Apr 3, 2026 Languages : ಕನ್ನಡ | English

ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಅನ್ಯಾಯ - ಏಪ್ರಿಲ್ 15ಕ್ಕೆ ಕರ್ನಾಟಕದಲ್ಲಿ ರೈಲು ಓಡೋದು ಡೌಟಾ? ಇಲ್ಲಿದೆ ನೋಡಿ!!

ಕರ್ನಾಟಕದಲ್ಲಿ ಈಗ ಭಾಷೆಯ ವಿಚಾರವಾಗಿ ಮತ್ತೆ ಕಿಚ್ಚು ಹೊತ್ತಿಕೊಂಡಿದೆ. ಅದು ಬೇರೆಲ್ಲೂ ಅಲ್ಲ, ನಮ್ಮ ರೈಲ್ವೆ ಇಲಾಖೆಯಲ್ಲಿ. ರೈಲ್ವೆಯ ಮುಂಬಡ್ತಿ (Promotion) ಪರೀಕ್ಷೆಗಳಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಚಾರವಾಗಿ ಈಗ 'ಕರ್ನಾಟಕ ರಕ್ಷಣಾ ವೇದಿಕೆ' (ಕರವೇ) ನೇರವಾಗಿಯೇ ಅಖಾಡಕ್ಕಿಳಿದಿದೆ.

ರಾಜ್ಯದ ಬಿಜೆಪಿ ನಾಯಕರ ಮೌನಕ್ಕೆ ಕರವೇ ಆಕ್ರೋಶ
ರಾಜ್ಯದ ಬಿಜೆಪಿ ನಾಯಕರ ಮೌನಕ್ಕೆ ಕರವೇ ಆಕ್ರೋಶ

ಸಚಿವರ ಭೇಟಿ ಮತ್ತು ಡೆಡ್‌ಲೈನ್: ವಿಷಯವೇನಪ್ಪಾ ಅಂದರೆ, ಏಪ್ರಿಲ್ 14ರಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರ ನೇತೃತ್ವದ ಒಂದು ತಂಡ ದೆಹಲಿಗೆ ಹೋಗುತ್ತಿದೆ. ಅಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, "ನೋಡಿ ಸ್ವಾಮಿ, ನಮ್ಮ ರಾಜ್ಯದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಇರಬೇಕು" ಎಂದು ಒತ್ತಾಯಿಸಲಿದ್ದಾರೆ. ಬರೀ ಮನವಿ ಕೊಟ್ಟು ಬರುವುದಷ್ಟೇ ಅಲ್ಲ, ಅಲ್ಲಿ ಒಂದು ದಿನ ಸಾಂಕೇತಿಕ ಧರಣಿಯನ್ನೂ ಮಾಡಲಿದ್ದಾರೆ. ಅಷ್ಟಕ್ಕೂ ಈ ಹೋರಾಟಗಾರರ ಬೇಡಿಕೆ ಇಷ್ಟೇ—ಏಪ್ರಿಲ್ 15ರ ಒಳಗಾಗಿ ಸರ್ಕಾರ ಒಂದು ಸ್ಪಷ್ಟ ತೀರ್ಮಾನ ತಗೊಬೇಕು. ಇಲ್ಲದಿದ್ದರೆ ಇಡೀ ರಾಜ್ಯಾದ್ಯಂತ ರೈಲು ಸಂಚಾರವನ್ನೇ ಬಂದ್ ಮಾಡುವಂತಹ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಏನಿದು ಸಮಸ್ಯೆ? ರೈಲ್ವೆ ಇಲಾಖೆಯಲ್ಲಿ ಮುಂಬಡ್ತಿಗಾಗಿ ನಡೆಯುವ ಪರೀಕ್ಷೆಗಳಲ್ಲಿ ಈ ಮೊದಲು ಕನ್ನಡ ಇರಲಿಲ್ಲ. ಬರೀ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆಯಬೇಕಿತ್ತು. ಇದು ನಮ್ಮ ಕನ್ನಡಿಗ ಉದ್ಯೋಗಿಗಳಿಗೆ ಮಾಡಿದ ಅನ್ಯಾಯ ಅಲ್ವಾ? ಕರ್ನಾಟಕದ ನೆಲದಲ್ಲಿ ಕೆಲಸ ಮಾಡುತ್ತಾ, ಇಲ್ಲಿನ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದರೆ ಹೇಗೆ? ಈ ಮಲತಾಯಿ ಧೋರಣೆಯ ವಿರುದ್ಧ ಕರವೇ ಕಾರ್ಯಕರ್ತರು ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಿ ಪರೀಕ್ಷೆಗಳನ್ನೇ ರದ್ದು ಮಾಡಿಸಿದ್ದಾರೆ.

ನಾರಾಯಣಗೌಡ ಅವರು ಹೇಳುವ ಪ್ರಕಾರ, ಇದರ ಹಿಂದೆ ದೊಡ್ಡ 'ಹಿಂದಿ ಹೇರಿಕೆ'ಯ ಸಂಚು ಅಡಗಿದೆ. "ನಮ್ಮ ರಾಜ್ಯದಲ್ಲಿ ನಮಗೆ ನಮ್ಮ ಭಾಷೆಯಲ್ಲೇ ಪರೀಕ್ಷೆ ಬರೆಯಲು ಹಕ್ಕಿದೆ. ಕೇಂದ್ರ ಸರ್ಕಾರ ಕೂಡಲೇ ತನ್ನ ಬದ್ಧತೆ ಪ್ರದರ್ಶಿಸಬೇಕು" ಎನ್ನುವುದು ಅವರ ಖಡಕ್ ಮಾತು.

ರಾಜಕೀಯ ನಾಯಕರ ಮೌನಕ್ಕೆ ಆಕ್ರೋಶ: ಇನ್ನು ಈ ವಿಚಾರದಲ್ಲಿ ನಮ್ಮ ರಾಜ್ಯದ ರಾಜಕಾರಣಿಗಳ ಮೌನದ ಬಗ್ಗೆಯೂ ಕರವೇ ಅಸಮಾಧಾನ ವ್ಯಕ್ತಪಡಿಸಿದೆ. ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ಆಂಧ್ರ, ತೆಲಂಗಾಣ ಮತ್ತು ಓಡಿಸ್ಸಾಗಳಲ್ಲಿ ಮಾತ್ರ ಈ 'ತ್ರಿಭಾಷಾ ನೀತಿ' (ಕನ್ನಡ, ಹಿಂದಿ, ಇಂಗ್ಲಿಷ್) ಇದೆ. ಉಳಿದ ರಾಜ್ಯಗಳಲ್ಲಿ ಎರಡು ಭಾಷೆಗಳಿದ್ದರೆ ಸಾಕು. ಹಾಗಿದ್ದಮೇಲೆ ನಮ್ಮ ಮೇಲೆ ಮಾತ್ರ ಯಾಕೆ ಈ ಒತ್ತಡ? ಈ ಬಗ್ಗೆ ಇಲ್ಲಿನ ಬಿಜೆಪಿ ನಾಯಕರು ಯಾಕೆ ತುಟಿ ಬಿಚ್ಚುತ್ತಿಲ್ಲ ಎಂಬುದು ಹೋರಾಟಗಾರರ ಪ್ರಶ್ನೆ. ಕನ್ನಡದ ಪರವಾಗಿ ಧ್ವನಿ ಎತ್ತದ ಜನಪ್ರತಿನಿಧಿಗಳಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ನಾರಾಯಣಗೌಡರು ಕಿಡಿಕಾರಿದ್ದಾರೆ.

ಶಾಲಾ ಹಂತದಲ್ಲೂ ಬದಲಾವಣೆ: ಇನ್ನೊಂದು ಮುಖ್ಯ ವಿಷಯವೆಂದರೆ, ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಹಿಂದಿ ಭಾಷೆಗೆ ಅಂಕ ನೀಡುವ ಬದಲಿಗೆ ಕೇವಲ 'ಗ್ರೇಡ್' ನೀಡಲು ಮುಂದಾಗಿದೆ. ಇದನ್ನು ಕರವೇ ಸ್ವಾಗತಿಸಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸುವವರು "ಹಿಂದಿ ವಿರೋಧಿಸಿದರೆ ದೇಶದ್ರೋಹಿಗಳು" ಎಂಬಂತೆ ಮಾತಾಡುತ್ತಿರುವುದು ಸರಿಯಲ್ಲ ಎಂದು ಅವರು ಖಂಡಿಸಿದ್ದಾರೆ.

ಏಪ್ರಿಲ್ 14ರ ದೆಹಲಿ ಧರಣಿ ಮತ್ತು ಕೇಂದ್ರ ಸಚಿವರ ಜೊತೆಗಿನ ಮಾತುಕತೆ ಬಹಳ ಮುಖ್ಯವಾಗಿದೆ. ಒಂದು ವೇಳೆ ಸರ್ಕಾರ ಕನ್ನಡಿಗರ ಬೇಡಿಕೆಗೆ ಓಗೊಡದಿದ್ದರೆ, ಏಪ್ರಿಲ್ 15ರ ನಂತರ ಕರ್ನಾಟಕದ ರೈಲ್ವೆ ನಿಲ್ದಾಣಗಳು ಪ್ರತಿಭಟನೆಯ ಬಿಸಿಯನ್ನು ಎದುರಿಸಬೇಕಾಗುತ್ತದೆ. "ನಮ್ಮ ನೆಲ, ನಮ್ಮ ಭಾಷೆ" ಎನ್ನುವ ಅಭಿಮಾನ ಈಗ ದೊಡ್ಡ ಚಳವಳಿಯಾಗಿ ರೂಪಗೊಳ್ಳುತ್ತಿದೆ.