ಹಾವೇರಿ ಬಸ್ ನಿಲ್ದಾಣದಲ್ಲಿ ರಕ್ತದ ಓಕುಳಿಯೇ ಹರಿದಿದೆ. ಜನರ ಸುರಕ್ಷತೆ ಕಾಪಾಡಬೇಕಾದ ಸರ್ಕಾರಿ ಬಸ್ ಚಾಲಕನ ಅಜಾಗರೂಕತೆ ಇವತ್ತು ಒಂದು ಸುಂದರ ಸಂಸಾರವನ್ನು ಬೀದಿಗೆ ತಂದಿದೆ. ಬಸ್ ಚಾಲಕನ ಬೇಜವಾಬ್ದಾರಿತನಕ್ಕೆ ಕೇವಲ ಎರಡು ವರ್ಷದ ಹಸುಗೂಸು ಬಲಿಯಾಗಿದ್ದು, ಇಡೀ ರಾಜ್ಯವೇ ಈ ಘಟನೆ ಕಂಡು ಕಣ್ಣೀರಿಡುತ್ತಿದೆ.
ಏಪ್ರಿಲ್ 1 ಮುಂಜಾನೆ ಸರಿಯಾಗಿ 7 ಗಂಟೆಯ ಸಮಯ. ಹಾವೇರಿ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಓಡಾಟ ಜೋರಾಗಿಯೇ ಇತ್ತು. ಈ ನಡುವೆ ಬಂದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಅತ್ಯಂತ ವೇಗವಾಗಿ ಮತ್ತು ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದಾನೆ. ಬಸ್ ನಿಲ್ದಾಣದ ಒಳಗೆ ಅಷ್ಟು ವೇಗವಾಗಿ ಬರಬಾರದು ಎಂಬ ಸಾಮಾನ್ಯ ಜ್ಞಾನವೂ ಇಲ್ಲದಂತೆ ನುಗ್ಗಿದ ಆ ಬಸ್, ಅಲ್ಲಿ ನಿಂತಿದ್ದ ಒಂದೇ ಕುಟುಂಬದ ನಾಲ್ವರ ಮೇಲೆ ಹರಿದಿದೆ.
ಈ ಭೀಕರ ಅಪಘಾತದಲ್ಲಿ ಕೇವಲ ಎರಡು ವರ್ಷದ ಪುಟ್ಟ ಬಾಲಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಆ ಕಂದಮ್ಮನಿಗೆ ಪ್ರಪಂಚ ಅಂದ್ರೆ ಏನು ಅಂತ ತಿಳಿಯುವ ಮುನ್ನವೇ ಈ ಯಮನಂತ ಬಂದ ಚಾಲಕ ಆತನ ಉಸಿರು ಚೆಲ್ಲಿದ್ದಾನೆ. ಮಗನ ಸಾವನ್ನು ಕಣ್ಣಾರೆ ಕಂಡ ಪೋಷಕರ ಆಕ್ರಂದನ ಬಸ್ ನಿಲ್ದಾಣದಲ್ಲಿದ್ದವರ ಎದೆ ಸೀಳುವಂತಿತ್ತು. ಘಟನೆಯಲ್ಲಿ ಮಗುವಿನ ತಂದೆ-ತಾಯಿ ಸೇರಿದಂತೆ ಒಟ್ಟು ಮೂವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮೂವರ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಅಪಘಾತ ನಡೆದ ತಕ್ಷಣ ಅಲ್ಲಿ ನೆರೆದಿದ್ದ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಆದರೆ, ಇಷ್ಟೆಲ್ಲಾ ಅವಾಂತರ ಮಾಡಿದ ಆ ಚಾಲಕ ಜನರಿಗೆ ಹೆದರಿ ಬಸ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. "ಸರ್ಕಾರಿ ಬಸ್ ಅಂದ್ರೆ ನಂಬಿಕೆ ಇರುತ್ತೆ, ಆದ್ರೆ ಇವತ್ತು ಆ ನಂಬಿಕೆಯೇ ಸುಟ್ಟು ಹೋಗಿದೆ" ಎಂದು ಸ್ಥಳೀಯರು ಕಣ್ಣೀರು ಹಾಕುತ್ತಿದ್ದಾರೆ. ಬಸ್ ನಿಲ್ದಾಣದ ಒಳಗೆ ಬಸ್‌ಗಳು ಆನೆ ನಡಿಗೆಯಲ್ಲಿ ಬರಬೇಕೆಂಬ ನಿಯಮವಿದ್ದರೂ, ಇಂತಹ ರೇಸ್ ಡ್ರೈವರ್‌ಗಳಿಂದ ಅಮಾಯಕರ ಪ್ರಾಣ ಹೋಗುತ್ತಿದೆ.
ಈಗಾಗಲೇ ಹಾವೇರಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪರಾರಿಯಾಗಿರುವ ಆ ಬೇಜವಾಬ್ದಾರಿ ಚಾಲಕನಿಗಾಗಿ ಹುಡುಕಾಟ ತೀವ್ರಗೊಂಡಿದೆ. ಇನ್ನು ಗಾಯಗೊಂಡವರು ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಒಂದು ಪುಟ್ಟ ಮಗುವಿನ ಪ್ರಾಣ ಹೋದ ಮೇಲೆ ಆ ಚಾಲಕನಿಗೆ ಶಿಕ್ಷೆಯಾದರೆ ಏನು ಬಂತು? ಆ ಕುಟುಂಬಕ್ಕೆ ಆದ ನಷ್ಟವನ್ನು ತುಂಬಿಕೊಡಲು ಸಾಧ್ಯವೇ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
Karnataka’s reckless KSRTC bus driver!
— Nabila Jamal (@nabilajamal_) April 1, 2026
At Haveri Central Bus Stand at 7am today
2yr old boy killed, three others hospitalised..driver on the run pic.twitter.com/oDa39o1a13
ನಮ್ಮ ಮನವಿ ಏನೆಂದರೆ, ನೀವು ಬಸ್ ನಿಲ್ದಾಣದಲ್ಲಿ ಇದ್ದಾಗ ಮಕ್ಕಳು ನಿಮ್ಮ ಜೊತೆಗಿದ್ದರೆ ತುಂಬಾ ಜಾಗರೂಕರಾಗಿರಿ. ಸರ್ಕಾರಿ ಇರಲಿ ಅಥವಾ ಖಾಸಗಿ ಇರಲಿ, ಚಾಲಕರು ಬಸ್ ನಿಲ್ದಾಣದ ಒಳಗೆ ಬಂದಾಗ ಜನರ ಸುರಕ್ಷತೆಯ ಬಗ್ಗೆ ಕನಿಷ್ಠ ಕಾಳಜಿ ವಹಿಸಬೇಕು. ಈ ಘಟನೆಯಲ್ಲಿ ತಪ್ಪಿತಸ್ಥ ಚಾಲಕನಿಗೆ ಕಠಿಣ ಶಿಕ್ಷೆಯಾಗಲಿ ಮತ್ತು ಆ ಪುಟ್ಟ ಕಂದಮ್ಮನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸೋಣ.