ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತಾ? ಸಿದ್ದರಾಮಯ್ಯ ಅವರ ಜಾಗಕ್ಕೆ ಡಿ.ಕೆ. ಶಿವಕುಮಾರ್ ಬರ್ತಾರಾ? ಈ ಪ್ರಶ್ನೆಗಳಿಗೆ ರಾಮನಗರದ ಕೇತುಹಳ್ಳಿ ಗ್ರಾಮದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರು ನೀಡಿರುವ ಉತ್ತರ ಈಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. "ಮೇ 15ಕ್ಕೆ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವುದು ಪಕ್ಕಾ" ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಇದೇ ಅಂತಿಮ ದಿನಾಂಕ
ಶಾಸಕ ಇಕ್ಬಾಲ್ ಹುಸೇನ್ ಅವರ ಈ ಹೇಳಿಕೆ ಯಾಕೆ ಇಷ್ಟೊಂದು ಚರ್ಚೆಯಾಗುತ್ತಿದೆ ಎಂದರೆ, ಅವರು ಇದೇ ಮೊದಲ ಬಾರಿಗೆ ಇಷ್ಟು ಖಡಕ್ ಆಗಿ ದಿನಾಂಕವನ್ನು ಘೋಷಿಸಿದ್ದಾರೆ. "ಹಿಂದೆ ನಾನು ಎರಡು ಮೂರು ದಿನಾಂಕಗಳನ್ನು ಹೇಳಿದ್ದೆ ನಿಜ. ಆದರೆ, ಈ ಬಾರಿ ನಾನು ಹೇಳುತ್ತಿರುವ ಮೇ 15 ಎಂಬ ದಿನಾಂಕವೇ ಅಂತಿಮ. ಈ ಅವಧಿಯಲ್ಲೇ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿಯೇ ಆಗುತ್ತಾರೆ," ಎಂದು ವಿಶ್ವಾಸದಿಂದ ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಸಿಗಬೇಕು ಎಂಬುದು ಕೇವಲ ನನ್ನ ಆಸೆ ಮಾತ್ರವಲ್ಲ, ರಾಜ್ಯದ ಅನೇಕ ಶಾಸಕರ ಬಯಕೆಯೂ ಹೌದು ಎಂದು ಅವರು ಒತ್ತಿ ಹೇಳಿದ್ದಾರೆ.
ಜನ್ಮದಿನದ ವಿಶೇಷ ಉಡುಗೊರೆ?
ವಿಶೇಷವೆಂದರೆ, ಮೇ 15 ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬ. ಈ ದಿನದಂದೇ ಅವರಿಗೆ ಹೈಕಮಾಂಡ್‌ನಿಂದ 'ಸಿಎಂ ಪಟ್ಟ' ಎಂಬ ಬರ್ತ್ ಡೇ ಗಿಫ್ಟ್ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಶಾಸಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. "ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿದೆ. ಡಿಕೆಶಿ ನೇತೃತ್ವದಲ್ಲಿ ರಾಜ್ಯದ ಪ್ರಗತಿ ನೋಡಬೇಕು ಎಂಬುದು ನಮ್ಮೆಲ್ಲರ ಆಸೆ. ಅವರ ಬರ್ತ್ ಡೇ ದಿನವೇ ಅವರಿಗೆ ಅಧಿಕಾರ ಸಿಗುವ ಎಲ್ಲ ಲಕ್ಷಣಗಳೂ ಇವೆ," ಎಂದಿದ್ದಾರೆ.
ಸಚಿವರ ದೆಹಲಿ ಭೇಟಿಗೆ ಇಕ್ಬಾಲ್ ವ್ಯಾಖ್ಯಾನ
ಇದೇ ವೇಳೆ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಎಚ್.ಸಿ. ಮಹಾದೇವಪ್ಪ ಅವರು ದೆಹಲಿಯಲ್ಲಿ ಹೈಕಮಾಂಡ್ ಭೇಟಿಯಾಗಿರುವ ಬಗ್ಗೆಯೂ ಇಕ್ಬಾಲ್ ಹುಸೇನ್ ಮಾತನಾಡಿದ್ದಾರೆ.
"ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಹೈಕಮಾಂಡ್ ಭೇಟಿಯಾಗುವುದರಲ್ಲಿ ತಪ್ಪೇನಿದೆ?
ರಾಜ್ಯದ ಬಗ್ಗೆ ಕಾಳಜಿ ಇಟ್ಟು, ಯಾವುದೋ ವಿಷಯ ಚರ್ಚಿಸಲು ಹೋಗಿರಬಹುದು.
ತಮ್ಮ ಕಷ್ಟ-ಸುಖ ಹಂಚಿಕೊಳ್ಳಲು ಹೋಗಿರುತ್ತಾರೆ, ಇದರಲ್ಲಿ ಬೇರೆ ಅರ್ಥ ಕಲ್ಪಿಸುವುದು ಬೇಡ," ಎಂದು ಸಮರ್ಥಿಸಿಕೊಂಡಿದ್ದಾರೆ.
ರಾಜಕೀಯ ಲೆಕ್ಕಾಚಾರವೇನು?
ಇಕ್ಬಾಲ್ ಹುಸೇನ್ ಅವರು ಡಿ.ಕೆ. ಶಿವಕುಮಾರ್ ಅವರ ಪರಮಾಪ್ತ ಶಾಸಕರಲ್ಲಿ ಒಬ್ಬರು. ಇವರು ಇಷ್ಟು ಬಹಿರಂಗವಾಗಿ ದಿನಾಂಕ ಪ್ರಕಟಿಸಿರುವುದು ನೋಡಿದರೆ, ದೆಹಲಿ ಮಟ್ಟದಲ್ಲಿ ಏನೋ ದೊಡ್ಡ ಬೆಳವಣಿಗೆಗಳು ನಡೆಯುತ್ತಿವೆ ಎಂಬ ಅನುಮಾನ ಶುರುವಾಗಿದೆ. ಸಿದ್ದರಾಮಯ್ಯ ಅವರ ಬೆಂಬಲಿಗರು ಒಂದು ಕಡೆ 'ಐದು ವರ್ಷ ಅವರೇ ಸಿಎಂ' ಎನ್ನುತ್ತಿದ್ದರೆ, ಇನ್ನೊಂದೆಡೆ ಡಿಕೆಶಿ ಬಣ ಮಾತ್ರ ಮೇ ತಿಂಗಳ 'ಡೆಡ್ ಲೈನ್' ನೀಡುತ್ತಿದೆ.