Apr 11, 2026 Languages : ಕನ್ನಡ | English

ಕೋಟಿ ಬೆಲೆಯ ಲಂಬೋರ್ಗಿನಿ ಹತ್ತಿ ಬಂದವನಿಗೆ ಈಗ ರಸ್ತೆ ಗುಡಿಸುವ ಶಿಕ್ಷೆ - ಹೈಕೋರ್ಟ್ ನೀಡಿದ ಮಾಸ್ ತೀರ್ಪು!!

ಬೆಂಗಳೂರಿನ ರಸ್ತೆಗಳಲ್ಲಿ ಐಷಾರಾಮಿ ಕಾರುಗಳ ಹವಾ ಜೋರಾಗಿರುತ್ತದೆ. ಅದರಲ್ಲೂ 'ಲ್ಯಾಂಬೊರ್ಗಿನಿ'ಯಂತಹ ಕೋಟಿ ಬೆಲೆಯ ಕಾರುಗಳನ್ನ ಓಡಿಸುವಾಗ ಕೆಲವರಿಗೆ ಎಲ್ಲಿಲ್ಲದ ದರ್ಪ! ಆದರೆ, ಅದೇ ಲ್ಯಾಂಬೊರ್ಗಿನಿ ಹತ್ತಿ ಬಂದವನಿಗೆ ಈಗ ರಸ್ತೆ ಕಸ ಗುಡಿಸುವ ಪರಿಸ್ಥಿತಿ ಬಂದಿದೆ. ಅತಿ ವೇಗವಾಗಿ ಕಾರು ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ಕರ್ನಾಟಕ ಹೈಕೋರ್ಟ್‌ ಒಂದು 'ಡಿಫರೆಂಟ್' ಶಿಕ್ಷೆ ವಿಧಿಸಿದೆ.

ಐಷಾರಾಮಿ ಲಂಬೋರ್ಗಿನಿ ಮಾಲೀಕನಿಗೂ ತಪ್ಪಲಿಲ್ಲ ಕಸ ಗುಡಿಸುವ ಶಿಕ್ಷೆ
ಐಷಾರಾಮಿ ಲಂಬೋರ್ಗಿನಿ ಮಾಲೀಕನಿಗೂ ತಪ್ಪಲಿಲ್ಲ ಕಸ ಗುಡಿಸುವ ಶಿಕ್ಷೆ

ಜನವರಿ 20ರಂದು ಚಿರಂತನ್ ಎಂಬ ವ್ಯಕ್ತಿ ತನ್ನ ಹಸಿರು ಬಣ್ಣದ ಲ್ಯಾಂಬೊರ್ಗಿನಿ ಕಾರನ್ನು ಕೆಂಗೇರಿ ಸಂಚಾರ ಠಾಣಾ ವ್ಯಾಪ್ತಿಯ ಮೈಸೂರು ರಸ್ತೆಯಲ್ಲಿ ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿದ್ದ. ಈ ಬಗ್ಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ಎಫ್‌ಐಆರ್ ರದ್ದು ಮಾಡಬೇಕು ಎಂದು ಆತ ಹೈಕೋರ್ಟ್ ಮೆಟ್ಟಿಲೇರಿದ್ದ.

ಕೋರ್ಟ್‌ನಲ್ಲಿ ನಡೆದಿದ್ದೇನು?

ನ್ಯಾಯಮೂರ್ತಿ ನಾಗಪ್ರಸನ್ನ ಅವರ ಮುಂದೆ ಈ ಪ್ರಕರಣ ವಿಚಾರಣೆಗೆ ಬಂದಾಗ, ಚಿರಂತನ್ ಪರ ವಕೀಲರು "ನನ್ನ ಕಕ್ಷಿದಾರನಿಗೆ ತಪ್ಪಿನ ಅರಿವಾಗಿದೆ, ಆತ ಪಶ್ಚಾತ್ತಾಪ ಪಡುತ್ತಿದ್ದಾನೆ. ಇದಕ್ಕೆ ಪ್ರತಿಯಾಗಿ ಸಮುದಾಯ ಸೇವೆ ಮಾಡಲು ಸಿದ್ಧನಿದ್ದಾನೆ. ಬೇಕಿದ್ದರೆ ಶಾಲಾ ಮಕ್ಕಳಿಗೆ ಟ್ರಾಫಿಕ್ ರೂಲ್ಸ್ ಬಗ್ಗೆ ಪಾಠ ಮಾಡುತ್ತಾನೆ" ಎಂದು ವಾದಿಸಿದರು.

ಆದರೆ ಇದಕ್ಕೆ ಸರ್ಕಾರಿ ವಕೀಲರು ಸರಿಯಾಗಿಯೇ ಟಾಂಗ್ ಕೊಟ್ಟರು. "ಸಂಚಾರ ನಿಯಮ ಮುರಿದವನೇ ಮಕ್ಕಳಿಗೆ ಪಾಠ ಮಾಡುವುದು ಎಷ್ಟು ಸರಿ? ಅದರ ಬದಲು ಗಿಡ ನೆಡುವ ಶಿಕ್ಷೆ ಕೊಡಿ" ಎಂದು ಸಲಹೆ ನೀಡಿದರು.

ಹೈಕೋರ್ಟ್ ನೀಡಿದ ಮಾಸ್ ಶಿಕ್ಷೆ!

ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿಗಳು ಒಂದು ವಿಶಿಷ್ಟ ಶಿಕ್ಷೆ ನೀಡಿದರು. "ನೀವು ಅದೇ ಹಸಿರು ಲ್ಯಾಂಬೊರ್ಗಿನಿ ಕಾರಿನಲ್ಲಿ ಹೋಗಿ ರಸ್ತೆ ಕಸ ಗುಡಿಸಬೇಕು. ಕೆಲಸ ಮುಗಿಸಿ ಮತ್ತೆ ಅದೇ ಕಾರಿನಲ್ಲಿ ವಾಪಸ್ ಬರಬೇಕು" ಎಂದು ಮೌಖಿಕವಾಗಿ ಸೂಚಿಸಿದ್ದಾರೆ.

"ನನ್ನ ಹತ್ತಿರ ಕೋಟಿ ಬೆಲೆಯ ಕಾರಿದೆ, ನಾನು ಏನೂ ಬೇಕಾದರೂ ಮಾಡಬಹುದು" ಎಂದುಕೊಳ್ಳುವವರಿಗೆ ಈ ತೀರ್ಪು ಒಂದು ಎಚ್ಚರಿಕೆಯ ಗಂಟೆ. ಹೈ ಎಂಡ್ ಕಾರು ಹತ್ತಿದರೂ ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಹೈಕೋರ್ಟ್ ಈ ಮೂಲಕ ರವಾನಿಸಿದೆ. ಇನ್ನು ಯಾವ ದಿನ, ಎಷ್ಟು ಗಂಟೆಗೆ ಈ 'ಲ್ಯಾಂಬೊರ್ಗಿನಿ ಚಾಲಕ' ರಸ್ತೆ ಗುಡಿಸಬೇಕು ಎಂಬುದು ಅಫಿಶಿಯಲ್ ಆರ್ಡರ್‌ನಲ್ಲಿ ಹೊರಬೀಳಲಿದೆ.