ನಮಗೆಲ್ಲ ರೈಲ್ವೆ ಸ್ಟೇಷನ್ ಅಂದ ಕೂಡಲೇ ನೆನಪಾಗೋದು ಕಿಕ್ಕಿರಿದು ತುಂಬಿರೋ ಜನ, ಟೀ ಮಾರುವವರ ಕೂಗು, ಅನೌನ್ಸ್‌ಮೆಂಟ್ ಸದ್ದು ಮತ್ತು ಗಡಿಯಾರ ನೋಡುತ್ತಾ ರೈಲಿಗಾಗಿ ಕಾಯೋ ಪ್ರಯಾಣಿಕರು. ಆದರೆ, ಭಾರತದಲ್ಲಿ ಇಂತಹದ್ದೇ ಒಂದು ರೈಲ್ವೆ ನಿಲ್ದಾಣವಿದೆ, ಅಲ್ಲಿ ನೀವು ವರ್ಷವಿಡೀ ಕಾಯುತ್ತಾ ಕೂತರೂ ರೈಲು ಬರೋದಿಲ್ಲ! ಹೌದು, ಅಲ್ಲಿ ರೈಲು ಬರೋದು ವರ್ಷಕ್ಕೆ ಕೇವಲ ಎರಡೇ ಎರಡು ಬಾರಿ. ಕೇಳೋಕೆ ಅಚ್ಚರಿ ಎನಿಸಿದರೂ ಇದು ನೂರಕ್ಕೆ ನೂರು ಸತ್ಯ. ಆ ನಿಲ್ದಾಣ ಯಾವುದು? ಅಲ್ಲಿ ಯಾಕೆ ದಿನಾ ರೈಲು ಓಡಲ್ಲ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ.
ಈ ಸ್ಟೇಷನ್ ಎಲ್ಲಿದೆ ಗೊತ್ತಾ?
ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ರೈಲ್ವೆ ಜಾಲ ಹೊಂದಿರೋ ಭಾರತದಲ್ಲಿ ಪ್ರತಿದಿನ ಸಾವಿರಾರು ರೈಲುಗಳು ಓಡುತ್ತವೆ. ಆದರೆ, ಪಂಜಾಬ್ ರಾಜ್ಯದ ಹುಸೇನಿವಾಲಾ ರೈಲ್ವೆ ನಿಲ್ದಾಣ ಮಾತ್ರ ವಿಶಿಷ್ಟವಾಗಿ ಉಳಿದುಬಿಟ್ಟಿದೆ. ಇದು ಫಿರೋಜ್‌ಪುರ ಮತ್ತು ಹುಸೇನಿವಾಲಾ ಗಡಿಯ ನಡುವೆ ಇದೆ. ಉತ್ತರ ರೈಲ್ವೆಯ ಕೊನೆಯ ನಿಲ್ದಾಣವಾಗಿರುವ ಇದು, ಫಿರೋಜ್‌ಪುರ ಕ್ಯಾಂಟ್‌ನಿಂದ ಹೊರಡುವ ಹಳಿಯ ಅಂತಿಮ ತಾಣ.
ಯಾಕೆ ವರ್ಷಕ್ಕೆ ಎರಡೇ ಬಾರಿ ರೈಲು?
ಸಾಮಾನ್ಯವಾಗಿ ಎಲ್ಲೂ ಕಾಣದ ಈ ವಿಚಿತ್ರ ಪದ್ಧತಿಗೆ ಒಂದು ಭಾವನಾತ್ಮಕ ಮತ್ತು ಐತಿಹಾಸಿಕ ಹಿನ್ನೆಲೆಯಿದೆ. ಇಲ್ಲಿ ರೈಲುಗಳು ಪ್ರತಿ ತಿಂಗಳು ಅಥವಾ ಪ್ರತಿ ವಾರ ಬರೋದಿಲ್ಲ. ಈ ಕೆಳಗಿನ ಎರಡು ವಿಶೇಷ ದಿನಗಳಲ್ಲಿ ಮಾತ್ರ ಇಲ್ಲಿ ಚಲನವಲನ ಕಾಣಿಸುತ್ತೆ:
ಮಾರ್ಚ್ 23 (ಶಹೀದ್ ದಿವಸ್): ಭಾರತದ ಹೆಮ್ಮೆಯ ಪುತ್ರ, ಕ್ರಾಂತಿಕಾರಿ ಭಗತ್ ಸಿಂಗ್ ಅವರ ಪುಣ್ಯತಿಥಿಯ ದಿನ. ಈ ದಿನದಂದು ದೇಶದ ಮೂಲೆ ಮೂಲೆಯಿಂದ ಜನರು ಹುಸೇನಿವಾಲಾ ಗಡಿಗೆ ಬಂದು ವೀರ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ. ಜನರಿಗಾಗಿ ಈ ದಿನ ವಿಶೇಷ ರೈಲು ಇಲ್ಲಿಗೆ ಬರುತ್ತದೆ.
