Feb 16, 2026 Languages : ಕನ್ನಡ | English

ಕಳ್ಳತನಕ್ಕೆ ಬಂದವನು : ಮದ್ಯದ ಅಮಲಿನಲ್ಲಿ ಮನೆಯಲ್ಲೇ ನಿದ್ದೆಗೆ ಜಾರಿದ ಕಿಲಾಡಿ ಕಳ್ಳ!!

ಇದು ಸಿನೆಮಾ ಕಥೆಯಲ್ಲ, ಗೌರಿಬಿದನೂರಿನಲ್ಲಿ ನಡೆದ ಅಪ್ಪಟ ಸತ್ಯ ಘಟನೆ. ಕಳ್ಳತನ ಮಾಡಲು ಮನೆಗೆ ನುಗ್ಗಿದ ಕಳ್ಳನೊಬ್ಬ, ಕದ್ದ ಮಾಲುಗಳೊಂದಿಗೆ ಪರಾರಿಯಾಗುವ ಬದಲು ಅಲ್ಲೇ ನಿದ್ದೆಗೆ ಜಾರಿದ ವಿಚಿತ್ರ ಘಟನೆ ಈಗ ಜಿಲ್ಲೆಯಾದ್ಯಂತ ತಮಾಷೆಯ ವಿಷಯವಾಗಿದೆ. ಗೌರಿಬಿದನೂರಿನ ಹಳೆ ಆರ್.ಟಿ.ಓ ಕಚೇರಿ ಸಮೀಪ ಪ್ರೇಮನಾಥ್ ಎಂಬುವವರ ಮನೆಯಿದೆ. ಪ್ರೇಮನಾಥ್ ಅವರು ಕೆಲಸದ ನಿಮಿತ್ತ ಹೈದರಾಬಾದ್‌ಗೆ ತೆರಳಿದ್ದನ್ನು ಗಮನಿಸಿದ್ದ ಇಬ್ಬರು ಖದೀಮರು, ಮನೆ ಲೂಟಿ ಮಾಡಲು ಸ್ಕೆಚ್ ಹಾಕಿದ್ದರು. ಅದರಂತೆ ರಾತ್ರಿ ವೇಳೆ ಮನೆಯ ಮೇಲ್ಛಾವಣಿಯ ಶೀಟ್ ಕೊರೆದು ಹದ್ದಿನಂತೆ ಒಳ ನುಗ್ಗಿದ್ದಾರೆ.

ಚಿನ್ನದ ಒಡವೆ ಕದ್ದ ಕಳ್ಳ ಪರಾರಿಯಾದರೆ, ಮತ್ತೊಬ್ಬ ಕಳ್ಳ ನಿದ್ದೆಯಲ್ಲೇ ಸಿಕ್ಕಿಬಿದ್ದ
ಚಿನ್ನದ ಒಡವೆ ಕದ್ದ ಕಳ್ಳ ಪರಾರಿಯಾದರೆ, ಮತ್ತೊಬ್ಬ ಕಳ್ಳ ನಿದ್ದೆಯಲ್ಲೇ ಸಿಕ್ಕಿಬಿದ್ದ

