ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಫಾಲೋವರ್ಸ್, ಲೈಕುಗಳ ಸುರಿಮಳೆ, ಗ್ಲಾಮರಸ್ ಫೋಟೋ ಶೂಟ್.. ಇದನ್ನೆಲ್ಲಾ ನೋಡಿ ನಾವು ಇವರೇ ನಮ್ಮ ಬ್ರ್ಯಾಂಡ್‌ಗೆ ರಾಯಭಾರಿ ಅಂದುಕೊಳ್ಳುತ್ತೇವೆ. ಆದರೆ ಇಲ್ಲೊಬ್ಬ ಸೋಶಿಯಲ್ ಮೀಡಿಯಾ ಸ್ಟಾರ್ ಮಾಡಿರೋ ಕೆಲಸ ಈಗ ಜಯನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪ್ರಮೋಷನ್ ಮಾಡಿಕೊಡ್ತೀನಿ ಅಂತ ಬಂದವಳು, ಉದ್ಯಮಿಯನ್ನೇ ಬಲೆಗೆ ಬೀಳಿಸಿ ಕೋಟಿ ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿರೋ ಶಾಕಿಂಗ್ ಸ್ಟೋರಿ ಇದು.
ಪರಿಚಯವಾಗಿದ್ದು ಹೇಗೆ?
ಬೆಂಗಳೂರಿನ ಜಯನಗರದಲ್ಲಿ 'HK ಪರ್ಮನೆಂಟ್ ಮೇಕ್ ಅಪ್ ಕ್ಲಿನಿಕ್' ನಡೆಸುತ್ತಿರುವ ಕಾರ್ತಿಕ್ ಎಂಬುವವರಿಗೆ ಈ ಕಹಿ ಅನುಭವವಾಗಿದೆ. ತಮ್ಮ ಕ್ಲಿನಿಕ್ ಪ್ರಚಾರಕ್ಕಾಗಿ ಸಾಧನಾ ಶೆಟ್ಟಿ ಎಂಬ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನ್ನು ಕಾರ್ತಿಕ್ ಸಂಪರ್ಕಿಸಿದ್ದರು. ಇಬ್ಬರ ನಡುವೆ ಶುರುವಾದ ವೃತ್ತಿಪರ ಸಂಬಂಧ ಮೆಲ್ಲಗೆ ಸ್ನೇಹಕ್ಕೆ ತಿರುಗಿತ್ತು. ಇದೇ ಸ್ನೇಹದ ಲಾಭ ಪಡೆದ ಸಾಧನಾ, ಉದ್ಯಮಿ ಕಾರ್ತಿಕ್ ಜೊತೆ ಆಪ್ತವಾಗತೊಡಗಿದ್ದರು.
ಡೇಟಿಂಗ್, ವಿಡಿಯೋ ಮತ್ತು ಅಸಲಿ ಆಟ!
ಸ್ನೇಹ ಬೆಳೆದಂತೆ ಇಬ್ಬರೂ ಆಗಾಗ ಡೇಟಿಂಗ್ ಹೋಗುತ್ತಿದ್ದರು ಎನ್ನಲಾಗಿದೆ. ಆದರೆ ಇದೇ ಸಮಯವನ್ನೇ ಬಂಡವಾಳ ಮಾಡಿಕೊಂಡ ಸಾಧನಾ ಶೆಟ್ಟಿ, ಕಾರ್ತಿಕ್ ಅವರ ಕೆಲವು ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಯಾವಾಗ ಕೈಯಲ್ಲಿ ಆಯುಧ (ವಿಡಿಯೋ) ಸಿಕ್ಕಿತೋ, ಅಲ್ಲಿಂದ ಸಾಧನಾಳ ಅಸಲಿ ಆಟ ಶುರುವಾಗಿದೆ. ಕಾರ್ತಿಕ್ ಅವರನ್ನು ಬ್ಲಾಕ್‌ಮೇಲ್ ಮಾಡಲು ಶುರು ಮಾಡಿದ ಈಕೆ, ಲಕ್ಷ ಲಕ್ಷ ಹಣ ಪೀಕಲು ಪ್ಲಾನ್ ಮಾಡಿದ್ದಾಳೆ.
ಪೀಕಿದ್ದು ಎಷ್ಟು? ಬೇಡಿಕೆ ಇಟ್ಟಿದ್ದು ಎಷ್ಟು?
ಕಾರ್ತಿಕ್ ಅವರು ಆರಂಭದಲ್ಲಿ ಮರ್ಯಾದೆಗೆ ಅಂಜಿ ಸಾಧನಾ ಕೇಳಿದನ್ನೆಲ್ಲಾ ಕೊಟ್ಟಿದ್ದಾರೆ. ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ:
ನಗದು: 5 ಲಕ್ಷ ರೂಪಾಯಿ ಆನ್‌ಲೈನ್ ಮೂಲಕ ಹಾಗೂ 5 ಲಕ್ಷ ರೂಪಾಯಿ ನಗದಾಗಿ ನೀಡಿದ್ದಾರೆ.