ಏಪ್ರಿಲ್ 13 (ಬೈಸಾಖಿ): ಪಂಜಾಬಿಗಳ ಪಾಲಿನ ದೊಡ್ಡ ಹಬ್ಬ ಬೈಸಾಖಿ. ಈ ಸಂಭ್ರಮವನ್ನು ಆಚರಿಸಲು ಅಂದು ಎರಡನೇ ರೈಲು ಈ ನಿಲ್ದಾಣಕ್ಕೆ ಬರುತ್ತದೆ.
ಉಳಿದಂತೆ 363 ದಿನಗಳ ಕಾಲ ಈ ನಿಲ್ದಾಣ ಅಕ್ಷರಶಃ ಸ್ಮಶಾನ ಮೌನದಲ್ಲಿರುತ್ತದೆ. ಸ್ಟೇಷನ್ ಬೋರ್ಡ್‌ಗಳು, ಪ್ಲಾಟ್‌ಫಾರ್ಮ್ ಎಲ್ಲವೂ ಇತ್ತಾದರೂ ರೈಲು ಹತ್ತೋರು ಇರೋದಿಲ್ಲ.
ಒಂದು ಕಾಲದಲ್ಲಿ ಈ ಮಾರ್ಗ ಎಷ್ಟು ಬ್ಯುಸಿ ಇತ್ತೆಂದರೆ, ಇಲ್ಲಿಂದ ನೇರವಾಗಿ ಪಾಕಿಸ್ತಾನದ ಲಾಹೋರ್‌ಗೆ ರೈಲುಗಳು ಸಂಚರಿಸುತ್ತಿದ್ದವು. ಆದರೆ, ದೇಶ ವಿಭಜನೆ ಮತ್ತು ಯುದ್ಧಗಳ ನಂತರ ಈ ಮಾರ್ಗ ಸಂಪೂರ್ಣ ಬಂದ್ ಆಯಿತು. ಈಗ ರೈಲು ಇಲ್ಲಿಗೆ ಬಂದು, ಇಂಜಿನ್ ದಿಕ್ಕು ಬದಲಿಸಿ ಬಂದ ದಾರಿಯಲ್ಲೇ ವಾಪಸ್ ಹೋಗಬೇಕು. ಮುಂದಕ್ಕೆ ಹಳಿಗಳಿದ್ದರೂ ಸಂಚಾರವಿಲ್ಲ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಈ ನಿಲ್ದಾಣದ ವಿಡಿಯೋ ಮಾಡಿ ಹಂಚಿಕೊಂಡ ನಂತರ ಇಡೀ ದೇಶದ ಗಮನ ಇದರತ್ತ ಸೆಳೆಯಿತು. "ನಾನಿರೋ ಜಾಗಕ್ಕೆ ವರ್ಷಕ್ಕೆ ಎರಡೇ ಸಲ ರೈಲು ಬರುತ್ತೆ" ಎಂದು ಅವರು ಹೇಳಿದ್ದು ಎಲ್ಲರನ್ನೂ ಕುತೂಹಲಕ್ಕೀಡು ಮಾಡಿತ್ತು.
ಅಟ್ಟಾರಿ ನಿಲ್ದಾಣದ ಕಥೆಯೇ ಬೇರೆ!
ಹುಸೇನಿವಾಲಾ ಕಥೆ ಹೀಗಿದ್ದರೆ, ಭಾರತ-ಪಾಕ್ ಗಡಿಯ ಮತ್ತೊಂದು ನಿಲ್ದಾಣವಾದ ಅಟ್ಟಾರಿ ಶ್ಯಾಮ್ ಸಿಂಗ್ (ವಾಘಾ) ನಿಲ್ದಾಣವೂ ವಿಶೇಷವೇ. ಇಲ್ಲಿಗೆ ರೈಲುಗಳೇನೋ ಬರುತ್ತವೆ, ಆದರೆ ನೀವು ಇಲ್ಲಿಗೆ ಹೋಗಬೇಕೆಂದರೆ ಬರಿ ಟಿಕೆಟ್ ಇದ್ದರೆ ಸಾಲದು, ಪಾಸ್‌ಪೋರ್ಟ್ ಮತ್ತು ವೀಸಾ ಕೂಡ ಇರಲೇಬೇಕು! ಕಟ್ಟುನಿಟ್ಟಾದ ಭದ್ರತೆಯ ಕಾರಣದಿಂದ ಇಲ್ಲಿನ ನಿಯಮಗಳು ಬೇರೆಲ್ಲಾ ನಿಲ್ದಾಣಗಳಿಗಿಂತ ಭಿನ್ನವಾಗಿವೆ.
ನಮ್ಮ ದೇಶದ ರೈಲ್ವೆ ಇಲಾಖೆಯಲ್ಲಿ ಇಂತಹ ಹತ್ತಾರು ನಿಗೂಢ ಮತ್ತು ಅಚ್ಚರಿಯ ಸಂಗತಿಗಳು ಅಡಗಿವೆ. ಹುಸೇನಿವಾಲಾ ರೈಲ್ವೆ ನಿಲ್ದಾಣ ಮಾತ್ರ ತನ್ನ ಮೌನದ ಮೂಲಕವೇ ಇತಿಹಾಸದ ಕಥೆ ಹೇಳುತ್ತಾ ನಿಂತಿದೆ.