ಬೆಂಗಳೂರು ಹೆಗ್ಗನಹಳ್ಳಿ ಗಜಾನನ ನಗರದಲ್ಲಿ ನಡೆದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪ್ರೇಯಸಿಯನ್ನು ನೋಡಲು ಬಂದಿದ್ದ ಅಬ್ಧುಲ್ ಹುಸೇನ್ (29) ಎಂಬ ಯುವಕ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಎದ್ದಿವೆ. ಅಬ್ಧುಲ್ ಹುಸೇನ್ ಬ್ಯಾಡರಹಳ್ಳಿಯ ಚೇತನ ಸರ್ಕಲ್ ಬಳಿ ಸ್ಕ್ರಾಪ್ ಗೋಡಾನ್ ನಡೆಸುತ್ತಿದ್ದನು ಎಂದು ತಿಳಿದುಬಂದಿದೆ. ಆ ಗೋಡಾನ್ ಯುವತಿಯ ಮನೆ ಬಳಿಯಲ್ಲೇ ಇದ್ದುದರಿಂದ ಇಬ್ಬರಿಗೂ ಪರಿಚಯ ಬೆಳೆದಿತ್ತಂತೆ, ಇಂದು ಬೆಳಿಗ್ಗೆ ಯುವತಿಯ ತಂದೆ ಅಬ್ಧುಲ್‌ನ ಸಹೋದರನಿಗೆ ಕರೆ ಮಾಡಿ, “ಅಬ್ಧುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ತಿಳಿಸಿದ್ದಾನೆ. ನಂತರ ಗಜಾನನ ನಗರ ಬಳಿಗೆ ಬರಲು ಸೂಚಿಸಿದ್ದಾನೆ.
ಸ್ಥಳಕ್ಕೆ ಬಂದಾಗ, ಆಟೋದಲ್ಲಿ ಅಬ್ಧುಲ್ ಹುಸೇನ್ ಮೃತದೇಹವನ್ನು ಯುವತಿಯ ಕುಟುಂಬಸ್ಥರು ಇಟ್ಟು ಹೋಗಿರುವುದು ಕಂಡುಬಂದಿದೆ. ಈ ಬಗ್ಗೆ ಅಬ್ಧುಲ್ ಕುಟುಂಬಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾಮಾಕ್ಷಿ ಪಾಳ್ಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಯುವತಿಯ ಕುಟುಂಬಸ್ಥರಿಂದ ಸಾವಿನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮೇಲ್ನೋಟಕ್ಕೆ ಅಬ್ಧುಲ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದರೂ, ಮೃತದೇಹವನ್ನು ಕುಟುಂಬಸ್ಥರು ನೇಣಿನಿಂದ ಇಳಿಸಿ ಆಟೋದಲ್ಲಿ ಕೊಂಡೊಯ್ದಿರುವುದು ಸಂಶಯಕ್ಕೆ ಕಾರಣವಾಗಿದೆ. ಗಲಾಟೆಯಾಗಬಹುದೆಂಬ ಭಯದಿಂದ ಮೃತದೇಹವನ್ನು ಸ್ಥಳದಲ್ಲೇ ಬಿಡದೆ ಕಾಲ್ಕಿತ್ತಿದ್ದಾರೆಂಬ ಮಾಹಿತಿ ದೊರೆತಿದೆ ಎಂದು ಕೇಳಿ ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಕಾಮಾಕ್ಷಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ನಿಜಾಸ್ತಿತಿ ಪತ್ತೆಹಚ್ಚಲು ತನಿಖೆ ಮುಂದುವರಿಯುತ್ತಿದೆ ಎಂದು ತಿಳಿದುಬಂದಿದೆ. ಈ ಘಟನೆ ಪ್ರೇಮ ಸಂಬಂಧ, ಕುಟುಂಬದ ಒತ್ತಡ ಹಾಗೂ ಆತ್ಮಹತ್ಯೆ ಅಥವಾ ಕೊಲೆ ಎಂಬ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.