ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಪ್ರಸಿದ್ಧ KDM KING-108 ಕೊಬ್ಬರಿ ಹೋರಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಸ್ಥಳೀಯರಲ್ಲಿ ಭಾರೀ ದುಃಖವನ್ನು ಉಂಟುಮಾಡಿದೆ. ಹೋರಿಯ ಸಾವಿನ ಸುದ್ದಿ ತಿಳಿದ ತಕ್ಷಣ ನೂರಾರು ಅಭಿಮಾನಿಗಳು ಹೋರಿಯ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಮನೆಗೆ ಹರಿದು ಬಂದರು. ಹೋರಿಯು ಗ್ರಾಮದಲ್ಲಿ ಮಾತ್ರವಲ್ಲ, ಜಿಲ್ಲೆಯಾದ್ಯಂತ ಜನಪ್ರಿಯತೆ ಪಡೆದಿದ್ದರಿಂದ ಜನಸಾಗರ ಮನೆ ಮುಂದೆ ಕಂಡುಬಂತು.
ಹೋರಿಯ ಮಾಲೀಕ ಕಾಂತೇಶ ನಾಯಕ್, ಹೋರಿಯ ಸ್ಮರಣಾರ್ಥವಾಗಿ ಮನೆಯ ಮುಂದೆ ದೇವಸ್ಥಾನ ಕಟ್ಟಿಸುವ ನಿರ್ಧಾರ ಮಾಡಿದ್ದಾರೆ. ಹೋರಿಯು 12 ವರ್ಷಗಳ ಇತಿಹಾಸದಲ್ಲಿ ಸೋಲಿಲ್ಲದ ಸರದಾರನಾಗಿ ಹೆಸರು ಮಾಡಿದ್ದರಿಂದ ಈ ನಿರ್ಧಾರಕ್ಕೆ ಗ್ರಾಮಸ್ಥರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. KDM KING-108 ಕೊಬ್ಬರಿ ಹೋರಿ ತನ್ನ ಜೀವನದಲ್ಲಿ ಅನೇಕ ಸಾಧನೆಗಳನ್ನು ದಾಖಲಿಸಿದೆ. 11 ಬೈಕ್‌ಗಳು, ಬಂಗಾರ, ಎತ್ತಿನಬಂಡಿ, ಟಿವ್ಹಿ ಸೇರಿದಂತೆ ಹಲವು ಬಹುಮಾನಗಳನ್ನು ಗೆದ್ದಿದೆ. ಹೋರಿಯು ತನ್ನ ಶಕ್ತಿಯುತ ಪ್ರದರ್ಶನದಿಂದ ಜನಮನ ಗೆದ್ದಿತ್ತು.
ಗ್ರಾಮದಲ್ಲಿ ಮೆರವಣಿಗೆ ನಡೆಸಿ ಹೋರಿಯ ಪಾರ್ಥೀವ ಶರೀರವನ್ನು ಮನೆಯ ಮುಂದೆ ತಂದು, ಹಿಂದೂ ಸಂಪ್ರದಾಯದ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲು ಸಿದ್ದತೆ ಮಾಡಲಾಗಿದೆ. ಗ್ರಾಮಸ್ಥರು ಹೋರಿಯ ಅಂತಿಮ ಯಾತ್ರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. KDM KING-108 ಹೋರಿ ತನ್ನ ಶಕ್ತಿಯುತ ಪ್ರದರ್ಶನದಿಂದ ಅನೇಕ ಬಿರುದುಗಳನ್ನು ಪಡೆದಿತ್ತು. ಮಸಣದ ದೊರೆ, ಕಿಲ್ಲಿಂಗ್ ಸ್ಟಾರ್, ಮಲೆನಾಡ ಜನಗಳ ಜೀವಾ, ಕಾಂತೇಶನ ವರಪ್ರಸಾದ ಎಂಬ ಬಿರುದುಗಳಿಂದ ಹೋರಿಯು ಜನಮನ ಗೆದ್ದಿತ್ತು. ಹೋರಿಯ ಸಾವಿನಿಂದ ಗ್ರಾಮಸ್ಥರು ದುಃಖಗೊಂಡಿದ್ದರೂ, ಹೋರಿಯ ಸಾಧನೆಗಳನ್ನು ನೆನೆದು ಹೆಮ್ಮೆಪಡುತ್ತಿದ್ದಾರೆ. ಹೋರಿಯು ಗ್ರಾಮಕ್ಕೆ ತಂದ ಗೌರವ ಮತ್ತು ಜನಪ್ರಿಯತೆ ಸದಾ ನೆನಪಿನಲ್ಲಿ ಉಳಿಯಲಿದೆ.