ಮನೆಯೊಳಗೆ ನುಗ್ಗಿದ ಇಬ್ಬರು ಕಳ್ಳರ ಪೈಕಿ ಒಬ್ಬ ಅತ್ಯಂತ ಚಾಣಾಕ್ಷತನದಿಂದ ಬೀರು ಒಡೆದು ಚಿನ್ನದ ಒಡವೆ ಹಾಗೂ ನಗದು ಹಣವನ್ನು ದೋಚಿದ್ದಾನೆ. ಆತ ದೋಚಿದ ಮಾಲಿನೊಂದಿಗೆ ಅಲ್ಲಿಂದ ಚಮಕ್ ಕೊಟ್ಟು ಪರಾರಿಯಾಗಿದ್ದಾನೆ. ಆದರೆ, ಆತನ ಜೊತೆಗಿದ್ದ ದೇವರಾಜ್ ಎಂಬ ಕಳ್ಳನ ಕಥೆಯೇ ಬೇರೆ. ಆತ ಫುಲ್ ಕುಡಿದ ಅಮಲಿನಲ್ಲಿದ್ದ. ಕಳ್ಳತನ ಮಾಡುವ ಗಡಿಬಿಡಿಯಲ್ಲೂ ಆತನಿಗೆ ನಿದ್ದೆಯ ಅಮಲು ಏರಿತ್ತು. ಮನೆಯಲ್ಲಿದ್ದ ಬೆಚ್ಚಗಿನ ಹಾಸಿಗೆ ಕಂಡವನೇ, ಕಳ್ಳತನದ ವಿಚಾರವನ್ನೇ ಮರೆತು ಅಲ್ಲಿಯೇ ಮಲಗಿ ನಿದ್ದೆಗೆ ಜಾರಿದ್ದಾನೆ.

ಮನೆಯಲ್ಲಿ ಸಂಶಯಾಸ್ಪದ ಓಡಾಟ ಕಂಡ ಸ್ಥಳೀಯರು ಕೂಡಲೇ ಮಾಲೀಕ ಪ್ರೇಮನಾಥ್ ಅವರಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದ್ದರು. ಸುದ್ದಿ ಕೇಳಿ ಗಾಬರಿಯಿಂದ ಹೈದರಾಬಾದ್‌ನಿಂದ ಓಡಿ ಬಂದ ಪ್ರೇಮನಾಥ್, ಬೆಳಿಗ್ಗೆ ಮನೆಯ ಬಾಗಿಲು ತೆರೆದು ನೋಡಿದಾಗ ದೃಶ್ಯ ಕಂಡು ದಂಗಾಗಿದ್ದಾರೆ. ಮನೆಯಲ್ಲಿ ಅಸ್ತವ್ಯಸ್ತವಾಗಿದ್ದ ವಸ್ತುಗಳ ನಡುವೆ ಕಳ್ಳ ದೇವರಾಜ್ ಮಾತ್ರ ಏನೂ ತಿಳಿಯದವನಂತೆ ಗಾಢ ನಿದ್ರೆಯಲ್ಲಿರುತ್ತಾನೆ.

ತಕ್ಷಣ ಎಚ್ಚೆತ್ತ ಸ್ಥಳೀಯರು ನಿದ್ದೆಯಲ್ಲಿದ್ದ ಕಳ್ಳನನ್ನು ಎಬ್ಬಿಸಿ ಸರಿಯಾದ 'ಉಪಚಾರ' ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ನಡೆಸಿದಾಗ ಈತ ನದಿದಡ ವಾರ್ಡ್‌ನಲ್ಲಿ ಬಟ್ಟೆ ಐರನ್ ಮಾಡುವ ಕೆಲಸ ಮಾಡುತ್ತಿದ್ದ ದೇವರಾಜ್ ಎಂದು ತಿಳಿದುಬಂದಿದೆ. "ಕುಡಿದ ಅಮಲಿನಲ್ಲಿ ಏನ್ ಮಾಡ್ತಿದ್ದೀನಿ ಅಂತಲೇ ಗೊತ್ತಾಗಲಿಲ್ಲ" ಎಂದು ಈತ ಪೊಲೀಸರ ಮುಂದೆ ಗೊಣಗುತ್ತಿದ್ದ ಎನ್ನಲಾಗಿದೆ.

ಪ್ರಸ್ತುತ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಸ್ಕೇಪ್ ಆದ ಮತ್ತೊಬ್ಬ ಕಳ್ಳನಿಗಾಗಿ ಬಲೆ ಬೀಸಿದ್ದಾರೆ. ಒಟ್ಟಿನಲ್ಲಿ, "ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ" ಎನ್ನುವಂತೆ, ಈ ಕಳ್ಳನ ನಿದ್ದೆ ಆತನನ್ನು ಕಂಬಿ ಎಣಿಸುವಂತೆ ಮಾಡಿದೆ.

Latest News