ಸರ್ಕಾರದಿಂದ ಬಂತು ಸ್ವಂತ ಮನೆ ಕಟ್ಟುವವರಿಗೆ ಸಿಹಿ ಸುದ್ದಿ - ಇನ್ಮೇಲೆ ‘OC’ ಪಡೆಯೋ ಕಿರಿಕಿರಿ ಇರಲ್ಲವಂತೆ ನೋಡಿ!

ಸ್ವಂತದೊಂದು ಪುಟ್ಟ ಸೂರು ಹೊಂದಬೇಕು ಅನ್ನೋದು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ದೊಡ್ಡ ಕನಸು. ಆದರೆ, ಹರಸಾಹಸ ಪಟ್ಟು ಮನೆ ಕಟ್ಟಿದ ಮೇಲೂ ನೆಮ್ಮದಿಯಾಗಿ ಇರೋಕೆ ಆಗ್ತಿರಲಿಲ್ಲ. ಯಾಕಂದ್ರೆ, ಮನೆ ಪೂರ್ತಿಯಾದ ಮೇಲೆ ಗ್ರಾಹಕರು ಪಂಚಾಯತ್ ಕಚೇರಿಗಳಿಗೆ ಅಲೆದಾಡಿ ‘ಸ್ವಾಧೀನಾನುಭವ ಪ್ರಮಾಣ ಪತ್ರ’ ಅಂದರೆ ‘OC’ (Occupancy Certificate) ಪಡೀಬೇಕಿತ್ತು. ಇದಕ್ಕಾಗಿ ಅಧಿಕಾರಿಗಳ ಹಿಂದೆ ತಿರುಗಾಡಿ ಜನ ಸುಸ್ತಾಗಿ ಹೋಗ್ತಿದ್ರು. ಆದರೆ ಈಗ ಹಳ್ಳಿ ಜನರಿಗೆ ಮತ್ತು ಮಧ್ಯಮ ವರ್ಗದವರಿಗೆ ರಾಜ್ಯ ಸರ್ಕಾರ ಒಂದು ಸೂಪರ್ ಆದೇಶ ಹೊರಡಿಸುವ ಮೂಲಕ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ಸಣ್ಣ ವಸತಿ ಕಟ್ಟಡಗಳಿಗೆ ಈ ಓಸಿ ಪಡೆಯುವ ಕಿರಿಕಿರಿ ಇರೋದಿಲ್ಲ!

ಇನ್ಮುಂದೆ 'OC' ಪ್ರಮಾಣ ಪತ್ರದ ಕಿರಿಕಿರಿ ಇರಲ್ಲ! | Photo Credit: AI
ಇನ್ಮುಂದೆ 'OC' ಪ್ರಮಾಣ ಪತ್ರದ ಕಿರಿಕಿರಿ ಇರಲ್ಲ! | Photo Credit: AI

ಏನಿದು ಸರ್ಕಾರದ ಹೊಸ ಆದೇಶ?

ಸಾಮಾನ್ಯವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಮನೆ ಕಟ್ಟಿದ್ರೂ, ಅದು ವಾಸ ಮಾಡಲು ಯೋಗ್ಯವಾಗಿದೆ ಅಂತ ಅಧಿಕಾರಿಗಳಿಂದ ದೃಢೀಕರಣ ಪತ್ರ (OC) ಪಡೆಯುವುದು ಕಡ್ಡಾಯವಾಗಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ಅನಗತ್ಯ ವಿಳಂಬ ಆಗ್ತಿತ್ತು ಮತ್ತು ಪಂಚಾಯತ್ ಸಿಬ್ಬಂದಿಗೂ ಕೆಲಸದ ಹೊರೆ ಜಾಸ್ತಿ ಇತ್ತು. ಈ ಸಮಸ್ಯೆಯನ್ನು ಹೋಗಲಾಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2025ರ ಹೊಸ ತಿದ್ದುಪಡಿ ನಿಯಮಗಳ ಅಡಿಯಲ್ಲಿ ಸಣ್ಣ ಮನೆಗಳಿಗೆ ಇದರಿಂದ ಅಧಿಕೃತವಾಗಿ ವಿನಾಯಿತಿ ನೀಡಿದೆ.

ಯಾವೆಲ್ಲಾ ಮನೆಗಳಿಗೆ ಈ ವಿನಾಯಿತಿ ಸಿಗುತ್ತೆ?

ಸರ್ಕಾರದ ಈ ಹೊಸ ನಿಯಮ ಎಲ್ಲಾ ದೊಡ್ಡ ದೊಡ್ಡ ಬಿಲ್ಡಿಂಗ್‌ಗಳಿಗೆ ಅನ್ವಯಿಸಲ್ಲ. ಕೇವಲ ಬಡ ಮತ್ತು ಮಧ್ಯಮ ವರ್ಗದವರ ಸಣ್ಣ ವಸತಿ ಕಟ್ಟಡಗಳಿಗೆ ಮಾತ್ರ ಇದು ಸಿಗಲಿದೆ. ಅದರ ಮಾನದಂಡಗಳು ಇಲ್ಲಿವೆ ನೋಡಿ:

ನಿವೇಶನದ ವಿಸ್ತೀರ್ಣ: ನಿಮ್ಮ ನಿವೇಶನ (Site) 1,200 ಚದರ ಅಡಿ ಅಥವಾ ಅದಕ್ಕಿಂತ ಕಡಿಮೆ ಇರಬೇಕು.

