ಬೆಂಗಳೂರಿನಲ್ಲಿ ಒಡಿಶಾ ರಾಜ್ಯದ ಕಾಂಗ್ರೆಸ್ ಶಾಸಕರ ವಾಸ್ತವ್ಯದ ಕುರಿತು ಎದ್ದಿರುವ ರಾಜಕೀಯ ಚರ್ಚೆಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಸ್ಪಷ್ಟನೆ ನೀಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನೇನೂ ಒಡಿಶಾ ಶಾಸಕರನ್ನು ಇಲ್ಲಿಗೆ ಬನ್ನಿ ಎಂದು ಕರೆದಿಲ್ಲ. ಅವರೇ ಬೆಂಗಳೂರಿಗೆ ಬಂದಿದ್ದಾರೆ, ಅವರಿಗೆ ಆತಿಥ್ಯ ನೀಡುವುದು ನಮ್ಮ ಜವಾಬ್ದಾರಿ," ಎಂದು ತಿಳಿಸಿದ್ದಾರೆ.
ಒಡಿಶಾದ ಪ್ರದೇಶ ಕಾಂಗ್ರೆಸ್ ಸಮಿತಿ (PCC) ಅಧ್ಯಕ್ಷರು ತಮಗೆ ಕರೆ ಮಾಡಿ, ತಮ್ಮ ಶಾಸಕರು ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು. ಅವರಿಗೆ ಮೈಸೂರು ನೋಡುವ ಆಸೆ ಇದೆ ಮತ್ತು ಆರಾಮವಾಗಿ ಇರಲು ಒಂದು ಸುರಕ್ಷಿತ ಜಾಗ ಬೇಕು ಎಂದು ಕೇಳಿಕೊಂಡಿದ್ದಕ್ಕೆ, ತಾವು ಅವರಿಗೆ ಸೂಕ್ತ ವ್ಯವಸ್ಥೆ ಮಾಡಿರುವುದಾಗಿ ಡಿಕೆಶಿ ವಿವರಿಸಿದ್ದಾರೆ. ಪ್ರಸ್ತುತ ವಿಧಾನಸಭೆ ಅಧಿವೇಶನ ನಡೆಯುತ್ತಿರುವುದರಿಂದ, ಕಲಾಪ ಮುಗಿದ ಬಳಿಕ ತಾವೇ ಖುದ್ದಾಗಿ ಹೋಗಿ ಅವರನ್ನು ಭೇಟಿ ಮಾಡುವುದಾಗಿ ಅವರು ಹೇಳಿದ್ದಾರೆ.
"ಇದು ನನಗೇನು ಹೊಸತಲ್ಲ": ಹಳೆಯ ನೆನಪುಗಳನ್ನು ಹಂಚಿಕೊಂಡ ಡಿಸಿಎಂ
ರಾಜ್ಯಸಭೆ ಚುನಾವಣೆಯ ಸಂದರ್ಭದಲ್ಲಿ ಅಡ್ಡ ಮತದಾನ (Cross Voting) ತಡೆಯಲು ಅಥವಾ 'ಆಪರೇಷನ್ ಕಮಲ'ದಿಂದ ಶಾಸಕರನ್ನು ರಕ್ಷಿಸಲು ನಿಮಗೆ ಹೈಕಮಾಂಡ್ ಜವಾಬ್ದಾರಿ ನೀಡಿದೆಯೇ? ಎಂಬ ಪ್ರಶ್ನೆಗೆ ಡಿಕೆಶಿ ಮಾರ್ಮಿಕವಾಗಿ ಉತ್ತರಿಸಿದ್ದಾರೆ. "ಇಂತಹ ಕೆಲಸಗಳು ನನಗೇನು ಹೊಸತಲ್ಲ. ಮಹಾರಾಷ್ಟ್ರದ ವಿಲಾಸ್ರಾವ್ ದೇಶ್‌ಮುಖ್ ಅವರ ಸರ್ಕಾರದ ಕಾಲದಿಂದಲೂ ನಾನು ಇಂತಹ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದೇನೆ. ಅಹ್ಮದ್ ಪಟೇಲ್ ಅವರ ರಾಜ್ಯಸಭೆ ಚುನಾವಣೆ ಇರಲಿ ಅಥವಾ ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟು ಇರಲಿ, ಪಕ್ಷ ಸಂಕಷ್ಟದಲ್ಲಿದ್ದಾಗ ನಾನು ಕೆಲಸ ಮಾಡಿದ್ದೇನೆ," ಎಂದು ತಮ್ಮ ಹಳೆಯ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ.
