ಗೂಗಲ್ ಸರ್ಚ್‌ನಲ್ಲಿ ಅತಿ ದೊಡ್ಡ ಬದಲಾವಣೆ - ಏನಿದು ತಂತ್ರಜ್ಞಾನ ಲೋಕ ನಡುಗಿಸುತ್ತಿರೋ “ಗೂಗಲ್ ಝೀರೋ”!!

ಬೆಂಗಳೂರು: ನೀವು ಇಂಟರ್ನೆಟ್‌ನಲ್ಲಿ ದಿನಾ ಏನಾದ್ರೂ ಒಂದು ಮಾಹಿತಿ ಹುಡುಕ್ತಾನೆ ಇರುತ್ತೀರಾ ಅಲ್ವಾ? ಆದರೆ, ಇನ್ಮುಂದೆ ನೀವು ಗೂಗಲ್‌ನಲ್ಲಿ ಏನನ್ನೇ ಸರ್ಚ್ ಮಾಡಿದ್ರೂ, ಯಾವುದೇ ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡೋ ಅಗತ್ಯವೇ ಇರಲ್ಲ! ಹೌದು, ಕೇಳೋಕೆ ಇದು ಯೂಸರ್ಸ್‌ಗೆ ಖುಷಿ ತರೋ ವಿಚಾರ ತರಹ ಕಾಣಿಸಿದ್ರೂ, ಗೂಗಲ್ ಮತ್ತು ಓಪನ್ ಎಐ (OpenAI) ತರುತ್ತಿರುವ ಇಂತಹ ಹೊಸ ತಂತ್ರಜ್ಞಾನಗಳು ವೆಬ್‌ಸೈಟ್ ನಡೆಸ್ತಿರೋ ಕೋಟ್ಯಂತರ ಜನರ ನಿದ್ದೆಗೆಡಿಸಿದೆ. ಗೂಗಲ್‌ನ ಈ ಹೊಸ ಎಐ ಅವತಾರದಿಂದಾಗಿ ಇಂಟರ್ನೆಟ್ ಜಗತ್ತಿನ ಸಣ್ಣ ಪ್ರಕಾಶಕರು, ಸ್ವತಂತ್ರ ಬ್ಲಾಗ್‌ಗಳು ಮತ್ತು ಮಾಧ್ಯಮ ಸಂಸ್ಥೆಗಳ ಆದಾಯಕ್ಕೆ ಭಾರಿ ಪೆಟ್ಟು ಬೀಳುವ ಭೀತಿ ಎದುರಾಗಿದೆ.

ಕೋಟ್ಯಂತರ ವೆಬ್‌ಸೈಟ್ ಮಾಲೀಕರು ಕಂಗಾಲು | Photo Credit: AI
ಕೋಟ್ಯಂತರ ವೆಬ್‌ಸೈಟ್ ಮಾಲೀಕರು ಕಂಗಾಲು | Photo Credit: AI

ಏನಿದು “ಗೂಗಲ್ ಝೀರೋ” (Google Zero) ಆತಂಕ?

ಗೂಗಲ್ ಇತ್ತೀಚೆಗೆ ನಡೆಸಿರೋ ತನ್ನ ‘I/O 2026’ ಇವೆಂಟ್‌ನಲ್ಲಿ ಕಳೆದ 20 ವರ್ಷಗಳಲ್ಲೇ ಅತಿ ದೊಡ್ಡ ಸರ್ಚ್ ಅಪ್‌ಡೇಟ್ ಒಂದನ್ನು ಅನೌನ್ಸ್ ಮಾಡಿದೆ. ಇದರ ಪ್ರಕಾರ, ನಾವು ಗೂಗಲ್‌ನಲ್ಲಿ ಏನಾದ್ರೂ ಟೈಪ್ ಮಾಡಿದ್ರೆ, ಮುಂಚಿನ ತರಹ ವೆಬ್‌ಸೈಟ್‌ಗಳ ಸಾಲು ಸಾಲು ನೀಲಿ ಲಿಂಕ್‌ಗಳು (Blue Links) ಬರೋದಿಲ್ಲ. ಅದರ ಬದಲಿಗೆ ಗೂಗಲ್‌ನ ಹೊಸ 'ಎಐ ಓವರ್‌ವ್ಯೂ' (AI Overviews) ನಾವ ಕೇಳಿದ ಪ್ರಶ್ನೆಗೆ ತಾನೇ ಡೈರೆಕ್ಟ್ ಆಗಿ ಉತ್ತರ ರೆಡಿ ಮಾಡಿ ಸರ್ಚ್ ಪೇಜ್‌ನಲ್ಲೇ ಕೊಟ್ಟುಬಿಡುತ್ತೆ!