ಚಿನ್ನಾಭರಣ: 30 ಸಾವಿರ ಮೌಲ್ಯದ ಚಿನ್ನದ ಉಂಗುರ ಹಾಗೂ 70 ಸಾವಿರ ರೂಪಾಯಿಯ ಗೋಲ್ಡ್ ಚೈನ್.
ಗ್ಯಾಜೆಟ್ಸ್: ಬರೋಬ್ಬರಿ 1.5 ಲಕ್ಷ ರೂಪಾಯಿ ಬೆಲೆಯ ಐಫೋನ್ (iPhone).
ಇಷ್ಟೆಲ್ಲಾ ಕೊಟ್ಟರೂ ಸಾಧನಾಳ ಆಸೆ ಮಾತ್ರ ತೀರಿರಲಿಲ್ಲ. ಇವೆಲ್ಲದರ ಜೊತೆಗೆ ಬರೋಬ್ಬರಿ 1.5 ಕೋಟಿ ರೂಪಾಯಿ ನೀಡುವಂತೆ ಕಾರ್ತಿಕ್‌ಗೆ ಬೆದರಿಕೆ ಹಾಕಿದ್ದಾಳೆ. ಹಣ ಕೊಡದಿದ್ದರೆ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾಳೆ.
ಸಂಸಾರದಲ್ಲಿ ಬಿರುಗಾಳಿ!
ಯಾವಾಗ ಕಾರ್ತಿಕ್ ಅಷ್ಟು ದೊಡ್ಡ ಮೊತ್ತ ಕೊಡಲು ನಿರಾಕರಿಸಿದರೋ, ಸಾಧನಾ ತನ್ನ ವರಸೆಯನ್ನೇ ಬದಲಿಸಿದ್ದಾಳೆ. ನೇರವಾಗಿ ಕಾರ್ತಿಕ್ ಪತ್ನಿಗೆ ವಾಟ್ಸಾಪ್ ಮಾಡಿ ಕೆಲವು ಫೋಟೋ/ವಿಡಿಯೋಗಳನ್ನು ಕಳುಹಿಸಿದ್ದಾಳೆ. ಇದರಿಂದ ಕಾರ್ತಿಕ್ ಅವರ ಸಂಸಾರದಲ್ಲಿ ದೊಡ್ಡ ಬಿರುಗಾಳಿಯೇ ಎದ್ದಿದೆ. ಮನೆಯಲ್ಲಿ ಜಗಳವಾಗಿ ನೆಮ್ಮದಿ ಕೆಟ್ಟಾಗ, ಕಾರ್ತಿಕ್ ಬೇರೆ ದಾರಿಯಿಲ್ಲದೆ ಜಯನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಕಾರ್ತಿಕ್ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾಧನಾ ಶೆಟ್ಟಿಗೆ ನೋಟಿಸ್ ನೀಡಿದ್ದಾರೆ. ಈಗಾಗಲೇ ಪ್ರಾಥಮಿಕ ವಿಚಾರಣೆಯೂ ನಡೆದಿದೆ. ಆದರೆ ವಿಚಾರಣೆ ವೇಳೆ ಸಾಧನಾ ಶೆಟ್ಟಿ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾಳೆ ಎನ್ನಲಾಗಿದೆ. "ನಾನು ಯಾವುದೇ ತಪ್ಪು ಮಾಡಿಲ್ಲ" ಎಂಬುದು ಆಕೆಯ ವಾದ. ಆದರೆ ಪೊಲೀಸರು ಮಾತ್ರ ಬಿಟ್ಟಿಲ್ಲ, ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕಾಣುವ ಮಿರಿಮಿರಿ ಮಿಂಚುವ ಬಣ್ಣದ ಲೋಕದ ಹಿಂದೆ ಇಂತಹ ಕರಾಳ ಮುಖಗಳೂ ಇರುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಬಿಸಿನೆಸ್ ಪ್ರಮೋಷನ್ ಹೆಸರಲ್ಲಿ ಬರುವವರೆಲ್ಲಾ ಪ್ರಾಮಾಣಿಕರಾಗಿ ಇರುವುದಿಲ್ಲ ಅನ್ನೋದಕ್ಕೆ ಕಾರ್ತಿಕ್ ಅವರದ್ದೇ ಉದಾಹರಣೆ.
ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದು, ಸತ್ಯಾಸತ್ಯತೆ ಹೊರಬರಬೇಕಿದೆ. ಒಂದು ವೇಳೆ ಆರೋಪ ಸಾಬೀತಾದರೆ ಸಾಧನಾ ಶೆಟ್ಟಿ ಪಾಲಿಗೆ ಈ 'ಸ್ಟಾರ್' ಗಿರಿ ಜೈಲು ಪಾಲಾಗುವುದರಲ್ಲಿ ಸಂಶಯವಿಲ್ಲ.