ಹುಬ್ಬಳ್ಳಿ (ತಾರಿಹಾಳ): ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾರಿಹಾಳದಲ್ಲಿ ನಡೆದ ಮಧ್ಯಾಹ್ನದ ಬಿಸಿಯೂಟದ ಅವಘಡ ಸ್ಥಳೀಯರಲ್ಲಿ ಬಾರಿ ಆಕ್ರೋಶ ಮೂಡಿಸಿದೆ. ಪ್ರತದಿನ ಶಾಲೆಗೆ ಪೂರೈಕೆ ಮಾಡಲಾಗುತ್ತಿದ್ದ ಸಾಂಬರ್‌ನಲ್ಲಿ ಹುಳ (ನುಸಿ) ಪತ್ತೆಯಾದ ಘಟನೆ ವಿದ್ಯಾರ್ಥಿಗಳಲ್ಲಿ ಆತಂಕ ಹುಟ್ಟಿಸಿದೆ. ಮಧ್ಯಾಹ್ನದ ಬಿಸಿಯೂಟವನ್ನು ಖಾಸಗಿ ಸಂಸ್ಥೆಯೊಂದು ಪೂರೈಕೆ ಮಾಡುತ್ತಿದ್ದು, ಸಾಂಬರ್‌ನಲ್ಲಿ ಹುಳ ಕಂಡ ತಕ್ಷಣ ವಿದ್ಯಾರ್ಥಿಗಳು ಊಟವನ್ನು ಬಿಟ್ಟು ಮನೆಗೆ ತೆರಳಿ ಊಟ ಮಾಡಿಕೊಂಡು ಬಂದಿದ್ದಾರೆ.
ಈ ಘಟನೆ ಪೋಷಕರಲ್ಲಿ ಅಸಮಾಧಾನ ಮೂಡಿಸಿದ್ದು, “ಮಕ್ಕಳ ಆರೋಗ್ಯದ ವಿಷಯದಲ್ಲಿ ಇಂತಹ ನಿರ್ಲಕ್ಷ್ಯ ಅಸಹ್ಯಕರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಹೇಳುವಂತೆ, ಮಧ್ಯಾಹ್ನದ ಬಿಸಿಯೂಟ ಯೋಜನೆ ಮಕ್ಕಳ ಪೌಷ್ಟಿಕತೆಗೆ ಮಹತ್ವದ್ದಾಗಿದೆ. ಆದರೆ, ಆಹಾರದ ಗುಣಮಟ್ಟದಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಅದು ಮಕ್ಕಳ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. “ಮಕ್ಕಳಿಗೆ ನೀಡುವ ಆಹಾರದಲ್ಲಿ ಸ್ವಚ್ಛತೆ ಮತ್ತು ಗುಣಮಟ್ಟ ಕಾಪಾಡುವುದು ಸಂಸ್ಥೆಗಳ ಜವಾಬ್ದಾರಿ. ಇಂತಹ ಘಟನೆಗಳು ಮರುಕಳಿಸಬಾರದು” ಎಂದು ಪೋಷಕರು ಒತ್ತಾಯಿಸಿದ್ದಾರೆ.
ಶಾಲಾ ಶಿಕ್ಷಕರು ಕೂಡಾ ಈ ಘಟನೆಗೆ ಬೇಸರ ವ್ಯಕ್ತಪಡಿಸಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. “ಮಕ್ಕಳಿಗೆ ನೀಡುವ ಆಹಾರದಲ್ಲಿ ಯಾವುದೇ ರೀತಿಯ ಅಸಮರ್ಪಕತೆ ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಘಟನೆ ಕೇವಲ ಒಂದು ನಿರ್ಲಕ್ಷ್ಯವಲ್ಲ, ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಅಧಿಕಾರಿಗಳು ತಕ್ಷಣವೇ ಪರಿಶೀಲನೆ ನಡೆಸಿ, ಪೂರೈಕೆ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.