ಕಳೆದ ವರ್ಷದ (2025) ಎಸ್ಎಸ್ಎಲ್ಸಿ ಫಲಿತಾಂಶ ನೋಡಿದಾಗ ಒಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿತ್ತು. ಸುಮಾರು 85 ಸಾವಿರ ಮಕ್ಕಳು ನಮ್ಮ ಮಾತೃಭಾಷೆ ಕನ್ನಡದಲ್ಲೇ ಫೇಲ್ ಆಗಿದ್ದರು! ಈ ವರ್ಷವೂ ಸಾವಿರಾರು ಮಕ್ಕಳು ಇದೇ ಹಾದಿ ಹಿಡಿದಿರುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರಿಗೆ ತೀವ್ರ ಅಸಮಾಧಾನ ತಂದಿದೆ. ಹಾಗಾಗಿ, ಕನ್ನಡ ಕಲಿಕೆಯನ್ನು ಸುಧಾರಿಸಲು ಅವರು ಶಿಕ್ಷಣ ಸಚಿವರಿಗೆ ಒಂದು ಸವಿಸ್ತಾರವಾದ ಅಧ್ಯಯನ ವರದಿಯನ್ನು ನೀಡಿದ್ದಾರೆ.
ವರದಿಯಲ್ಲಿರುವ ಹತ್ತು ಪ್ರಮುಖ ಅಂಶಗಳು:
1. ಅಂಗನವಾಡಿಯಿಂದ ಡಿಗ್ರಿವರಗೆ ಕನ್ನಡ ಮಸ್ಟ್!
ನೀವು ಇಂಗ್ಲಿಷ್ ಮೀಡಿಯಂನಲ್ಲೇ ಓದಿ ಅಥವಾ ಬೇರೆ ಯಾವುದೇ ಮಾಧ್ಯಮದಲ್ಲಿ ಓದಿ, ಕರ್ನಾಟಕದಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಅಂಗನವಾಡಿಯಿಂದ ಪದವಿ ಮುಗಿಸುವವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಯಲೇಬೇಕು.
2. ತ್ರಿಭಾಷಾ ಸೂತ್ರಕ್ಕೆ ಗುಡ್‌ಬೈ, ದ್ವಿಭಾಷಾ ನೀತಿ ಜಾರಿ:
ಮಕ್ಕಳಿಗೆ ಮೂರು ಭಾಷೆಗಳನ್ನು ಕಲಿತು ಹೊರೆಯಾಗುತ್ತಿದೆ. ಹಾಗಾಗಿ, ಅನಗತ್ಯ ಭಾಷಾ ಕಲಿಕೆಯ ಒತ್ತಡ ತಗ್ಗಿಸಲು ಕೇವಲ ಎರಡು ಭಾಷೆಗಳ ಕಲಿಕೆಗೆ ಒತ್ತು ನೀಡಬೇಕು ಎಂದು ಪ್ರಾಧಿಕಾರ ಶಿಫಾರಸು ಮಾಡಿದೆ.
3. ಕನ್ನಡ ಓದಿದವರಿಗೆ ಉದ್ಯೋಗದಲ್ಲಿ ಬಂಪರ್ ಆಫರ್:
ಕನ್ನಡದಲ್ಲಿ ಚೆನ್ನಾಗಿ ಓದಿ ಹೆಚ್ಚು ಅಂಕ ಗಳಿಸಿದವರಿಗೆ ಸ್ಕಾಲರ್‌ಶಿಪ್ ನೀಡಬೇಕು. ಅಷ್ಟೇ ಅಲ್ಲ, ಸರ್ಕಾರಿ ಕೆಲಸಗಳಲ್ಲಿ ಕನ್ನಡ ಭಾಷೆ ಕಲಿತವರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ಪ್ರಾಧಿಕಾರದ ಪ್ಲಾನ್.
4. ಪಠ್ಯಪುಸ್ತಕ ಸರಳವಾಗಿರಲಿ:
ಈಗಿನ ಪಠ್ಯಪುಸ್ತಕಗಳು ಕೇವಲ ವಿಷಯಗಳನ್ನು ತುರುಕುವ ಸಾಧನಗಳಾಗಿವೆ. ಅದರ ಬದಲು ಸರಳವಾದ ಕಥೆ, ಕವನ, ಸಂಭಾಷಣೆ ಮತ್ತು ಚಟುವಟಿಕೆಗಳ ಮೂಲಕ ಮಕ್ಕಳಿಗೆ ಭಾಷೆಯ ಮೇಲೆ ಒಲವು ಮೂಡುವಂತೆ ಮಾಡಬೇಕು.
5. ಪ್ರತಿದಿನ ಅರ್ಧ ಗಂಟೆ ಕನ್ನಡ ಓದು ಕಡ್ಡಾಯ:
ಶಾಲೆಗಳಲ್ಲಿ ಕೇವಲ ಪಾಠ ಮಾಡಿದರೆ ಸಾಲದು, ಪ್ರತಿದಿನ ಕನಿಷ್ಠ ಅರ್ಧ ಗಂಟೆ ಬಿಡುವು ನೀಡಿ ಮಕ್ಕಳಿಂದ ಕನ್ನಡ ಪುಸ್ತಕಗಳನ್ನು ಓದಿಸಬೇಕು. ಇದರಿಂದ ಅವರ ಭಾಷಾ ಕೌಶಲ ಇಂಪ್ರೂವ್ ಆಗುತ್ತದೆ.
6. ಕೃಪಾಂಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆ:
ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸಲು ನಿಗದಿತ ಅಂಕಗಳನ್ನು ಮೀಸಲಿಡಬೇಕು ಮತ್ತು ಅವಶ್ಯಕತೆ ಬಿದ್ದಾಗ ಕೃಪಾಂಕ (Grace Marks) ನೀಡಬೇಕು. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಕನ್ನಡ ಪೇಪರ್ ಕಡ್ಡಾಯಗೊಳಿಸಬೇಕು.
7. 8ನೇ ತರಗತಿಯಿಂದಲೇ ತಯಾರಿ:
ಹತ್ತನೇ ತರಗತಿಯಲ್ಲಿ ಫೇಲ್ ಆಗುವುದನ್ನು ತಪ್ಪಿಸಲು ಎಂಟನೇ ತರಗತಿಯಿಂದಲೇ ವಿದ್ಯಾರ್ಥಿಗಳು ಕನ್ನಡದಲ್ಲಿ ಪ್ರಾವಿಣ್ಯತೆ ಪಡೆಯುವಂತೆ ವಿಶೇಷ ಗಮನ ಹರಿಸಬೇಕು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಈ ವರದಿ ಜಾರಿಯಾದರೆ, ಮುಂದಿನ ದಿನಗಳಲ್ಲಿ ಮಕ್ಕಳು ಕನ್ನಡ ಭಾಷೆಯನ್ನು ಒಂದು 'ವಿಷಯ'ವಾಗಿ ನೋಡದೆ, ಪ್ರೀತಿಯಿಂದ ಕಲಿಯುವ ವಾತಾವರಣ ನಿರ್ಮಾಣವಾಗಲಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು ಮತ್ತು ನಮ್ಮ ಮಕ್ಕಳು ಹೆಮ್ಮೆಯಿಂದ ಕನ್ನಡ ಓದಿ ಪಾಸ್ ಆಗಬೇಕು ಎನ್ನುವುದೇ ಈ ವರದಿಯ ಆಶಯ.