ಅಮೆರಿಕ, ಆಸ್ಟ್ರೇಲಿಯಾದಲ್ಲಿ ಇನ್ಮುಂದೆ ಕಲಬುರಗಿ ರೊಟ್ಟಿ ಘಮ - ವಿದೇಶಕ್ಕೆ ಹಾರಲಿವೆ ಸಾವಿರಾರು ಜೋಳದ ರೊಟ್ಟಿಗಳು!!

ಕಲಬುರಗಿ: ಉತ್ತರ ಕರ್ನಾಟಕದ ಊಟ ಅಂದಾಕ್ಷಣ ನೆನಪಾಗೋದೇ ಕಡಕ್ ಜೋಳದ ರೊಟ್ಟಿ ಮತ್ತು ಎಣ್ಣೆಗಾಯಿ ಪಲ್ಯ. ಈ ರುಚಿಗೆ ಮರುಳಾಗದವರಿಲ್ಲ. ಈಗ ಈ ರುಚಿ ಕೇವಲ ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಕಲಬುರಗಿಯ ಹೆಣ್ಣುಮಕ್ಕಳು ತಯಾರಿಸಿದ ರೊಟ್ಟಿಗಳು ಈಗ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾದ ಕನ್ನಡಿಗರ ಮನೆ ತಲುಪಲಿವೆ. ಈ ಮೂಲಕ ನಮ್ಮ ಮಣ್ಣಿನ ಸೊಗಡು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ಆಗಿ ಬದಲಾಗಿದೆ.

ಸಾತ ಸಮುದ್ರದಾಚೆಗೂ ತಲುಪಿತು ನಮ್ಮ ಮಣ್ಣಿನ ರುಚಿ | Photo Credit: https://x.com/PriyankKharge
ಸಾತ ಸಮುದ್ರದಾಚೆಗೂ ತಲುಪಿತು ನಮ್ಮ ಮಣ್ಣಿನ ರುಚಿ | Photo Credit: https://x.com/PriyankKharge

ಪ್ರತಿ ತಿಂಗಳು ಸಾವಿರಾರು ರೊಟ್ಟಿಗಳ ರಫ್ತು!

ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘಗಳು ಸಿದ್ಧಪಡಿಸಿದ ರೊಟ್ಟಿಗಳ ಮೊದಲ ರಫ್ತು ಘಟಕಕ್ಕೆ ಇತ್ತೀಚೆಗಷ್ಟೇ ಅಧಿಕೃತ ಚಾಲನೆ ನೀಡಲಾಗಿದೆ. ಈ ಯೋಜನೆಯ ಪ್ರಕಾರ:

ಅಮೆರಿಕ: ಪ್ರತಿ ತಿಂಗಳು 10,000 ರೊಟ್ಟಿಗಳ ರಫ್ತು.

ಆಸ್ಟ್ರೇಲಿಯಾ: ಪ್ರತಿ ತಿಂಗಳು 10,000 ರೊಟ್ಟಿಗಳ ರಫ್ತು.

ಕೆನಡಾ: ಪ್ರತಿ ತಿಂಗಳು 5,000 ರೊಟ್ಟಿಗಳ ರಫ್ತು.

ಹೀಗೆ ಪ್ರತಿ ತಿಂಗಳು ಸಾವಿರಾರು ರೊಟ್ಟಿಗಳು ವಿದೇಶಕ್ಕೆ ಹಾರಲಿವೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಿಲ್ಲೆಯ ಮಹಿಳೆಯರ ಸಾಧನೆಯನ್ನು ಶ್ಲಾಘಿಸಿದ್ದಾರೆ.

1,000 ಮಹಿಳೆಯರ ಶ್ರಮದ ಫಲ

ಈ ಸಾಧನೆಯ ಹಿಂದೆ ಯಾರೋ ಒಬ್ಬರಲ್ಲ, ಬದಲಾಗಿ ಜಿಲ್ಲೆಯ 100ಕ್ಕೂ ಹೆಚ್ಚು ಸ್ಥಳೀಯ ಸ್ವಸಹಾಯ ಸಂಘಗಳ (SHG) ಸುಮಾರು 1,000 ಮಹಿಳೆಯರ ಕಠಿಣ ಶ್ರಮವಿದೆ. ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಕಳೆದ ಎರಡು ವರ್ಷಗಳಿಂದ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಸುಮಾರು 150ಕ್ಕೂ ಹೆಚ್ಚು ರೊಟ್ಟಿ ಮಾಡುವ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ಮಹಿಳೆಯರಿಗೆ ವಿತರಿಸಲಾಗಿದ್ದು, ಇದು ಕೆಲಸದ ವೇಗವನ್ನು ಹೆಚ್ಚಿಸಿದೆ.

ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್‌ಗೆ ಒತ್ತು

ಕೇವಲ ರೊಟ್ಟಿ ಮಾಡುವುದು ಮಾತ್ರವಲ್ಲ, ಅದನ್ನು ವಿದೇಶಕ್ಕೆ ಕಳುಹಿಸಲು ಬೇಕಾದ ಪ್ಯಾಕೇಜಿಂಗ್, ಲೇಬಲಿಂಗ್ ಮತ್ತು ಬ್ರ್ಯಾಂಡಿಂಗ್‌ಗೆ ವಿಶೇಷ ಒತ್ತು ನೀಡಲಾಗಿದೆ. ಇದರಿಂದ ರೊಟ್ಟಿಗಳು ಕೆಡದಂತೆ ಬಹಳ ದಿನಗಳ ಕಾಲ ತಾಜಾವಾಗಿರುತ್ತವೆ. ಈಗ ಕಲಬುರಗಿ ರೊಟ್ಟಿಯು ಕೇವಲ ಲೋಕಲ್ ಮಾರ್ಕೆಟ್‌ನಲ್ಲಿ ಮಾತ್ರವಲ್ಲದೆ ಸ್ವಿಗ್ಗಿ, ಜೊಮ್ಯಾಟೊ ಮತ್ತು ಅಮೆಜಾನ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲೂ ಲಭ್ಯವಿದೆ. ಇದು ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ದೊಡ್ಡ ಶಕ್ತಿಯಾಗಿ ಮೂಡಿಬಂದಿದೆ.

ಕನ್ನಡಿಗರಿಗೆ ಹಬ್ಬದೂಟ

ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಊರಿನ ಊಟವನ್ನು ನೆನೆದು ಮರುಗುತ್ತಿರುತ್ತಾರೆ. ಅದರಲ್ಲೂ ಉತ್ತರ ಕರ್ನಾಟಕದ ರೊಟ್ಟಿ ಸಿಗುವುದು ಅಲ್ಲಿ ಬಹಳ ಅಪರೂಪ. ಈಗ ಈ ಯೋಜನೆಯಿಂದಾಗಿ ವಿದೇಶದಲ್ಲಿರುವ ಕನ್ನಡಿಗರು ತಮ್ಮ ಮನೆಯಲ್ಲೇ ಕುಳಿತು ಕಲಬುರಗಿ ರೊಟ್ಟಿಯ ಸವಿಯನ್ನು ಸವಿಯಬಹುದಾಗಿದೆ.