ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ರಕ್ತಪಾತ - ಯುವ ಕಾಂಗ್ರೆಸ್ ಮುಖಂಡನ ಭೀಕರ ಹತ್ಯೆ!!

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ರಕ್ತ ಚೆಲ್ಲಿದೆ. ಶುಕ್ರವಾರ ರಾತ್ರಿ ನಗರದ ಮಾಳಾಪುರದಲ್ಲಿ ಯುವ ಕಾಂಗ್ರೆಸ್ ಮುಖಂಡ ಫೈರೋಜ್‌ಖಾನ್ ಪಠಾಣ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಇಡೀ ನಗರವೇ ಬೆಚ್ಚಿಬಿದ್ದಿದೆ. ಈ ಕೊಲೆಯನ್ನು ಫೈರೋಜ್‌ ಅವರ ಆಪ್ತ ಸ್ನೇಹಿತನೇ ಮಾಡಿರಬಹುದು ಎಂಬ ಶಂಕೆ ಈಗ ಬಲವಾಗಿ ಕೇಳಿಬರುತ್ತಿದೆ.

ಹುಬ್ಬಳ್ಳಿಯಲ್ಲಿ ನಡುರಸ್ತೆಯಲ್ಲಿ ಗ್ಯಾಂಗ್ ವಾರ್
ಹುಬ್ಬಳ್ಳಿಯಲ್ಲಿ ನಡುರಸ್ತೆಯಲ್ಲಿ ಗ್ಯಾಂಗ್ ವಾರ್

ಮನೆಯೊಳಗೆ ನುಗ್ಗಿ ಹತ್ಯೆ
ಘಟನೆ ನಡೆದಿದ್ದು ಶುಕ್ರವಾರ ರಾತ್ರಿ. ಮಾಳಾಪುರದ ಹಾಶ್ಮಿನಗರದ 4ನೇ ಕ್ರಾಸ್‌ನಲ್ಲಿರುವ ಫೈರೋಜ್ ಅವರ ಮನೆಗೆ ನಾಲ್ವರು ದುಷ್ಕರ್ಮಿಗಳು ಏಕಾಏಕಿ ನುಗ್ಗಿದ್ದಾರೆ. ಫೈರೋಜ್‌ ಚೇತರಿಸಿಕೊಳ್ಳುವಷ್ಟರಲ್ಲೇ ಅವರ ಮೇಲೆ ಚಾಕುವಿನಿಂದ ಮನಸೋಇಚ್ಛೆ ಇರಿದು ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಅಷ್ಟೇ ಅಲ್ಲ, ಈ ಭೀಕರ ಹತ್ಯೆಯ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರ ಎದೆಯಲ್ಲಿ ನಡುಕ ಹುಟ್ಟಿಸಿದೆ.

ಸ್ನೇಹಿತನೇ ಶತ್ರುವಾದನೇ?
ಫೈರೋಜ್ ಪಠಾಣ ಅವರ ಆಪ್ತ ಸ್ನೇಹಿತ, ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ ಶಾ ಮತ್ತು ಅವರ ತಂಡವೇ ಈ ಕೃತ್ಯ ಎಸಗಿದೆ ಎಂದು ಪಠಾಣ ಅವರ ಬೆಂಬಲಿಗರು ಗಂಭೀರವಾಗಿ ಆರೋಪಿಸುತ್ತಿದ್ದಾರೆ. ರಾಜಕೀಯ ದ್ವೇಷ ಮತ್ತು ತನ್ನದೇ ಸಮಾಜದ ಮತ್ತೊಬ್ಬ ವ್ಯಕ್ತಿ ನಾಯಕನಾಗಿ ಬೆಳೆಯಬಾರದು ಎಂಬ ಕಿಡಿಗೇಡಿತನವೇ ಈ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಈ ಹತ್ಯೆಯ ಹಿಂದೆ ಮುಸ್ಲಿಂ ಸಮುದಾಯದ ಒಬ್ಬ ಹಿರಿಯ ನಾಯಕನ ಕೈವಾಡವೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಠಾಣೆ ಮುಂದೆ ಶವವಿಟ್ಟು ಆಕ್ರೋಶ
ಶನಿವಾರ ಬೆಳಿಗ್ಗೆ ಹಂತಕರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಫೈರೋಜ್ ಕುಟುಂಬಸ್ಥರು ಮತ್ತು ಅಭಿಮಾನಿಗಳು ಉಪನಗರ ಪೊಲೀಸ್ ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು. "ಕೊಲೆ ಮಾಡಿದವರು ಯಾರು ಎಂಬುದು ಪೊಲೀಸರಿಗೂ ಗೊತ್ತಿದೆ, ಆದರೂ ಯಾಕೆ ಬಂಧಿಸುತ್ತಿಲ್ಲ?" ಎಂದು ಜನರು ಆಕ್ರೋಶ ಹೊರಹಾಕಿದರು.

ಪ್ರತಿಭಟನಾಕಾರರ ಪ್ರಕಾರ, ಫೈರೋಜ್‌ ಅವರಿಗೆ ಕಳೆದ ಆರು ತಿಂಗಳ ಹಿಂದೆಯೇ ಜೀವ ಬೆದರಿಕೆ ಇತ್ತು. ಈ ಬಗ್ಗೆ ಅವರು ಪೊಲೀಸರಿಗೆ ದೂರು ಕೂಡ ನೀಡಿದ್ದರು ಮತ್ತು ಗೃಹ ಸಚಿವರಿಗೂ ಪತ್ರ ಬರೆದಿದ್ದರು. ಆದರೆ ಅಂದು ಪೊಲೀಸರು ರಕ್ಷಣೆ ನೀಡಿದ್ದರೆ ಇಂದು ಈ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಕುಟುಂಬಸ್ಥರು ಕಣ್ಣೀರಿಟ್ಟರು.

ಪೊಲೀಸರ ಭರವಸೆ, ಅಂತ್ಯಕ್ರಿಯೆ ಪೂರ್ಣ
ಠಾಣೆಯ ಮುಂದೆ ಗಲಾಟೆ ಹೆಚ್ಚಾದಾಗ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶ ಮಾಡಿದರು. "ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಕಠಿಣ ಶಿಕ್ಷೆ ಕೊಡಿಸುತ್ತೇವೆ" ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು. ನಂತರ ಫೈರೋಜ್ ಅವರ ಮನೆಗೆ ಶವವನ್ನು ತೆಗೆದುಕೊಂಡು ಹೋಗಿ ಅಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಸದ್ಯ ಹುಬ್ಬಳ್ಳಿಯಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ. ರಾಜಕೀಯ ಆಕಾಂಕ್ಷೆಯ ಬೆಂಕಿ ಒಬ್ಬ ಯುವ ನಾಯಕನ ಬಲಿತೆಗೆದುಕೊಂಡಿರುವುದು ಮಾತ್ರ ದುರದೃಷ್ಟಕರ.

Latest News