ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ರಫ್ತಾಗುವ ವಸ್ತುಗಳ ಮೇಲಿನ ಸುಂಕವನ್ನು ಶೇಕಡಾ 25ರಿಂದ ಶೇಕಡಾ 18ಕ್ಕೆ ಇಳಿಸಲು ಒಪ್ಪಿಗೆ ನೀಡಿದ್ದಾರೆ. ಈ ನಿರ್ಧಾರವು ಭಾರತಕ್ಕೆ ದೊಡ್ಡ ಮಟ್ಟದ ಆರ್ಥಿಕ ನೆರವು ನೀಡಲಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಈ ವೇಳೆ ಟ್ರಂಪ್ ಸುಂಕವನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನೂ ಮುಂದಿಟ್ಟಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಅವರು ಧನ್ಯವಾದ ಅರ್ಪಿಸಿ, “ಭಾರತದ 1.4 ಬಿಲಿಯನ್ ಜನರ ಪರವಾಗಿ ಈ ನಿರ್ಧಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೋದಿಯವರು, “ನನ್ನ ಆತ್ಮೀಯ ಗೆಳೆಯರಾದ ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಮಾತನಾಡಿ ಸಂತೋಷವಾಯಿತು. ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಈಗ ಶೇ. 25ರ ಬದಲು ಶೇ. 18ರಷ್ಟು ಸುಂಕವನ್ನು ಮಾತ್ರ ಹೊಂದುತ್ತಿರುವುದು ಸಂತೋಷ ತಂದಿದೆ” ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತೊಂದು ವರಸೆ ತೆಗೆದುಕೊಂಡಿದ್ದು, ಪ್ರಧಾನಿ ಮೋದಿ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ಒಪ್ಪಂದದಿಂದ ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಲು ನೆರವಾಗುತ್ತದೆ ಎಂಬ ಅಭಿಪ್ರಾಯವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಭಾರತ ಅಮೆರಿಕದಿಂದ ಇಂಧನ, ಟೆಕ್, ಕೃಷಿ ಮತ್ತು ಕಲ್ಲಿದ್ದಲು ಖರೀದಿಗೆ ಒಪ್ಪಿಗೆ ನೀಡಿದ್ದು, ಇದರ ಮೂಲಕ 500 ಬಿಲಿಯನ್ ಡಾಲರ್ ಮೌಲ್ಯದ ವ್ಯಾಪಾರ ನಡೆಯಲಿದೆ ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ.
ಈ ಬೆಳವಣಿಗೆ ಭಾರತ-ಅಮೆರಿಕ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಜಾಗತಿಕ ರಾಜಕೀಯದಲ್ಲಿ ಹೊಸ ಸಮತೋಲನವನ್ನು ತರುವ ಸಾಧ್ಯತೆ ಇದೆ. ಸುಂಕ ಇಳಿಕೆಯ ನಿರ್ಧಾರವು ಭಾರತೀಯ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ನೀಡುವುದರೊಂದಿಗೆ, ಗ್ರಾಹಕರಿಗೂ ಲಾಭ ತರುವ ನಿರೀಕ್ಷೆ ವ್ಯಕ್ತವಾಗಿದೆ.