ಬಳಕೆದಾರರು ಯಾವುದೇ ವೆಬ್‌ಸೈಟ್‌ ಒಳಗಡೆ ಹೋಗದೆಯೇ (Zero Click) ಸರ್ಚ್ ಬಾಕ್ಸ್‌ನಲ್ಲೇ ಸಂಪೂರ್ಣ ಸಾರಾಂಶವನ್ನು ಓದಿಕೊಂಡು ಸುಮ್ಮನಾಗಬಹುದು. ಹೀಗೆ ಯೂಸರ್ಸ್ ಲಿಂಕ್ ಕ್ಲಿಕ್ ಮಾಡದೇ ಹೋದ್ರೆ ವೆಬ್‌ಸೈಟ್‌ಗಳಿಗೆ ಬರುವ ವಿಸಿಟರ್ಸ್ ಸಂಖ್ಯೆ ಸಂಪೂರ್ಣ ಖಾಲಿಯಾಗುತ್ತೆ. ಇದನ್ನೇ ತಂತ್ರಜ್ಞಾನ ಲೋಕದಲ್ಲಿ ತಜ್ಞರು “ಗೂಗಲ್ ಝೀರೋ” ಅಂತ ಕರೆಯುತ್ತಿದ್ದಾರೆ. ವೆಬ್‌ಸೈಟ್‌ಗಳಿಗೆ ರೀಡರ್ಸ್ ಬರದಿದ್ದರೆ ಅವರ ಆಡ್ ರೆವೆನ್ಯೂ (ಜಾಹೀರಾತು ಆದಾಯ) ಮತ್ತು ಸಬ್‌ಸ್ಕ್ರಿಪ್ಷನ್ ದುಡ್ಡು ಸಂಪೂರ್ಣ ಬಂದ್ ಆಗಿಬಿಡುತ್ತೆ ಮಾರಾಯ್ರೇ!

ಇಂಟರ್ನೆಟ್ ಈಗ ನಾಲ್ಕು ಗೋಡೆಗಳ ಮಧ್ಯೆ ಬಂದಿ!

ಹಳೇ ಸಿಸ್ಟಮ್ ಪ್ರಕಾರ, ಜನರು ಗೂಗಲ್ ಮೂಲಕ ಬೇರೆ ಬೇರೆ ಬ್ಲಾಗ್, ಫೋರಂ ಅಥವಾ ನ್ಯೂಸ್ ಸೈಟ್‌ಗಳಿಗೆ ಸ್ವತಂತ್ರವಾಗಿ ಲಿಂಕ್ ಕ್ಲಿಕ್ ಮಾಡಿಕೊಂಡು ಓಡಾಡುತ್ತಿದ್ದರು. ಇದನ್ನು 'ಓಪನ್ ವೆಬ್ ಮಾಡೆಲ್' ಎನ್ನಲಾಗುತ್ತಿತ್ತು. ಆದರೆ ಈಗ ಗೂಗಲ್ ಕೇವಲ ನಮಗೆ ದಾರಿ ತೋರಿಸೋ ಗೇಟ್‌ವೇ ಆಗಿ ಉಳಿದಿಲ್ಲ, ಬದಲಿಗೆ ತಾನೇ ಎಲ್ಲವನ್ನೂ ಮಾಡೋ 'ಎಐ ಅಸಿಸ್ಟೆಂಟ್' ಆಗಿ ಬದಲಾಗಿದೆ. ಇದು ಇಡೀ ಇಂಟರ್ನೆಟ್ ಲೋಕವನ್ನು ಒಂದು ನಿರ್ದಿಷ್ಟ ಟೆಕ್ ಕಂಪನಿಯ ನಾಲ್ಕು ಗೋಡೆಗಳ ಮಧ್ಯೆ ಬಂದಿಡುತ್ತಿದೆ ಅನ್ನೋ ಭಾರಿ ಟೀಕೆಗಳು ಕೇಳಿಬರುತ್ತಿವೆ.

ಗೂಗಲ್ ಬೇಡಪ್ಪಾ ಅಂತ ಬೇರೆ ಕಡೆ ಓಡ್ತಿರೋ ನೆಟ್ಟಿಗರು!

ಗೂಗಲ್‌ನ ಈ ಅತಿಯಾದ ಎಐ ಕಿರಿಕಿರಿಯಿಂದ ಬೇಸತ್ತಿರುವ ಕೆಲವು ಸ್ಮಾರ್ಟ್ ಯೂಸರ್ಸ್ ಮತ್ತು ಬ್ಲಾಗರ್ಸ್ ಈಗ ಗೂಗಲ್ ಬಿಟ್ಟು ಬೇರೆ ಸೇಫ್ ಸರ್ಚ್ ಇಂಜಿನ್‌ಗಳ ಕಡೆ ಮುಖ ಮಾಡುತ್ತಿದ್ದಾರೆ.

ಡಕ್ ಡಕ್ ಗೋ (DuckDuckGo): ಇಲ್ಲಿ ನಿಮ್ಮ ಡೇಟಾವನ್ನು ಯಾರೂ ಟ್ರ್ಯಾಕ್ ಮಾಡಲ್ಲ, ಫುಲ್ ಪ್ರೈವಸಿ ಸಿಗುತ್ತೆ.

ಕಾಗಿ (Kagi): ಯಾವುದೇ ಜಾಹೀರಾತುಗಳ ಕಿರಿಕಿರಿ ಇರಲ್ಲ, ಇದೊಂದು ಪ್ರೀಮಿಯಂ ಸಬ್‌ಸ್ಕ್ರಿಪ್ಷನ್ ಸರ್ಚ್ ಇಂಜಿನ್.

ಸ್ಟಾರ್ಟ್‌ಪೇಜ್ (Startpage) ಮತ್ತು ಬ್ರೇವ್ (Brave): ಇಲ್ಲಿ ನಮಗೆ ಬೇಡ ಅನ್ಸಿದ್ರೆ ಎಐ ಸಾರಾಂಶಗಳನ್ನು ಸಂಪೂರ್ಣವಾಗಿ ಆಫ್ ಮಾಡಿ ಇಡೋ ಆಪ್ಷನ್ ಇದೆ.

ಹಳೇ ಗೂಗಲ್ ಸ್ಟೈಲ್ ತರೋಕೆ ಇಲ್ಲಿದೆ ಒಂದು ಮಸ್ತ್ ಟ್ರಿಕ್!

ನಿಮಗೂ ಗೂಗಲ್‌ನ ಈ ಎಐ ಉತ್ತರಗಳು ಬೇಡ, ಹಳೇ ತರಹ ಬರೀ ಲಿಂಕ್‌ಗಳೇ ಬರಬೇಕು ಅನ್ಸಿದ್ರೆ ನೆಟ್ಟಿಗರು ಒಂದು ಸೂಪರ್ ಐಡಿಯಾ ಹುಡುಕಿದ್ದಾರೆ. ನೀವು ಗೂಗಲ್‌ನಲ್ಲಿ ಏನನ್ನಾದರೂ ಸರ್ಚ್ ಮಾಡಿದಾಗ, ಆ ಸರ್ಚ್ ಲಿಂಕ್‌ನ ಕೊನೆಯಲ್ಲಿ ‘&udm=14’ ಅನ್ನೋ ಕೋಡ್ ಅನ್ನು ಸೇರಿಸಿದರೆ ಸಾಕು, ಎಐ ಓವರ್‌ವ್ಯೂ ಕಣ್ಮರೆಯಾಗಿ ಹಳೆಯ ಶೈಲಿಯ ಅಸಲಿ ರಿಸಲ್ಟ್ ನಿಮ್ಮ ಕಣ್ಣ ಮುಂದೆ ಪ್ರತ್ಯಕ್ಷವಾಗುತ್ತೆ!

ಏನೇ ಆದ್ರೂ, ಗೂಗಲ್ ತಂದಿರೋ ಈ ಎಐ ಬದಲಾವಣೆ ಸಣ್ಣ ಸಣ್ಣ ವೆಬ್‌ಸೈಟ್ ಮಾಲೀಕರ ಹೊಟ್ಟೆಗೆ ಹೊಡೆಯುತ್ತಿರುವುದಂತೂ ಕಹಿ ಸತ್ಯ. ಮುಂದಿನ ದಿನಗಳಲ್ಲಿ ಇಂಟರ್ನೆಟ್ ಓದುಗರ ಜಗತ್ತು ಇನ್ಯಾವ ಕಡೆ ತಿರುಗುತ್ತೆ ಅನ್ನೋದನ್ನು ಕಾದುನೋಡಬೇಕು.

Latest News