ಪಕ್ಷದ ಶಾಸಕರು ಸುರಕ್ಷಿತವಾಗಿರಲು ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದರೆ ಅದು ಇಲ್ಲಿನ ಆಡಳಿತದ ಮೇಲಿರುವ ನಂಬಿಕೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ನನ್ನ ಸಹೋದ್ಯೋಗಿಗಳು ಬಂದಾಗ ಅವರನ್ನು ನೋಡಿಕೊಳ್ಳುವುದು ನನ್ನ ಧರ್ಮ," ಎಂದು ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸಚಿವ ಸಂಪುಟ ಪುನಾರಚನೆ ಮತ್ತು ಶಾಸಕರ ಅಸಮಾಧಾನ
ಇದೇ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಇತರ ಪ್ರಮುಖ ವಿಚಾರಗಳ ಬಗ್ಗೆಯೂ ಅವರು ಮಾತನಾಡಿದರು. ಸಚಿವ ಸಂಪುಟ ಪುನಾರಚನೆಗೆ ಶಾಸಕರಿಂದ ಒತ್ತಡ ಹೆಚ್ಚಾಗುತ್ತಿರುವ ಬಗ್ಗೆ ಕೇಳಿದಾಗ, "ಪ್ರತಿಯೊಬ್ಬ ಶಾಸಕನಿಗೂ ಮಂತ್ರಿಯಾಗಬೇಕು ಎಂಬ ಆಸೆ ಇರುವುದು ಸಹಜ. ನಾನು ಕೂಡ ಮೊದಲ ಬಾರಿಗೆ ಶಾಸಕನಾದಾಗ ಮಂತ್ರಿಯಾಗಿದ್ದೆ. ಈಗ ನಮಗೆ ವಯಸ್ಸಾಗಿದೆ, ಹಿರಿಯ ನಾಗರಿಕರಾಗಿದ್ದೇವೆ. ಹೊಸಬರಿಗೂ ಆಸೆ ಇರುತ್ತದೆ, ಅದರಲ್ಲಿ ತಪ್ಪೇನಿಲ್ಲ," ಎಂದು ಬಹಳ ಕೂಲಾಗಿಯೇ ಉತ್ತರಿಸಿದ್ದಾರೆ.
ಇನ್ನು, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಬಜೆಟ್ ಬಗ್ಗೆ ವ್ಯಕ್ತಪಡಿಸಿರುವ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, "ಇಕ್ಬಾಲ್ ಹುಸೇನ್ ಅವರು ಜಿಲ್ಲಾ ನ್ಯಾಯಾಲಯ ಬೇಕು ಎಂದು ಕೇಳಿದ್ದರು, ಅದನ್ನು ನಾವು ನೀಡಿದ್ದೇವೆ. ಅವರ ಕ್ಷೇತ್ರಕ್ಕೆ ಬೇಕಾದ ಸಾಕಷ್ಟು ಕೆಲಸಗಳನ್ನು ನಾವು ಮಾಡಿಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅದೆಲ್ಲವನ್ನೂ ಅಧಿಕೃತವಾಗಿ ಘೋಷಣೆ ಮಾಡುತ್ತೇವೆ," ಎಂದು ಹೇಳುವ ಮೂಲಕ ಶಾಸಕರ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನ ಮಾಡಿದರು.