Mar 26, 2026 Languages : ಕನ್ನಡ | English

ಪೆಟ್ರೋಲ್ ಬೆಲೆ 149 ರೂಪಾಯಿ - ಇಂದೋರ್‌ನಲ್ಲಿ ವೈರಲ್ ಆದ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ!!

ಈ ಸೋಶಿಯಲ್ ಮೀಡಿಯಾ ಅನ್ನೋದು ಎಷ್ಟು ಫಾಸ್ಟ್ ಅಂದ್ರೆ, ಒಂದು ಸಣ್ಣ ವಿಡಿಯೋ ಸಿಕ್ಕರೆ ಸಾಕು, ಅದು ನಿಜವೋ ಸುಳ್ಳೋ ಅಂತ ಚೆಕ್ ಮಾಡೋ ಮೊದಲೇ ಜನರಲ್ಲಿ ಆತಂಕ ಹುಟ್ಟಿಸಿಬಿಡುತ್ತೆ. ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಪೆಟ್ರೋಲ್ ಬೆಲೆ ದಿಢೀರನೆ 149 ರೂಪಾಯಿಗೆ ಏರಿಬಿಟ್ಟಿದೆ ಅನ್ನೋ ಸುದ್ದಿ ಇಡೀ ನಗರದಲ್ಲಿ ಸಂಚಲನ ಮೂಡಿಸಿತ್ತು!

ಒಂದು ವಿಡಿಯೋ ಸೃಷ್ಟಿಸಿದ ರಂಪಾಟ
ಒಂದು ವಿಡಿಯೋ ಸೃಷ್ಟಿಸಿದ ರಂಪಾಟ

ಇಂದೋರ್‌ನ ಲೋಹಾ ಮಂಡಿ ಅನ್ನೋ ಏರಿಯಾದ ಪೆಟ್ರೋಲ್ ಬಂಕ್‌ ಒಂದರ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಪೆಟ್ರೋಲ್ ಮೆಷಿನ್ ಮೇಲೆ ಬೆಲೆ ಲೀಟರ್‌ಗೆ 149 ರೂಪಾಯಿ ಅಂತ ಕಾಣಿಸ್ತಿತ್ತು. ಅಷ್ಟೇ, ಇದನ್ನ ನೋಡಿದ ಜನರೆಲ್ಲಾ "ಅಯ್ಯೋ, ಪೆಟ್ರೋಲ್ ಬೆಲೆ ಇಷ್ಟೊಂದು ಜಾಸ್ತಿ ಆಗೋಯ್ತಾ?" ಅಂತ ಗಾಬರಿ ಬಿದ್ದು, ಕೂಡಲೇ ಗಾಡಿ ತಗೊಂಡು ಬಂಕ್‌ಗಳತ್ತ ಓಡಿದ್ದಾರೆ. ಬಂಕ್‌ಗಳ ಮುಂದೆ ಸಕತ್ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಬಗ್ಗೆ ತನಿಖೆ ನಡೆಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ. ಆ ಪೆಟ್ರೋಲ್ ಬಂಕ್‌ನ ಮ್ಯಾನೇಜರ್ ಸಾಗರ್ ಬೈರಾಗಿ ಅನ್ನೋರು ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. "ನೋಡಿ ಸ್ವಾಮಿ, ಆ ವಿಡಿಯೋ ನಮ್ಮ ಬಂಕ್‌ನದ್ದೇ ಅನ್ನೋದು ನಿಜ. ಆದರೆ ಬೆಲೆ ಏರಿಕೆ ಆಗಿದೆ ಅನ್ನೋದು ಮಾತ್ರ ಸುಳ್ಳು. ವಿಡಿಯೋ ಮಾಡಿದವರು ಪೂರ್ತಿ ವಿಷಯ ಹೇಳದೆ ಜನರಲ್ಲಿ ಗೊಂದಲ ಮೂಡಿಸಿದ್ದಾರೆ" ಅಂತ ಹೇಳಿದ್ದಾರೆ.

ಮ್ಯಾನೇಜರ್ ಕೊಟ್ಟ ಮಾಹಿತಿ ಪ್ರಕಾರ, ಆ ಸಮಯದಲ್ಲಿ ಬಂಕ್‌ನಲ್ಲಿ ನಾವು ದಿನಾ ಹಾಕಿಸುವ ಸಾಮಾನ್ಯ ಪೆಟ್ರೋಲ್ ಮತ್ತು 'XP 95' ಪೆಟ್ರೋಲ್ ಸ್ಟಾಕ್ ಖಾಲಿಯಾಗಿತ್ತು. ಆಗ ಅಲ್ಲಿ ಕೇವಲ 'XP 100' ಅನ್ನೋ ಹೈ-ಕ್ವಾಲಿಟಿ ಪ್ರೀಮಿಯಂ ಪೆಟ್ರೋಲ್ ಮಾತ್ರ ಇತ್ತು. ಈ ಪೆಟ್ರೋಲ್ ಬೆಲೆ ಮೊದಲಿನಿಂದಲೂ 149 ರೂಪಾಯಿ ಇದೆ! ಇದು ಸಾಮಾನ್ಯ ಪೆಟ್ರೋಲ್‌ಗಿಂತ ಭಿನ್ನ.

ನಮ್ಮ ನಾರ್ಮಲ್ ಬೈಕ್ ಅಥವಾ ಕಾರುಗಳಿಗೆ ನಾವು ಹಾಕಿಸೋ ಪೆಟ್ರೋಲ್ ಇದಲ್ಲ. ಇದು ಸ್ಪೆಷಲ್ ಆಗಿ ಹೈ-ಪರ್ಫಾರ್ಮೆನ್ಸ್ ಸ್ಪೋರ್ಟ್ಸ್ ಬೈಕ್‌ಗಳು ಮತ್ತು ಲಕ್ಸುರಿ ಕಾರುಗಳಿಗಾಗಿ ಇರೋದು. ಇದರ ದಕ್ಷತೆ ಜಾಸ್ತಿ ಇರೋದ್ರಿಂದ ರೇಟ್ ಕೂಡ ಜಾಸ್ತಿನೇ ಇರುತ್ತೆ. ಯಾರೋ ಪುಣ್ಯಾತ್ಮರು ಈ ಪ್ರೀಮಿಯಂ ಪೆಟ್ರೋಲ್ ಬೆಲೆಯನ್ನ ವಿಡಿಯೋ ಮಾಡಿ, ಸಾಮಾನ್ಯ ಪೆಟ್ರೋಲ್ ಬೆಲೆ ಅಂತ ಹರಿಬಿಟ್ಟಿದ್ದರಿಂದ ಇಷ್ಟೆಲ್ಲಾ ರಂಪಾಟ ನಡೆದಿದೆ.

ವಾಟ್ಸಾಪ್ ಅಥವಾ ಫೇಸ್‌ಬುಕ್‌ನಲ್ಲಿ ಬರೋ ಎಲ್ಲಾ ಸುದ್ದಿಗಳನ್ನ ಕುರುಡಾಗಿ ನಂಬಬೇಡಿ. ಯಾವುದನ್ನೇ ಆದರೂ ಫಾರ್ವರ್ಡ್ ಮಾಡೋ ಮೊದಲು ಅದರ ಸತ್ಯಾಸತ್ಯತೆ ಬಗ್ಗೆ ಸ್ವಲ್ಪ ವಿಚಾರಿಸಿ. ಇಲ್ಲಾಂದ್ರೆ ಇಂದೋರ್ ಜನರ ಹಾಗೆ ಸುಮ್ಮನೆ ಟೆನ್ಷನ್ ತಗೊಳ್ಳಬೇಕಾಗುತ್ತೆ!