ಅಂತಸ್ತುಗಳ ಸಂಖ್ಯೆ: ನೆಲ ಮಹಡಿ ಜೊತೆಗೆ ಎರಡು ಅಂತಸ್ತು (G+2) ಅಥವಾ ಸ್ಟೀಲ್ಟ್ ಜೊತೆಗೆ ಮೂರು ಅಂತಸ್ತಿನವರೆಗಿನ (Stilt+3) ಮನೆಗಳಿಗೆ ಇದು ಅನ್ವಯ ಆಗುತ್ತೆ.

ಕಟ್ಟಡದ ವಿಧ: ಇದು ಕೇವಲ ವಸತಿ ಕಟ್ಟಡಗಳಿಗೆ (Residential Buildings) ಮಾತ್ರ ಸೀಮಿತ. ಕಮರ್ಷಿಯಲ್ ಬಿಲ್ಡಿಂಗ್‌ಗಳಿಗೆ ಈ ರೂಲ್ಸ್ ಬರಲ್ಲ.

ವಿಶೇಷತೆ: ಅಕಸ್ಮಾತ್ ನೀವು ನಕ್ಷೆ ಮಂಜೂರಾತಿ (Map Approval) ಪಡೆಯದೆ ಈ ಮಿತಿಯೊಳಗೆ ಮನೆ ಕಟ್ಟಿದ್ದರೂ ಕೂಡ, ಇನ್ಮುಂದೆ ಓಸಿಗಾಗಿ ಅಲೆಯಬೇಕಾಗಿಲ್ಲ!

ತಿದ್ದುಪಡಿ ತರಲು ಅಸಲಿ ಕಾರಣ ಏನು?

ಹಳೇ ನಿಯಮಗಳ ಪ್ರಕಾರ, ಮನೆ ಕಟ್ಟಿದ ಮೇಲೆ ಇಂಜಿನಿಯರ್‌ಗಳು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (PDO) ಸ್ಥಳ ಪರಿಶೀಲನೆ ನಡೆಸಬೇಕಿತ್ತು. ಕಟ್ಟಡವು ನಕ್ಷೆಯಂತೆಯೇ ಇದೆಯಾ ಅಂತ ಚೆಕ್ ಮಾಡಿ, ತಾಂತ್ರಿಕ ಅಭಿಪ್ರಾಯ ಪಡೆದು ಓಸಿ ಕೊಡಬೇಕಿತ್ತು. ಇದರಿಂದ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಸಿಗದೆ ಲೇಟ್ ಆಗ್ತಿತ್ತು.

ಇದನ್ನು ಮನಗಂಡ ಸರ್ಕಾರ, "ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳಿಗೆ ಎರಡನೇ ತಿದ್ದುಪಡಿ ತರಲಾಗಿದೆ" ಎಂದು ತಿಳಿಸಿದೆ. ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಂಡು, ಸರ್ಕಾರ ಈಗ ಅಧಿಕೃತ ಸುತ್ತೋಲೆ ಹೊರಡಿಸಿದೆ.

ಜನಸಾಮಾನ್ಯರಿಗೆ ಇದರಿಂದ ಏನು ಲಾಭ?

ಈ ಹೊಸ ಆದೇಶದಿಂದಾಗಿ ಹಳ್ಳಿಗಳಲ್ಲಿ ಅಥವಾ ಪಂಚಾಯತ್ ವ್ಯಾಪ್ತಿಯಲ್ಲಿ ಪುಟ್ಟ ಮನೆ ಕಟ್ಟುವವರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಸಮಯ ಉಳಿತಾಯ: ಮನೆ ಮುಗಿದ ತಕ್ಷಣ ಪಂಚಾಯತ್ ಕಚೇರಿಗಳ ಮುಂದೆ ಸಾಲಿನಲ್ಲಿ ನಿಲ್ಲುವ ಅಥವಾ ವಾರಗಟ್ಟಲೆ ಕಾಯುವ ಪ್ರಮೇಯ ಇರಲ್ಲ.

ಭ್ರಷ್ಟಾಚಾರಕ್ಕೆ ಬ್ರೇಕ್: ಓಸಿ ಪ್ರಮಾಣ ಪತ್ರ ಪಡೆಯಲು ಕಚೇರಿಗಳಲ್ಲಿ ನಡೆಯುತ್ತಿದ್ದ ಮಧ್ಯವರ್ತಿಗಳ ಕಾಟ ಮತ್ತು ಲಂಚದ ಕಿರಿಕಿರಿಗೆ ಇನ್ಮುಂದೆ ಬ್ರೇಕ್ ಬೀಳಲಿದೆ.

ನೆಮ್ಮದಿಯ ಬದುಕು: ನಿಗದಿತ ಮಿತಿಯೊಳಗೆ ನಕ್ಷೆ ಇಲ್ಲದೆ ಮನೆ ಕಟ್ಟಿದ್ರೂ ಕಾನೂನಿನ ಭಯವಿಲ್ಲದೆ ನೆಮ್ಮದಿಯಾಗಿ ಸ್ವಂತ ಮನೆಯಲ್ಲಿ ವಾಸ ಇರಬಹುದು.

ಒಟ್ಟಿನಲ್ಲಿ, ಸ್ವಂತ ಮನೆ ಕಟ್ಟುವ ಗ್ರಾಮೀಣ ಭಾಗದ ಜನರಿಗೆ ಸರ್ಕಾರ ಹೊಸ ವರ್ಷದ ಮುನ್ನವೇ ಒಂದು ದೊಡ್ಡ ತಲೆನೋವನ್ನು ದೂರ ಮಾಡಿದೆ ಅಂತಾನೇ ಹೇಳಬಹುದು! 

Latest News