಬಂತೆ, ನೂತನ ಸರ್ಕಾರ ಮತ್ತು ಹೊಸ ಸಚಿವ ಸಂಪುಟ ರಚನೆಯ ಪ್ರಕ್ರಿಯೆಗಳು ಈಗಾಗಲೇ ರಾಕೆಟ್ ವೇಗದಲ್ಲಿ ಆರಂಭವಾಗಿವೆ.
ಶನಿವಾರ ಸಂಜೆ 4 ಗಂಟೆಗೆ ಹೈವೋಲ್ಟೇಜ್ ಸಭೆ!
ಹೊಸ ಸಿಎಂ ಆಯ್ಕೆಯ ಮೊದಲ ಅಧಿಕೃತ ಭಾಗವಾಗಿ, ನಾಳೆ ಅಂದರೆ ಶನಿವಾರ (ಮೇ 30) ಸಂಜೆ 4 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆಯನ್ನು ಕರೆಯಲಾಗಿದೆ. ಬೆಂಗಳೂರಿನ ವಿಧಾನಸೌಧದ 3ನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಈ ಹೈವೋಲ್ಟೇಜ್ ಮೀಟಿಂಗ್ ನಡೆಯಲಿದೆ.
ವಿಶೇಷ ಅಂದರೆ, ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಈ ಸಭೆ ನಡೆಯುತ್ತಿದ್ದು, ಕಾಂಗ್ರೆಸ್‌ನ ಎಲ್ಲಾ ಶಾಸಕರು ತಪ್ಪದೇ ಈ ಸಭೆಗೆ ಹಾಜರಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ (ವಿಪ್) ನೀಡಲಾಗಿದೆ.
ಸಭೆಯಲ್ಲಿ ಏನಾಗುತ್ತೆ?
ಈ ಶಾಸಕಾಂಗ ಸಭೆಯ ಮುಖ್ಯ ಉದ್ದೇಶವೇ ಹೊಸ ನಾಯಕನನ್ನು ಆರಿಸುವುದು. ಸಭೆಯಲ್ಲಿ ಕಾಂಗ್ರೆಸ್‌ನ ಎಲ್ಲಾ ಶಾಸಕರು ಒಮ್ಮತದಿಂದ ಡಿ.ಕೆ.ಶಿವಕುಮಾರ್ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವುದು ಬಹುತೇಕ ಫಿಕ್ಸ್ ಆಗಿದೆ.
ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ವಿಧಾನ ಪರಿಷತ್ ಸಭಾನಾಯಕ ಎನ್.ಎಸ್. ಭೋಸರಾಜು ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಶಾಸಕಾಂಗ ನಾಯಕನ ಆಯ್ಕೆಯ ಬೆನ್ನಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಲಾಗುತ್ತದೆ.
ದಿಲ್ಲಿ ಮಟ್ಟದಲ್ಲಿ ನಡೆದ ಸಂಧಾನ ಯಶಸ್ವಿ?
ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಭಾರಿ ರಾಜಕೀಯ ಕಸರತ್ತುಗಳು ನಡೆದಿದ್ದವು. ನಿರ್ಗಮಿತ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಪ್ರತ್ಯೇಕವಾಗಿ ದೆಹಲಿಗೆ ಹಾರಿದ್ದರು. ಅಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಇಷ್ಟು ದಿನ ಸಿಎಂ ಆಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸಿದ್ದರಾಮಯ್ಯ ಅವರು ಹೈಕಮಾಂಡ್‌ಗೆ ಕೃತಜ್ಞತೆ ಸಲ್ಲಿಸಿ ಬಂದಿದ್ದಾರೆ. ಅಲ್ಲಿಗೆ ಹೈಕಮಾಂಡ್ ಮಟ್ಟದಲ್ಲಿ ಅಧಿಕಾರ ಹಸ್ತಾಂತರದ ಸೂತ್ರ ಯಶಸ್ವಿಯಾಗಿದೆ ಮತ್ತು ಡಿಕೆಶಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂಬುದು ಸ್ಪಷ್ಟವಾಗಿದೆ.
ಸೋಮವಾರ ಸಂಜೆ 'ಗೊಧೂಳಿ ಮುಹೂರ್ತ'ದಲ್ಲಿ ಪ್ರಮಾಣವಚನ!
ರಾಜಕೀಯ ವಲಯದಿಂದ ಸಿಗುತ್ತಿರುವ ಮಾಹಿತಿ ಪ್ರಕಾರ, ಸೋಮವಾರ ಸಂಜೆ ಶುಭ ತರಲಿರುವ 'ಗೊಧೂಳಿ ಮುಹೂರ್ತ'ದಲ್ಲಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ.
ಎಲ್ಲಿ ನಡೆಯಲಿದೆ ಕಾರ್ಯಕ್ರಮ?
ಸದ್ಯಕ್ಕೆ ಸಿಗುತ್ತಿರುವ ಮಾಹಿತಿ ಪ್ರಕಾರ, ಈ ಭವ್ಯ ಪ್ರಮಾಣವಚನ ಕಾರ್ಯಕ್ರಮವನ್ನು ಕಂಠೀರವ ಕ್ರೀಡಾಂಗಣದಲ್ಲಿ ಅಥವಾ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ
ಇದಕ್ಕೂ ಮುನ್ನ, ಗುರುವಾರವೇ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆ ರಾಜೀನಾಮೆಯನ್ನು ಅಂಗೀಕರಿಸಿದ್ದಲ್ಲದೆ, ಸದ್ಯದ ಸಚಿವ ಸಂಪುಟವನ್ನೂ ವಿಸರ್ಜನೆ ಮಾಡಿದ್ದಾರೆ. ಹೊಸ ಸರ್ಕಾರ ಬರುವವರೆಗೂ ಉಸ್ತುವಾರಿಯಾಗಿ ಮುಂದುವರೆಯಲು ಸಿದ್ದರಾಮಯ್ಯ ಅವರಿಗೆ ಸೂಚಿಸಲಾಗಿದೆ.
ನಾಳೆ ಶನಿವಾರ ಸಂಜೆ ನಡೆಯುವ ಶಾಸಕಾಂಗ ಪಕ್ಷದ ಸಭೆಯ ಮೇಲೆ ಇಡೀ ರಾಜ್ಯದ ಕಣ್ಣು ನೆಟ್ಟಿದೆ. ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಈಗಿನಿಂದಲೇ ಸಂಭ್ರಮಾಚರಣೆಗೆ ರೆಡಿಯಾಗುತ್ತಿದ್ದಾರೆ. ಸೋಮವಾರ ಕರ್ನಾಟಕಕ್ಕೆ ಹೊಸ ಸಾರಥಿ ಸಿಗುವುದು ಗ್ಯಾರಂಟಿ ಎನ್ನುತ್ತಿವೆ ಮೂಲಗಳು!