ನಂಬಿದ ನೌಕರನೇ ಮಾಲೀಕನಿಗೆ ಕನ್ನ ಹಾಕಿದ ಘಟನೆಯೊಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ಬರೋಬ್ಬರಿ 59 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳೊಂದಿಗೆ ಕಿರಾತಕ ಪರಾರಿಯಾಗಿದ್ದಾನೆ.
ಬೆಂಗಳೂರಿನಲ್ಲಿ ಬೆಳ್ಳಿ ವ್ಯಾಪಾರ ಮಾಡುವ ಆಶಿಸ್ ಕುಮಾರ್ ಅವರು ತಮ್ಮ ಅಂಗಡಿಯಲ್ಲಿ ನಂಬಿಕೆಯಿಂದ ಕೆಲಸ ಮಾಡುತ್ತಿದ್ದ ಅಮೀತ್ ಪುರೋಹಿತ್ ಮತ್ತು ಯೋಗೇಶ ಸಿಂಗ್ ಎಂಬ ಇಬ್ಬರು ನೌಕರರಿಗೆ ಬೆಳ್ಳಿ ಆಭರಣಗಳನ್ನು ಮಾರಾಟ ಮಾಡಲು ಜವಾಬ್ದಾರಿ ವಹಿಸಿದ್ದರು. ಫೆಬ್ರವರಿ ತಿಂಗಳ ಅಂತ್ಯದಲ್ಲಿ ಸುಮಾರು 29 ಕೆಜಿ ತೂಕದ ಬೆಳ್ಳಿ ಆಭರಣಗಳನ್ನು ನೀಡಿ, ತಮ್ಮದೇ ಕಾರಿನಲ್ಲಿ ಉತ್ತರ ಕರ್ನಾಟಕದ ವಿವಿಧ ನಗರಗಳಿಗೆ ಕಳುಹಿಸಿಕೊಟ್ಟಿದ್ದರು. ಈ ಇಬ್ಬರು ನೌಕರರು ಮೊದಲು ಚಿತ್ರದುರ್ಗ ಮತ್ತು ದಾವಣಗೆರೆಗೆ ಭೇಟಿ ನೀಡಿ, ಅಲ್ಲಿ ಸುಮಾರು 3.167 ಕೆಜಿ ಆಭರಣಗಳನ್ನು ಮಾರಾಟ ಮಾಡಿದ್ದರು. ಬಳಿಕ ಉಳಿದ 24.760 ಕೆಜಿ ಬೆಳ್ಳಿಯನ್ನು ಮಾರಾಟ ಮಾಡುವ ಉದ್ದೇಶದಿಂದ ಫೆಬ್ರವರಿ 28ರಂದು ಹುಬ್ಬಳ್ಳಿಗೆ ಆಗಮಿಸಿದ್ದರು.
ಹುಬ್ಬಳ್ಳಿಯ ಪ್ರಸಿದ್ಧ ಲ್ಯಾಮಿಂಗ್ಟನ್ ರಸ್ತೆಗೆ ಬಂದ ಇಬ್ಬರು ನೌಕರರು, ಬಟ್ಟೆ ಅಂಗಡಿಯೊಂದರ ಎದುರು ಕಾರನ್ನು ನಿಲ್ಲಿಸಿದ್ದರು. ಅಮೀತ್ ಪುರೋಹಿತ್ ಅವರು ಸಮೀಪದ ಜ್ಯುವೆಲರ್ಸ್ ಮಳಿಗೆಯೊಂದಕ್ಕೆ ವ್ಯಾಪಾರ ಮಾತಾಡಲು ಹೋಗಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಆಭರಣಗಳನ್ನು ತರುವಂತೆ ಅಮೀತ್ ಅವರು ಯೋಗೇಶ ಸಿಂಗ್‌ಗೆ ಹೇಳಿ ಕಾರಿನ ಕೀಲಿಯನ್ನು (ಚಾವಿ) ನೀಡಿದ್ದರು. ಇದನ್ನೇ ಸರಿಯಾದ ಸಮಯ ಎಂದು ಭಾವಿಸಿದ ಯೋಗೇಶ ಸಿಂಗ್, ಕಾರಿನಲ್ಲಿದ್ದ ಎರಡು ಬ್ಯಾಗ್‌ಗಳಲ್ಲಿದ್ದ ಕಾಲುಗೆಜ್ಜೆ, ಕತ್ತಿನ ಚೈನ್, ಬ್ರಾಸ್ಲೇಟ್, ಕೈ ಕಡಗ ಸೇರಿದಂತೆ ಒಟ್ಟು 59 ಲಕ್ಷ ರೂಪಾಯಿ ಮೌಲ್ಯದ ಸುಮಾರು 24 ಕೆಜಿ ಬೆಳ್ಳಿ ಆಭರಣಗಳನ್ನು ಎತ್ತಿಕೊಂಡು ಚಾವಿ ಸಮೇತ ಅಲ್ಲಿಂದ ಪರಾರಿಯಾಗಿದ್ದಾನೆ.
ಬಹಳ ಹೊತ್ತಾದರೂ ಯೋಗೇಶ ಬಾರದೇ ಇದ್ದಾಗ ಅನುಮಾನಗೊಂಡ ಅಮೀತ್ ಪುರೋಹಿತ್ ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದ ಮಾಲೀಕ ಆಶಿಸ್ ಕುಮಾರ್ ಜೈನ್ ಅವರು ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯೋಗೇಶ ಸಿಂಗ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದು, ಆತ ರಾಜಸ್ಥಾನಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸದ್ಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಈ ಘಟನೆಯು ದೊಡ್ಡ ಮಟ್ಟದ ವ್ಯವಹಾರ ನಡೆಸುವವರಿಗೆ ಒಂದು ಪಾಠವಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳುಹಿಸುವಾಗ ಕೇವಲ ನಂಬಿಕೆಯ ಮೇಲೆ ಕೆಲಸಗಾರರನ್ನು ಕಳುಹಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡಿದೆ.