ಉಡುಪಿ ಭಾಗದ ಉದ್ಯಮಿ ಸುದೀಪ್ ರೈ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅವರ ಪತ್ನಿ ಸೌಮ್ಯ ಶೆಟ್ಟಿಯನ್ನು ಬಂಧಿಸಿದ್ದಾರೆ. ಸುದೀಪ್‌ಗೆ ಮಾನಸಿಕ ಹಿಂಸೆ ನೀಡಿ, ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ ಗಂಭೀರ ಆರೋಪ ಸೌಮ್ಯ ಮೇಲಿದೆ. ಪ್ರಾಥಮಿಕ ತನಿಖೆಯಲ್ಲಿ ಸಾಕ್ಷ್ಯಗಳು ಸಿಕ್ಕ ಬೆನ್ನಲ್ಲೇ ಪೊಲೀಸರು ಈ ಕ್ರಮ ಕೈಗೊಂಡಿದ್ದು, ಸದ್ಯ ಸೌಮ್ಯಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರೀತಿ ಮದುವೆ.. ಆಮೇಲೆ ಶುರುವಾಯ್ತು ಕಿರಿಕಿರಿ!
ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಮೂಲದ ಸುದೀಪ್ ರೈ, ಫೆಬ್ರವರಿ 17ರಂದು ಕಾರ್ಕಳದ ಸೌಮ್ಯ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಸುದೀಪ್ ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿರುವ ಪತ್ನಿಯ ಮನೆಯಲ್ಲೇ ವಾಸವಿದ್ದರು. ಆದರೆ, ಸುದೀಪ್ ಅವರ ತಂದೆ ದಾಮೋದರ ಶೆಟ್ಟಿ ಹೇಳುವ ಪ್ರಕಾರ, ಮದುವೆಯಾದ ಕೆಲವೇ ದಿನಗಳಲ್ಲಿ ಸೌಮ್ಯ ತನ್ನ ಅಸಲಿ ರೂಪ ತೋರಿಸಲು ಶುರು ಮಾಡಿದ್ದಳಂತೆ.
ಮಾರ್ಚ್ 17ರಂದು ಸುದೀಪ್ ತನ್ನ ತಾಯಿಯ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ, ಸೌಮ್ಯ ಕಾರಿಗೆ ಅಡ್ಡಗಟ್ಟಿ ಸುದೀಪ್‌ಗೆ ಕೆಟ್ಟದಾಗಿ ಬೈದು ಬೆದರಿಕೆ ಹಾಕಿದ್ದಳು ಎಂಬ ಆರೋಪವಿದೆ. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ, ಅಂದರೆ ಮಾರ್ಚ್ 22ರಂದು ಸುದೀಪ್ ವಿಷ ಸೇವಿಸಿದ್ದಾರೆಂದು ಸೌಮ್ಯನೇ ಎಲ್ಲರಿಗೂ ಫೋನ್ ಮಾಡಿ ತಿಳಿಸಿದ್ದಳು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಸುದೀಪ್ ಕೊನೆಯುಸಿರೆಳೆದಿದ್ದರು.
ತಂದೆಯ ದೂರು, ಸೊಸೆಗೆ ಸಂಕಷ್ಟ
ಮಗನ ಸಾವಿನಿಂದ ಕಂಗಾಲಾದ ತಂದೆ ದಾಮೋದರ ಶೆಟ್ಟಿ, ಕೂಡಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. "ನನ್ನ ಮಗನಿಗೆ ಸೌಮ್ಯ ಮಾನಸಿಕವಾಗಿ ತುಂಬಾ ಟಾರ್ಚರ್ ಕೊಟ್ಟಿದ್ದಾಳೆ, ಅವಳ ಕಾಟ ತಡೆಯಲಾರದೆ ಮಗ ಪ್ರಾಣ ಬಿಟ್ಟಿದ್ದಾನೆ" ಎಂದು ದೂರು ನೀಡಿದ್ದರು.
ಕಾರ್ಕಳ ನಗರ ಪೊಲೀಸರು ಈ ಕೇಸನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದಾಗ ಸೌಮ್ಯ ವಿರುದ್ಧದ ಆರೋಪಗಳಿಗೆ ಪ್ರಾಥಮಿಕ ಸಾಕ್ಷಿಗಳು ಲಭ್ಯವಾಗಿವೆ. ಈ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಮಂಜಪ್ಪ ಅವರ ನೇತೃತ್ವದ ತಂಡ ಸೌಮ್ಯಳನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದೆ. ಸದ್ಯಕ್ಕೆ ಸೌಮ್ಯ ಜೈಲು ಪಾಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.