Dec 13, 2025 Languages : ಕನ್ನಡ | English

ಹನುಮ ಮಾಲಾ ಧೀಕ್ಷಾ ವೇದಿಕೆಯಲ್ಲಿ ಕನೇರಿ ಶ್ರೀ ವಿವಾದದ ಹೇಳಿಕೆ ಕೊಟ್ರಾ? ಇಲ್ಲಿದೆ ಉತ್ತರ

ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ನಡೆದ ಹನುಮ ಮಾಲಾ ಧೀಕ್ಷಾ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಕೇಳಿ ಬಂದಿದೆ. ಬಸವ ತತ್ವದ ಅನುಯಾಯಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, “ಬಸವ ತತ್ವದ ತಾಲಿಬಾನ್‌ಗಳು” ಎಂಬ ಪದ ಬಳಸಿ ಚರ್ಚೆಗೆ ಕಾರಣರಾಗಿದ್ದಾರೆ. ಸ್ವಾಮೀಜಿ ತಮ್ಮ ಭಾಷಣದಲ್ಲಿ, “ಅಂತವರಿಗೆ ತಿಳಿಯುವ ಭಾಷೆಯಲ್ಲೇ ನಾವು ಹೇಳಬೇಕು, ಹಿಂದೆ ನಾನು ಹೇಳಿದ್ದೆ ಹಾಗೆ. ರಾತ್ರಿ ಟೀ ಶರ್ಟ್, ಬರ್ಮೋಡ ಹಾಕೋದು, ರಾತ್ರಿ ಹೋಟೆಲ್, ಬಾರ್‌ಗೆ ಹೋಗೋದು – ಅಂತವರಿಗೆ ಮಠ ಏಕೆ? ಮಠಗಳನ್ನು ಏಕೆ ಹಾಳು ಮಾಡ್ತಾ ಇದ್ದೀರಿ?” ಎಂದು ಪ್ರಶ್ನೆ ಎತ್ತಿದರು ಎಂದು ಕೇಳಿ ಬಂದಿದೆ. ಈ ಹೇಳಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಲ್ಲಿ ಕುತೂಹಲ ಮೂಡಿಸಿತು.

ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ
ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

ಹನುಮ ಮಾಲೆ ಬಗ್ಗೆ ಬಹಳಷ್ಟು ಜನ ಟೀಕೆ ಮಾಡಬಹುದು ಎಂದು ಹೇಳಿದ ಸ್ವಾಮೀಜಿ, “ನಮ್ಮಂತೆ ಕಾವಿ ಧರಿಸಿದ ಬಸವ ತತ್ವದ ತಾಲಿಬಾನ್‌ಗಳು” ಎಂದು ಮತ್ತೊಮ್ಮೆ ವಿವಾದಾತ್ಮಕ ಪದ ಬಳಕೆ ಮಾಡಿದರು ಎನ್ನಲಾಗಿದೆ. ಇದರಿಂದ ಬಸವ ತತ್ವದ ಅನುಯಾಯಿಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈ ಕಾರ್ಯಕ್ರಮವನ್ನು ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ರಾಯಬಾಗ ತಾಲೂಕ ಘಟಕ ಆಯೋಜಿಸಿತ್ತು. ಸ್ವಾಮೀಜಿಯ ಹೇಳಿಕೆ ಕಾರ್ಯಕ್ರಮದ ಪ್ರಮುಖ ಅಂಶವಾಗಿ ಪರಿಣಮಿಸಿದ್ದು, ಸ್ಥಳೀಯ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. 

ಹಿಂದೆ ಮಹಾರಾಷ್ಟ್ರದ ಒಂದು ಕಾರ್ಯಕ್ರಮದಲ್ಲಿ ವಿವಾದಾತ್ಮಕ ಭಾಷಣ ಮಾಡಿದ ಕಾರಣದಿಂದ ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸ್ವಾಮೀಜಿಗೆ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಆ ನಿರ್ಬಂಧದ ಬೆನ್ನಲ್ಲೇ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿರುವುದು ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ ಎಂದೆನ್ನಬಹುದು.

Latest News